ನವದೆಹಲಿ: ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ವೀಡಿಯೋದಲ್ಲಿ ಮಕ್ಕಳು ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಎಂದು ಆರೋಪಿಸಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಮೂರು ದಿನಗಳಲ್ಲಿ ಇದಕ್ಕೆ ಉತ್ತರಿಸುವಂತೆ ಪ್ರಿಯಾಂಕಾಗೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ಚುನಾವಣಾ ಆಯೋಗಕ್ಕೂ ಸಹ ದೂರು ಸಲ್ಲಿಸಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ವೀಡಿಯೋದಲ್ಲಿ ಬಳಸಲಾಗಿರುವ ಮಕ್ಕಳ ಹೆಸರು ಮತ್ತು ವಿಳಾಸ ಹಾಗೂ ಆ ಮಕ್ಕಳು ಘೋಷಣೆ ಕೂಗಿದ ಸ್ಥಳದ ವಿವರ ನೀಡುವಂತೆಯೂ ತಿಳಿಸಿದೆ.
ಇದರೊಂದಿಗೆ ಆಗಸ್ಟ್ 4, 2014ರಲ್ಲಿ ಬಾಂಬೆ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿರುವ ಆಯೋಗವು, ಮಕ್ಕಳನ್ನು ಚುನಾವಣೆ ಪ್ರಚಾರಗಳಲ್ಲಿ ಬಳಸಿಕೊಳ್ಳಬಾರದು ಎಂದು ಹೇಳಿರುವುದನ್ನು ಒತ್ತಿ ಹೇಳಿದೆ.