ಪೌರತ್ವ ತಿದ್ದುಪಡಿ ಮಸೂದೆ-2019: ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದ BJP

ಬಿಜೆಪಿ ಜಾರಿಗೊಳಿಸಿರುವ ವಿಪ್ ನಲ್ಲಿ " ಡಿಸೆಂಬರ್ 9 ರಿಂದ ಡಿಸೆಂಬರ್ 11ರವರೆಗೆ ಲೋಕಸಭೆಯಲ್ಲಿ ಕೆಲ ಮಹತ್ವದ ಮಸೂದೆಗಳನ್ನು ಮಂಡಿಸಿ ಅವುಗಳ ಮೇಲೆ ಚರ್ಚೆ ನಡೆಸಿ ಅನುಮೋದನೆ ಪಡೆಯಲಾಗುತ್ತಿದ್ದು, ಈ ವೇಳೆ ಪಕ್ಷದ ಎಲ್ಲ ಸಂಸದರು ಲೋಕಸಭೆಯಲ್ಲಿ ಹಾಜರಿರಲು ತನ್ಮೂಲಕ ಸೂಚಿಸಲಾಗುತ್ತದೆ" ಎನ್ನಲಾಗಿದೆ.

Last Updated : Dec 9, 2019, 12:06 PM IST
ಪೌರತ್ವ ತಿದ್ದುಪಡಿ ಮಸೂದೆ-2019: ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದ BJP title=

ನವದೆಹಲಿ:ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ಲೋಕಸಭೆಯಲ್ಲಿ ತನ್ನ ಎಲ್ಲಾ ಶಾಸಕರಿಗೆವಿಪ್ ಜಾರಿಗೊಳಿಸಿದ್ದು, ಡಿಸೆಂಬರ್ 9 ರಿಂದ ಡಿಸೆಂಬರ್ 11ರವರೆಗೆ ಲೋಕಸಭೆಯಲ್ಲಿ ಹಾಜರಿರಲು ಸೂಚಿಸಿದೆ. ಈ ವೇಳೆ ಕೆಲ ಮಹತ್ವದ ಮಸೂದೆಗಳನ್ನು ಮಂಡಿಸಿ, ಅವುಗಳ ಮೇಲೆ ಚರ್ಚೆನಡೆಸಿ, ಕೆಳಮನೆಯ ಅನುಮೋದನೆ ಪಡೆಯಲಾಗುವುದು ಎಂದು ವಿಪ್ ನಲ್ಲಿ ಹೇಳಲಾಗಿದೆ.

ವಿಪ್ ನಲ್ಲಿ ಬಿಜೆಪಿ ಸದಸ್ಯರಿಗೆ ಸದನದಲ್ಲಿ ಹಾಜರಿರಲು ಹಾಗೂ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ಸಮರ್ಥನೆಯನ್ನು ನೀಡಲು ಸದಸ್ಯರಿಗೆ ಸೂಚಿಸಲಾಗಿದೆ. ಸೋಮವಾರ ಮಂಡಿಸಲಾಗುವ ಕೆಲ ಮಸೂದೆಗಳಲ್ಲಿ ಪೌರತ್ವ(ತಿದ್ದುಪಡಿ) ಮಸೂದೆ 2019 ಕೂಡ ಶಾಮೀಲಾಗಿದೆ. ಈ ಮಸೂದೆಯಡಿ ಪಾಕಿಸ್ತಾನ, ಅಫ್ಘಾನಿಸ್ಥಾನ, ಹಾಗೂ ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತ ಸೇರಿರುವ ನಿರಾಶ್ರಿತ ಹಿಂದೂ, ಕ್ರಿಶ್ಚಿಯನ್, ಸಿಖ್, ಪಾರಸಿ, ಜೈನ ಹಾಗೂ ಬೌದ್ಧ ಧರ್ಮೀಯರಿಗೆ ಭಾರತೀಯ ನಾಗರಿಕತ್ವ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ. ಇದಲ್ಲದೆ ಗೃಹ ಸಚಿವ ಅಮಿತ್ ಶಾ ಸೋಮವಾರ ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ 2019ನ್ನು ಸಹ ಚರ್ಚೆಗೆ ತರುವ ಸಾಧ್ಯತೆ ಇದೆ. ಇನ್ನೊಂದೆಡೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಆಂಟಿ ಮ್ಯಾರಿಟೈಮ್ ಪೈರಸಿ ಮಸೂದೆ-2019ನ್ನು ಸಹ ಮಂಡಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದೆ ಮಸೂದೆ
ಏತನ್ಮಧ್ಯೆ ಮಧ್ಯಾಹ್ನ 12ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಪೌರತ್ವ(ತಿದ್ದುಪಡಿ) ಮಸೂದೆ 2019(CAB)ಯನ್ನು ಮಂಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಮಸೂದೆಯನ್ನು ಲೋಕಸಭೆ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ. ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ಈ ಮಸೂದೆಗೆ ಈಗಾಗಲೇ ವಿರೋಧ ಪಕ್ಷಗಳು ಮತ್ತು ಕೆಲ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಳೆದ ಬುಧವಾರ ಕೇಂದ್ರ ಸಚಿವ ಸಂಪುಟ ಈ ಮಸೂದೆಗೆ ಅನುಮತಿ ನೀಡಿದೆ. ಸಂಪುಟ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿರುವ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೆಕರ್, ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಭಾರತದ ಹಿತಾಸಕ್ತಿಗಳನ್ನು ಗಮನದಟ್ಟುಕೊಳ್ಳಲಾಗುವುದು ಎಂದು ಹೇಳಿದ್ದರು. ಈ ಕುರಿತು ಮಾತನಾಡಿದ್ದ ಅವರು "ಮಸೂದೆಯ ನಿಬಂಧನೆಗಳನ್ನು ಘೋಷಿಸಿದಾಗ, ಅದನ್ನು ಈಶಾನ್ಯ ಮತ್ತು ಅಸ್ಸಾಂ ಸೇರಿದಂತೆ ಇಡೀ ಭಾರತದಲ್ಲಿ ಸ್ವಾಗತಿಸಲಾಗುವುದು ಎಂಬುದು ನನಗೆ ವಿಶ್ವಾಸವಿದೆ" ಎಂದಿದ್ದರು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇನ್ನರ್ ಲೈನ್ ಪರ್ಮಿಟ್(ILP) ವ್ಯವಸ್ಥೆ ಇರುವ ಕಾರಣ ಅದನ್ನು CAB ಪರದಿಯ ಹೊರಗಿಡಲಾಗಿದೆ. ಈ ಕಾರಣದಿಂದ 2019ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿತ್ತು. ILP, ಭಾರತ ಸರ್ಕಾರದಿಂದ ಜಾರಿಗೊಳಿಸಲಾಗಿರುವ ಅಧಿಕೃತ ಪ್ರವಾಸಿ ದಾಖಲೆಯಾಗಿದೆ. ಇದರಡಿ ಈ ಪ್ರಾಂತ್ಯಗಳಲ್ಲಿ ಸೀಮಿತ ಅವಧಿಯವರೆಗೆ ಮಾತ್ರ ಭಾರತದ ನಾಗರಿಕರಿಗೆ ಪ್ರವಾಸ ಕೈಗೊಳ್ಳುವ ಅನುಮತಿ ಇದೆ. ಮೂಲಗಳ ಪ್ರಕಾರ ರಾಜಕೀಯವಾಗಿ ಅತೀ ಸೂಕ್ಷ್ಮವಾಗಿರುವ ಈ ಮಸೂದೆಯನ್ನು ಅಸ್ಸಾಂ, ಮೆಘಾಲಯ ಹಾಗೂ ತ್ರಿಪುರಾ ರಾಜ್ಯಗಳ ಬುಡಕಟ್ಟು ಪ್ರದೇಶಗಳನ್ನು ಹೊರಗಿಡಲಾಗಿದೆ. ಈ ಪ್ರದೇಶಗಳಲ್ಲಿ ಸಂವಿಧಾನದ 6ನೆ ಅನುಚ್ಛೇದದಡಿ ಪರಿಷತ್ತು ಹಾಗೂ ಜಿಲ್ಲೆಗಳನ್ನು ರಚಿಸಲಾಗಿದೆ.

ಹೀಗಾಗಿ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ ದೇಶ ಸೇರಿರುವ ಹಿಂದೂ, ಕ್ರಿಶ್ಚಿಯನ್, ಸಿಖ್, ಪಾರಸಿ, ಜೈನ ಹಾಗೂ ಬೌದ್ಧ ಧರ್ಮೀಯರಿಗೆ ಪೌರತ್ವ ತಿದ್ದುಪಡಿ ಮಸೂದೆ 2019 ರ ಅಡಿ ಭಾರತದ ನಾಗರಿಕತ್ವ ನೀಡಲು ಉದ್ದೇಶಿಸಲಾಗಿದ್ದು, ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಇದೊಂದು ಅಸಂವಿಧಾನಿಕ ಕ್ರಮ ಎಂದು ಹೇಳಿದೆ.

Trending News