ಪ್ರಧಾನಿ ಮೋದಿ, ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ ಬಿಎಸ್‌ವೈ; ಮಹತ್ವದ ಚರ್ಚೆ

ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರನ್ನ ಭೇಟಿ ಮಾಡಿದ ಸಿಎಂ ಬಿಎಸ್ವೈ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.  

Updated: Aug 6, 2019 , 05:17 PM IST
ಪ್ರಧಾನಿ ಮೋದಿ, ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ ಬಿಎಸ್‌ವೈ; ಮಹತ್ವದ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 10 ದಿನಗಳೇ ಕಳೆದರೂ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ. ಮೂಲಗಳ ಪ್ರಕಾರ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮ್ಯಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗಿದೆ. ಏತನ್ಮಧ್ಯೆ, ಇನ್ನೂ ರಾಜ್ಯ ಸಚಿವ ಸಂಪುಟ ರಚನೆಯಾಗದ ಬಗ್ಗೆ ವಿಪಕ್ಷಗಳ ತೀವ್ರ ಟೀಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ದೆಹಲಿಯಲ್ಲಿ ಪಕ್ಷದ ಹೈಕಮ್ಯಾಂಡ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. 

ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರನ್ನ ಭೇಟಿ ಮಾಡಿದ ಸಿಎಂ ಬಿಎಸ್ವೈ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.  ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಪ್ರಹಾದ್​ ಜೋಶಿ ಹಾಗೂ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಹಾಗೂ ಜಗದೀಶ್​ ಶೆಟ್ಟರ್​ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. 

ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಭೇಟಿಯಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಒಳಗೊಂಡಂತೆ ಗ್ರಾಮೀಣಾಭಿವೃದ್ಧಿ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರು. 

ಈ ವೇಳೆ ಬಿಜೆಪಿ ಶಾಸಕ ಆರ್​ ಅಶೋಕ್​, ರಾಜ್ಯಸಭೆ ಸದಸ್ಯ ಪ್ರಭಾಕರ್​ ಕೋರೆ, ಸಂಸದ ಜಿಎಂ ಸಿದ್ದೇಶ್ವರ್​​ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಮಧ್ಯೆ, ಬೆಳೆವಿಮೆ ನೋಂದಣಿ ಅವಧಿ ವಿಸ್ತರಿಸುವಂತೆ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್​​​ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಸಲ್ಲಿಸಿದರು. ಈ ವೇಳೆ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ, ಶಾಸಕರಾದ ಜಗದೀಶ್ ಶೆಟ್ಟರ್ ಮತ್ತು ಆರ್. ಅಶೋಕ್ ಉಪಸ್ಥಿತರಿದ್ದರು.