ಜೈಪುರ: ಇದೇ ಡಿಸೆಂಬರ್ 7 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ.
'ಜನ್ ಘೋಷಣಾ ಪತ್ರ' ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ರೈತರ ಸಾಲ ಮನ್ನಾ ಹಾಗೂ ಯುವಕರಿಗೆ ನಿರುದ್ಯೋಗ ಭತ್ಯೆ, ಉಚಿತ ಕೃಷಿ ಸಲಕರಣೆ ವಿತರಣೆ ಸೇರಿದಂತೆ ಹಲವು ಭರವಸೆಗಳನ್ನು ಮತದಾರರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಪೈಲೆಟ್, ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಕೇವಲ ದಾಖಲೆಯಲ್ಲ, ಅದು ಒಂದು ಬದ್ಧತೆ. ಈ ಭರವಸೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಲಿದೆ. ನಿರುದ್ಯೋಗಿಗಳಿಗೆ 3,500 ರೂ. ಮಾಸಿಕ ಭತ್ಯೆ, ಪರ್ತಕರ್ತರಿಗೆ ಕಾನೂನು ಭದ್ರತೆ, ರೈತರ ಸಾಲ ಮನ್ನಾ, ಜಿಎಸ್ಟಿ ವಿನಾಯಿತಿ, ವೃದ್ಧ ರೈತರಿಗೆ ಪಿಂಚಣಿಯನ್ನೂ ಸಹ ನೀಡುವ ಯೋಜನೆಯನ್ನು ಕಾಂಗ್ರೆಸ್ ಹೊಂದಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು
* ರೈತರ ಸಾಲ ಮನ್ನಾ, ವೃದ್ಧ ರೈತರಿಗೆ ಪಿಂಚಣಿ
* ನಿರುದ್ಯೋಗಿಗಳಿಗೆ 3,500 ರೂ. ಮಾಸಿಕ ಭತ್ಯೆ, ಉದ್ಯೋಗಾವಕಾಶ, ಸಾಲ ಸೌಲಭ್ಯ
* ಪರ್ತಕರ್ತರಿಗೆ ಕಾನೂನು ಭದ್ರತೆ
* ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್
* ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
* ಮಹಿಳೆಯರ ರಕ್ಷಣೆಗಾಗಿ 24x7 ಸಹಾಯವಾಣಿ
* ಗ್ರಾಮಗಳಿಗೆ ರಸ್ತೆ ಸೌಕರ್ಯ, ಉದ್ಯೋಗ ಆಧಾರಿತ ಕೈಗಾರಿಕಾ ನೀತಿ
* ಕೊಳಗೇರಿ ವಾಸಿಗಳಿಗೆ ವಸತಿ ಸೌಲಭ್ಯ
* ವಿಶೇಷ ಕ್ರೀಡಾ ನೀತಿ, ಆಡಳಿತ ನೀತಿ, ಆರ್ಥಿಕ ನೀತಿ ಜಾರಿ