ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ

ತನ್ನ ಸ್ನೇಹಿತ ಆಯೋಜಿಸಿದ್ದ ಹುಟ್ಟುಹಬ್ಬದ ಸಂತೋಷಕೂಟದ ನಂತರ ಕ್ಯಾಂಪಸ್‌ಗೆ ಮರಳಲು ಕ್ಯಾಬ್ ಕಾಯ್ದಿರಿಸಿದ ನಂತರ ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಜೆಎನ್‌ಯು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

Last Updated : Aug 6, 2019, 09:58 AM IST
ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ   title=

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿನಿಯ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರ ಎಸಗಿ, ಆಕೆಯನ್ನು ಐಐಟಿ ರಸ್ತೆ ಬಳಿ ಎಸೆದು ಹೋದ ಘಟನೆ ಶುಕ್ರವಾರ ರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದೆ. ದೆಹಲಿಯ ಪಂಚಕುಯಾನ್ ಪ್ರದೇಶದಲ್ಲಿ ತನ್ನ ಸ್ನೇಹಿತ ಆಯೋಜಿಸಿದ್ದ ಹುಟ್ಟುಹಬ್ಬದ ಸಂತೋಷಕೂಟದ ನಂತರ ಮನೆಗೆ ಮರಳಲು ಕ್ಯಾಬ್ ಹತ್ತಿದ ನಂತರ ಈ ಘಟನೆ ಸಂಭವಿಸಿದೆ ಎಂದು ಜೆಎನ್‌ಯು ವಿದ್ಯಾರ್ಥಿನಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ, ತನ್ನ ಸ್ನೇಹಿತನ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗವಹಿಸಿದ ನಂತರ, ಜೆಎನ್‌ಯುಗೆ ಮರಳಲು ಕ್ಯಾಬ್ ಕಾಯ್ದಿರಿಸಿದ್ದಾಳೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಆದರೆ ಅವಳು ಕ್ಯಾಬ್‌ಗೆ ಹತ್ತಿದ ನಂತರ, ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿ ಕ್ಯಾಂಪಸ್ ಬಳಿ ಎಸೆಯಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಚಲಿಸುವ ಕಾರಿನೊಳಗೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಐಐಟಿ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯ ಮೇಲೆ ಮಲಗಿರುವುದನ್ನು ಕಂಡ ದಾರಿಹೋಕರು, ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯ ಗುರುತಿನ ಚೀಟಿಯ ಸಹಾಯದಿಂದ ಆಕೆಯ ಗುರುತನ್ನು ಕಂಡುಹಿಡಿಯಲಾಯಿತು. ಚಿಕಿತ್ಸೆಯ ನಂತರ, ಆಕೆಯನ್ನು ಜೆಎನ್‌ಯು ಕ್ಯಾಂಪಸ್‌ಗೆ ಕರೆದೊಯ್ಯಲಾಯಿತು.

ನಂತರ ವಿದ್ಯಾರ್ಥಿಯು ಹಾಸ್ಟೆಲ್ ವಾರ್ಡನ್ ಮತ್ತು ಅವಳ ಸ್ನೇಹಿತರಿಗೆ ತನ್ನ ಸ್ಥಿತಿಯನ್ನು ವಿವರಿಸಿದ್ದು, ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಕ್ಯಾಬ್ ಬುಕಿಂಗ್ ಇರುವ ಸ್ಥಳ ಪಂಚಕುಯಾನ್ ಬಳಿಯ ಮಂದಿರ ಮಾರ್ಗವಾಗಿದ್ದರಿಂದ, ಈ ಘಟನೆಯ ಬಗ್ಗೆ ಆ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಪೊಲೀಸರ ಪ್ರಕಾರ, ರಾತ್ರಿಯ ಘಟನೆಗಳನ್ನು ವಿವರವಾಗಿ ವಿವರಿಸಲು ಸಂತ್ರಸ್ತೆಗೆ ಸಾಧ್ಯವಾಗಲಿಲ್ಲ. ಅಪರಾಧಿಗಳು ಆಕೆಗೆ ಡ್ರಗ್ಸ್ ಇಂಜೆಕ್ಟ್ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕ್ಯಾಬ್ ಒಳಗೆ ಚಾಲಕನನ್ನು ಹೊರತುಪಡಿಸಿ ಬೇರೆ ಯಾರಾದರೂ ಇದ್ದರೇ ಎಂಬುದನ್ನು ಹೇಳಲೂ ಕೂಡ ಆಕೆಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪೊಲೀಸರು ಈ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ತುಣುಕನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

Trending News