Makara Sankranti 2023: “ಹಬ್ಬವೊಂದು ನಾಮ ಹಲವು”: ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ-ವಿಭಿನ್ನತೆ ಹೇಗಿದೆ ಗೊತ್ತಾ?

Makara Sankranti 2023: ಪ್ರತಿ ವರ್ಷ ಜನವರಿ 14 ಅಥವಾ 15 ರಂದು (ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ) ಈ ಹಬ್ಬವನ್ನು ಸೂರ್ಯನು ಮಕರ ಸಂಕ್ರಾಂತಿ ಅಥವಾ ಮಕರ ಹಂತಕ್ಕೆ ಪ್ರವೇಶಿಸಿದಾಗ ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನವನ್ನು ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗಿದೆ.

Written by - Bhavishya Shetty | Last Updated : Jan 14, 2023, 02:50 PM IST
    • ಪ್ರತಿ ವರ್ಷ ಮಕರ ಸಂಕ್ರಾಂತಿಯ ಸುಗ್ಗಿಯ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಾರೆ
    • ಅನೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ
    • ಈ ದಿನವನ್ನು ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗಿದೆ
Makara Sankranti 2023: “ಹಬ್ಬವೊಂದು ನಾಮ ಹಲವು”: ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ-ವಿಭಿನ್ನತೆ ಹೇಗಿದೆ ಗೊತ್ತಾ?  title=
Makara Sankranti 2023

Makara Sankranti 2023: ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ದೇಶದ ಅನೇಕ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಆಂಧ್ರಪ್ರದೇಶದಲ್ಲಿ ಭೋಗಿ, ಪಂಜಾಬ್‌ನ ಲೋಹ್ರಿ, ರಾಜಸ್ಥಾನದ ಸಂಕ್ರಾತ್, ಅಸ್ಸಾಂನ ಬಿಹು, ಒಡಿಶಾದ ಮಕರ ಸಂಕ್ರಾಂತ್ ಹೀಗೆ ಅನೇಕ ಹೆಸರುಗಳಲ್ಲಿ ಒಂದು ಹಬ್ಬವನ್ನು ಸಂಭ್ರಮಿಸಲಾಗುತ್ತದೆ.  

ಭಾರತೀಯ ರಾಜ್ಯಗಳು ತಮ್ಮ ಭೌಗೋಳಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳ ನಡುವೆಯೂ ಪ್ರತಿವರ್ಷ ಮಕರ ಸಂಕ್ರಾಂತಿಯ ಸುಗ್ಗಿಯ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಾರೆ ಎಂಬುದು ವಿಶೇಷ. ಚಳಿಗಾಲವು ವಿದಾಯ ಹೇಳಲು ಸಿದ್ಧವಾಗುವ ಸಮಯದಲ್ಲಿ ವಸಂತಕಾಲದ ಆರಂಭವನ್ನು ಈ ದಿನದಂದು ಆದರದಿಂದ ಬರಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Sankranti 2023: ಇನ್ನೆರಡು ದಿನದಲ್ಲಿ ಈ 5 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ! ಸಂಕ್ರಾಂತಿಯಂದು ಮಾಡಿ ಈ ಪರಿಹಾರ

ಪ್ರತಿ ವರ್ಷ ಜನವರಿ 14 ಅಥವಾ 15 ರಂದು (ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ) ಈ ಹಬ್ಬವನ್ನು ಸೂರ್ಯನು ಮಕರ ಸಂಕ್ರಾಂತಿ ಅಥವಾ ಮಕರ ಹಂತಕ್ಕೆ ಪ್ರವೇಶಿಸಿದಾಗ ಆಚರಿಸಲಾಗುತ್ತದೆ. ಆದ್ದರಿಂದ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನವನ್ನು ಸೂರ್ಯ ದೇವರ ಆರಾಧನೆಗೆ ಸಮರ್ಪಿಸಲಾಗಿದೆ.

ವರ್ಣರಂಜಿತ ಗಾಳಿಪಟಗಳು ಆಕಾಶದಲ್ಲಿ ತೇಲಾಡುತ್ತಾ, ವಿವಿಧ ತಿಂಡಿ ತಿನಿಸುಗಳು ಮನೆಯೊಳಗೆ ತಯಾರಾಗುತ್ತಿರುವಾಗ ಹಬ್ಬದ ಅಬ್ಬರ ಮೈತಳೆಯುತ್ತದೆ. ಭಾರತೀಯ ರಾಜ್ಯಗಳು ಪ್ರಾದೇಶಿಕ ತಿರುವುಗಳೊಂದಿಗೆ ಹಬ್ಬವನ್ನು ಹೇಗೆ ಆಚರಿಸುತ್ತವೆ ಎಂಬುದು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕರ್ನಾಟಕ: ಕರುನಾಡಿನಲ್ಲಿ ಎಳ್ಳು-ಬೆಲ್ಲದ ಹಬ್ಬವೆಂದೇ ಸಂಕ್ರಾಂತಿ ಪ್ರಸಿದ್ಧಿ ಪಡೆದಿದೆ. ವರ್ಷದ ಮೊದಲ ಸುಗ್ಗಿ ಹಬ್ಬದಂದು ಎಳ್ಳು-ಬೆಲ್ಲವನ್ನು ಎಲ್ಲೆಡೆ ಹಂಚಿ, ಸಂತಸ ಹರಡೋಣ ಎಂಬ ಸಂದೇಶ ಸಾರುವುದು ಈ ಹಬ್ಬದ ಉದ್ದೇಶ. ಈ ಹಬ್ಬಕ್ಕೆ ಎಳ್ಳು ಬೆಲ್ಲವನ್ನು ನೀಡುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಭೂಮಿ ಮೇಲಿರುವ ಸಕಲ ಜೀವ ರಾಶಿಗಳ ಆರೋಗ್ಯಕ್ಕೆ ಸೂರ್ಯನ ಬೆಳಕು ಅವಶ್ಯಕವಾಗಿರುತ್ತದೆ. ಇನ್ನು ಈ ದಿನದಂದು ಸೂರ್ಯನು ತನ್ನ ಪಥವನ್ನು ಬದಲಾಯಿಸುತ್ತಾನೆ. ಇಂದು ಮೈಕೊರೆಯುವ ಚಳಿ ಜನರನ್ನು ಕಾಡುತ್ತದೆ. ಇನ್ನೊಂದೆಡೆ ದಕ್ಷಿಣಾಯಣದಿಂದ ಉತ್ತರಾಯಣದೆಡೆಗೆ ಸೂರ್ಯ ಚಲಿಸುವಾಗ ತೀಕ್ಷ್ಣವಾದ ಬೆಳಕು ಭೂಮಿಯನ್ನು ಸೋಕಿತ್ತದೆ. ಈ ಸಂದರ್ಭದಲ್ಲಿ ಅನಾರೋಗ್ಯಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅವುಗಳಿಗೆ ಪರಿಹಾರವಾಗಿ ಎಳ್ಳು ಬೆಲ್ಲ ಕೆಲಸ ಮಾಡುತ್ತದೆ. ಹೀಗಾಗಿ ಸಂಕ್ರಾಂತಿಯಂದು ಎಳ್ಳು ಬೆಲ್ಲವನ್ನು ನೀಡಲಾಗುತ್ತದೆ.

ಲೋಹ್ರಿ (ಪಂಜಾಬ್):ಪಂಜಾಬ್, ಹರಿಯಾಣ, ಜಮ್ಮು ಮತ್ತು ಹಿಮಾಚಲ ಪ್ರದೇಶದಲ್ಲಿ ಮಕರ ಸಂಕ್ರಾಂತಿಯ ಪ್ರಾದೇಶಿಕ ಹೆಸರಾದ ಮಾಘಿಗೆ ಒಂದು ದಿನ ಮುಂಚಿತವಾಗಿ ಲೋಹ್ರಿಯನ್ನು ಆಚರಿಸಲಾಗುತ್ತದೆ. ಪಂಜಾಬ್‌ನಲ್ಲಿ ಈ ದಿನ ಅಧಿಕೃತ ರಜಾದಿನವಾಗಿದೆ. ರಾಜ್ಯದ ಅನೇಕ  ಭಾಗಗಳಲ್ಲಿ, ಮಕ್ಕಳು ಮನೆ ಮನೆಗೆ ತೆರಳಿ ಹಾಡುಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಆ ಮನೆಯವರು ಸಿಹಿತಿಂಡಿಗಳನ್ನು ನೀಡಿ ಸತ್ಕರಿಸುತ್ತಾರೆ. ಕಲ್ಲು ಸಕ್ಕರೆ, ಬೆಲ್ಲ, ಕಡಲೆಕಾಳು, ಪಾಪ್‌ಕಾರ್ನ್ ಮತ್ತು ಎಳ್ಳು ಮುಂತಾದ ತಿನಿಸುಗಳನ್ನು ಸೇವಿಸಿ ಮಕ್ಕಳು ಮನೆಗೆ ಹಿಂತಿರುಗುತ್ತಾರೆ. ಸಂಜೆಯ ವೇಳೆ ಕುಟುಂಬದ ಸದಸ್ಯರೆಲ್ಲಾ ಸೇರಿ, ಕ್ಯಾಂಪ್ ಫೈರ್ ನಿರ್ಮಾಣ ಮಾಡಿ ಅದರ ಸುತ್ತಾ ಕುಣಿಯುತ್ತಾ ಹಾಡುತ್ತಾ ಹಬ್ಬವನ್ನು ಸಂಭ್ರಮಿಸುತ್ತಾರೆ.

ಸಂಕ್ರಾಂತ್ (ರಾಜಸ್ಥಾನ): ಸಂಕ್ರಾಂತ್ ಅಥವಾ ಸಂಕ್ರಾಂತಿ ರಾಜಸ್ಥಾನದಲ್ಲಿ ಒಂದು ಪ್ರಮುಖ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಜನರು 'ಸಂಕ್ರಾಂತ್ ಭೋಜ್' ಅನ್ನು ಆಯೋಜಿಸುತ್ತಾರೆ. ಈ ವಿಶೇಷ ಹಬ್ಬದ ಊಟದಲ್ಲಿ ಸ್ನೇಹಿತರು ಮತ್ತು ಕುಟುಂಬವನ್ನು ಔತಣಕ್ಕೆ ಆಹ್ವಾನಿಸುತ್ತಾರೆ. ವಿಶೇಷ ರಾಜಸ್ಥಾನಿ ಖಾದ್ಯಗಳು ಮತ್ತು ಸಿಹಿತಿಂಡಿಗಳಾದ ಗಜಕ್, ಘೇವರ್, ಫೀನಿ, ತಿಲ-ಲಡ್ಡೂ ಮತ್ತು ಪುವಾವನ್ನು ಮನೆಗಳಲ್ಲಿ ತಯಾರಿಸಲಾಗುತ್ತದೆ. ಈ ದಿನದಂದು ರಾಜಸ್ಥಾನಿ ಮಹಿಳೆಯರು 13 ವಿವಾಹಿತ ಮಹಿಳೆಯರಿಗೆ ಮನೆಯ ವಸ್ತುಗಳನ್ನು ದಾನ ನೀಡಬೇಕು.

ಮಕರ ಸಂಕ್ರಾಂತಿ (ಒಡಿಶಾ): ಒಡಿಶಾದ ಜನರು ಈ ದಿನ ಮಕರ ಚೌಲವನ್ನು (ಅಕ್ಕಿ, ಬಾಳೆಹಣ್ಣು, ಹಾಲು, ಮೊಸರು, ಬೆಲ್ಲ ಮತ್ತು ಗಿಣ್ಣುಗಳಿಂದ ಮಾಡಿದ ಆಹಾರ) ದೇವರಿಗೆ ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ರಾಜ್ಯದಾದ್ಯಂತ ಅನೇಕ ಜನರು ನದಿಗಳಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ದೇವರಿಗೆ ನಮನ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಪುರಿಯ ಜಗನ್ನಾಥ ದೇವಾಲಯದಲ್ಲಿ ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ. ಮಕರ ಮೇಳವನ್ನು (ಜಾತ್ರೆಗಳು) ಪ್ರಮುಖ ಯಾತ್ರಾ ಸ್ಥಳಗಳಾದ ಕಟಕ್‌ನ ಧಬಲೇಶ್ವರ್, ಅತ್ರಿ (ಖೋರ್ಧಾ) ನಲ್ಲಿರುವ ಹಟಕೇಶ್ವರ್ ಮತ್ತು ಬಾಲಸೋರ್‌ನ ಮಕರ ಮುನಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಪೊಂಗಲ್ (ತಮಿಳುನಾಡು): ದಕ್ಷಿಣ ರಾಜ್ಯವಾದ ತಮಿಳುನಾಡಿನಲ್ಲಿ ಆಚರಿಸಲಾಗುವ ಮೂರು ದಿನಗಳ ಸುಗ್ಗಿಯ ಹಬ್ಬವನ್ನು ಅದೇ ಹೆಸರಿನ ಸಾಂಪ್ರದಾಯಿಕ ಖಾದ್ಯಕ್ಕೆ ಹೆಸರಿಸಲಾಗಿದೆ. ಇದನ್ನು ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯಿಂದ ತಯಾರಿಸಲಾಗುತ್ತದೆ. ಬಳಿಕ ಹಾಲು ಮತ್ತು ಬೆಲ್ಲದಲ್ಲಿ ಬೇಯಿಸಲಾಗುತ್ತದೆ. ದೇಶದ ಇತರ ಭಾಗಗಳಂತೆ, ಮನೆಗಳನ್ನು ಸ್ವಚ್ಛಗೊಳಿಸಿ, ಬಾಳೆ ಮತ್ತು ಮಾವಿನ ಎಲೆಗಳಿಂದ ಅಲಂಕರಿಸಲಾಗುತ್ತದೆ. ಅಂಗಳಗಳು ಮತ್ತು ಪ್ರವೇಶದ್ವಾರಗಳನ್ನು ಸಾಂಪ್ರದಾಯಿಕ ಕೋಲಂ ಮಾದರಿಗಳಿಂದ ಚಿತ್ರಿಸಲಾಗುತ್ತದೆ. ಈ ಹಬ್ಬವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ ಸಂಭ್ರಮಿಸಲಾಗುತ್ತದೆ.

ಭೋಗಿ (ಆಂಧ್ರಪ್ರದೇಶ): ದಕ್ಷಿಣ ಭಾರತದ ಮತ್ತೊಂದು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಭೋಗಿ ಪಂಡಗ (ಭೋಗಿ ಹಬ್ಬ)ವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ದಿನ ಭೋಗಿ, ಎರಡನೇ ದಿನ ಸಂಕ್ರಾಂತಿ, ಮೂರನೇ ದಿನ ಕನುಮಾ ಎಂದು ಆಚರಿಸುತ್ತಾರೆ. ಭೋಗಿ ದಿನ ಜನರು ಹಳೆಯ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಮನೆಯ ಮುಂದೆ ಸುಡುತ್ತಾರೆ, ಇದು ಹಳೆಯ ಜೀವನದ ಅಂತ್ಯ ಮತ್ತು ಹೊಸ ಆರಂಭದ ಸಂಕೇತವಾಗಿದೆ. ಹಬ್ಬದ ಎರಡನೇ ದಿನದಂದು ಸೂರ್ಯ ದೇವರಿಗೆ ನಮಸ್ಕರಿಸಿ ಸಿಹಿ ತಿಂಡಿಗಳನ್ನು ತಯಾರು ಮಾಡಲಾಗುತ್ತದೆ. ಮೂರನೇ ದಿನದಂದು ಮಾಂಸಾಹಾರ ಖಾದ್ಯಗಳನ್ನು ತಯಾರು ಮಾಡಿ ಹಬ್ಬವನ್ನು ಕೊನೆಗೊಳಿಸುತ್ತಾರೆ.

ಇದನ್ನೂ ಓದಿ: Makara Sankranti 2023: ಸಂಕ್ರಾಂತಿ ಹಬ್ಬದ ಹಿನ್ನೆಲೆ, ವೈಜ್ಞಾನಿಕ ಮಹತ್ವ ತಿಳಿಯಿರಿ

ಬಿಹು (ಅಸ್ಸಾಂ): ಮಾಗ್ ಬಿಹು ಎಂದೂ ಕರೆಯಲ್ಪಡುವ ಈ ಹಬ್ಬವು ಅಸ್ಸಾಂನಲ್ಲಿ ಸುಗ್ಗಿಯ ಋತುವಿನ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ಹಬ್ಬ ಮತ್ತು ದೀಪೋತ್ಸವದ ಮೂಲಕ ಆಚರಿಸಲಾಗುತ್ತದೆ. ಉರುಕಾ ಎಂದೂ ಕರೆಯಲ್ಪಡುವ ಮಾಘ ಬಿಹುವಿನ ಮುನ್ನಾ ದಿನದಂದು, ಹಬ್ಬಕ್ಕಾಗಿ ಪಿತಾಸ್ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳಂತಹ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ರಾತ್ರಿಯಲ್ಲಿ, ಭುಜ್ ಅಥವಾ ಹಬ್ಬವನ್ನು ಆಯೋಜಿಸಲಾಗುತ್ತದೆ. ಅಲ್ಲಿ ಜನರು ಈ ತಿನಿಸುಗಳನ್ನು ಒಟ್ಟಾಗಿ ಸೇರಿ ಸೇವಿಸುತ್ತಾರೆ. ಸಾಮಾನ್ಯವಾಗಿ ಬಿದಿರು, ಎಲೆಗಳು ಮತ್ತು ಭೇಲಾಘರ್ ಎಂಬ ಹುಲ್ಲಿನಿಂದ ಮಾಡಿದ ಗುಡಿಸಲುಗಳಲ್ಲಿ ರಾತ್ರಿಯ ಔತಣಕೂಟ ನಡೆಯುತ್ತದೆ. ಹಬ್ಬದ ದಿನದಂದು, ಜನರು ಬೆಳಗಿನ ಜಾವದಲ್ಲಿ ಎದ್ದು ಸ್ನಾನ ಮಾಡಿ, ಮೇಜಿ ಎಂಬ ಸುಗ್ಗಿಯ ನಂತರದ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಹೊಲಗಳಲ್ಲಿ ಬೆಂಕಿಯನ್ನು ಬೆಳಗಿಸಲಾಗುತ್ತದೆ. ಜನರು ಈ ಕ್ಯಾಂಪ್ ಫೈರ್ ಸುತ್ತಲೂ ಸುತ್ತುತ್ತಾರೆ. ಬಳಿಕ ತಮ್ಮ ಪಿತೃದೇವತೆಗಳನ್ನು ಪ್ರಾರ್ಥಿಸುತ್ತಾರೆ. ಆಚರಣೆಯ ಸಮಯದಲ್ಲಿ ದೇವರಿಗೆ ಕೋಳಿ, ಅಕ್ಕಿ ರೊಟ್ಟಿ, ಅಕ್ಕಿ ಸಾರಾಯಿ, ಪಿತಾ, ಚಿರಾ, ಅಖೋಯ್, ಮೊಸರು ಮತ್ತು ಇತರ ಆಹಾರವನ್ನು ಅರ್ಪಿಸಲಾಗುತ್ತದೆ. ಇನ್ನು ಇದೇ ಸಂದರ್ಭದಲ್ಲಿ ಭೇಲಾಘರ್ ಅನ್ನು ಸುಡುವುದು ಆಚರಣೆಯ ಒಂದು ಭಾಗವಾಗಿದೆ. ನಂತರ ಜನರು ಅಕ್ಕಿ ಮತ್ತು ಕಾಳುಗಳ ಮಿಶ್ರಣವಾದ ಮಾಹ್-ಕರೈ ಎಂದು ಕರೆಯಲ್ಪಡುವ ವಿಶೇಷ ತಿನಿಸನ್ನು ತಯಾರಿಸುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News