Shiv Sena Dussehra Rally: ಮುಂಬೈನ ಶಿವಾಜಿ ಪಾರ್ಕ್ ಮೈದಾನದಲ್ಲಿ ದಸರಾ ರ‍್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂಧೆ ಬಣ ಮುಖಾಮುಖಿಯಾಗಿವೆ. ಮಂಗಳವಾರ ಉದ್ಧವ್ ಠಾಕ್ರೆ ಬಣ ಈ ರ‍್ಯಾಲಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಪಕ್ಷದ ವಾರ್ಷಿಕ ದಸರಾ ರ‍್ಯಾಲಿಯನ್ನು ಶಿವಾಜಿ ಪಾರ್ಕ್ ಮೈದಾನದಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅನುಮತಿ ನೀಡಿದರೂ, ನೀಡದಿದ್ದರೂ ನಡೆಸುವುದಾಗಿ ಹೇಳಿಕೊಂಡಿದೆ.
ಮುಂಬೈನ ಮಾಜಿ ಮೇಯರ್ ಮಿಲಿಂದ್ ವೈದ್ಯ ನೇತೃತ್ವದ ಶಿವಸೇನೆ ನಾಯಕರ ನಿಯೋಗವು ರ‍್ಯಾಲಿ ನಡೆಸಲು ಅನುಮತಿಗಾಗಿ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ವಿಚಾರಿಸಲು ನಾಗರಿಕ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಅನುಮತಿ ಸಿಕ್ಕರೂ ಸಿಗದಿದ್ದರೂ ಶಿವಾಜಿ ಪಾರ್ಕ್ ನಲ್ಲಿ ಸಮಾವೇಶ ಮಾಡುತ್ತೇವೆ ಎಂದು ಘೋಷಿಸಿದೆ. ಆಡಳಿತವು ನಮಗೆ ಅವಕಾಶ ನೀಡಲಿ ಅಥವಾ ನೀಡದೆ ಇರಲಿ. ನಮ್ಮ ನಿರ್ಧಾರದಲ್ಲಿ ನಾವು ತುಂಬಾ ದೃಢವಾಗಿದ್ದೇವೆ ಎಂದು ನಿಯೋಗ ಹೇಳಿದೆ
ರ‍್ಯಾಲಿಯಲ್ಲಿ ಎರಡೂ ಬಣಗಳು ಮುಖಾಮುಖಿಯಾಗಲಿವೆ
"ನಮಗೆ ಯಾವುದೇ ಉತ್ತರ ಸಿಗದಿದ್ದರೆ ಬಾಳಾಸಾಹೇಬರ ಶಿವಸೇನೆಯ ಕಾರ್ಯಕರ್ತರು ದಸರಾ ರ‍್ಯಾಲಿಗಾಗಿ ಶಿವಾಜಿ ಪಾರ್ಕ್ ಮೈದಾನದಲ್ಲಿ ಜಮಾಯಿಸಲಿದ್ದಾರೆ" ಎಂದು ಅವರು ಹೇಳಿದ್ದಾರೆ. ಠಾಕ್ರೆ ನೇತೃತ್ವದ ಬಣ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಎರಡೂ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿಯನ್ನು ಆಯೋಜಿಸಲು ಅನುಮತಿ ಕೋರಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಶಿವಸೇನೆ ಆರಂಭದಿಂದಲೂ ಇದೇ ಸ್ಥಳದಲ್ಲಿ ತನ್ನ ದಸರಾ ರ‍್ಯಾಲಿಯನ್ನು ಹಮ್ಮಿಕೊಳ್ಳುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಪ್ರಸ್ತುತ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಸಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರ್ಯಾಯವಾಗಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ (ಬಿಕೆಸಿ) ಎಂಎಂಆರ್‌ಡಿಎ ಮೈದಾನದಲ್ಲಿ ರ‍್ಯಾಲಿ ನಡೆಸಲು ಎರಡೂ ಬಣಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ. ಆದರೆ, ಕಳೆದ ವಾರ ಶಿಂಧೆ ಬಣಕ್ಕೆ ಬಿಕೆಸಿಯಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ-Mamata Banarjee: ಮೊದಲು RSS ಬಣ್ಣನೆ, ನಂತರ ಪ್ರಧಾನಿ ಮೋದಿ ಸಮರ್ಥನೆ, ಮಮತಾ ಮೈಂಡ್ ನಲ್ಲಿ ನಡೆದಿದ್ದಾದರು ಏನು?
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಅನುಮತಿ ನೀಡಬೇಕು: ಪವಾರ್
ಏತನ್ಮಧ್ಯೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಶಿವಾಜಿ ಪಾರ್ಕ್‌ನಲ್ಲಿ ರ‍್ಯಾಲಿ ನಡೆಸಲು ಅವಕಾಶ ನೀಡಬೇಕು ಮತ್ತು ಅನುಮತಿ ನೀಡದಿದ್ದರೆ ಅವರು ಕಾನೂನಿನ ಮೊರೆ ಹೋಗಬೇಕು ಎಂದಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿರುವ ಠಾಕ್ರೆ ನೇತೃತ್ವದ ಶಿವಸೇನೆಯ ಮಿತ್ರ ಪಕ್ಷದ ಮುಖಂಡರಾಗಿರುವ ಪವಾರ್, ‘‘ಶಿಂಧೆ ಬಣಕ್ಕೆ ಬಿಕೆಸಿ ಮೈದಾನ ಒದಗಿಸಿದರೆ, ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಶಿವಾಜಿ ಪಾರ್ಕ್‌ನಲ್ಲಿ ರ‍್ಯಾಲಿ ನಡೆಸಲು ಅವಕಾಶ ನೀಡಬೇಕು,’’ ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.