ನವದೆಹಲಿ: ಚುನಾವಣಾ ಆಯೋಗ ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಲೋಕಸಭೆಯ ಅವಧಿ ಜೂನ್ 3 ರಂದು ಕೊನೆಗೊಳ್ಳುವ ಹಿನ್ನಲೆಯಲ್ಲಿ ಚುನಾವಣೆ ಆಯೋಗವು ಚುನಾವಣಾ ಹಂತಗಳ ಜೊತೆಗೆ ಭದ್ರತೆ ಪಡೆಗಳು ಮತ್ತು ಇತರ ಅಗತ್ಯತೆಗಳ ಲಭ್ಯತೆಯನ್ನು ವೇಳಾಪಟ್ಟಿ ಸಿದ್ದಪಡಿಸುವ ಮುನ್ನ ಪರಿಶೀಲನೆ ನಡೆಸುತ್ತಿದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಲಾಗುವುದು ಎನ್ನಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ.
ಇನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆಯಾದ ನಂತರ ಚುನಾವಣಾ ಆಯೋಗವು ಆರು ತಿಂಗಳೊಳಗೆ ವಿಧಾನಸಭಾ ಚುನಾವಣೆಯನ್ನು ನಡೆಸಬೇಕಾದ ಒತ್ತಡದಲ್ಲಿಯೂ ಚುನಾವಣಾ ಆಯೋಗವಿದೆ. ಈ ಹಿನ್ನಲೆಯಲ್ಲಿ ಕಾಶ್ಮೀರದ ವಿಧಾನಸಭಾ ಚುನಾವಣೆಯು ಲೋಕಸಭಾ ಚುನಾವಣೆಯ ಜೊತೆ ನಡೆದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.ಈ ಬಾರಿ ಮತ್ತೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ ಸರ್ಕಾರವಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಸೇರಿ ಇನ್ನೂಳಿದ ಪ್ರಾದೇಶಿಕ ಪಕ್ಷಗಳು ಸಹಿತ ಈ ಲೋಕಸಭೆಯಲ್ಲಿ ಅಧಿಕ ಸೀಟ್ ಗಳನ್ನು ಗೆಲ್ಲುವ ನಿರಿಕ್ಷೆಯಲ್ಲಿವೆ.