ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಮಾಣದ ಹಿನ್ನೆಲೆಯಲ್ಲಿ ಈ ಹಿಂದೆ ತುರ್ತು ಸಹಾಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಸಹಾಯವಾಣಿ ಸಂಖ್ಯೆಗಳಾದ 100, 101 ಮತ್ತು 102 ರ ಬದಲಿಗೆ ಏಕ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಚಾಲನೆ ನೀಡಿದ್ದು, ಇಂದಿನಿಂದಲೇ ಈ ಸಂಖ್ಯೆ ಕಾರ್ಯಾನಿರ್ವಹಿಸಲಿದೆ.
ಈ ಹಿಂದೆ 100 ಅಥವಾ 101ಕ್ಕೆ ಬರುತ್ತಿದ್ದ ಕರೆಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ದಾಖಲಿಸಿ, ಬಳಿಕ ಆ ಸಂದೇಶವನ್ನು ವೈರ್‌ಲೆಸ್ ಸಿಸ್ಟಮ್ ಮೂಲಕ ಪೊಲೀಸ್ ಪೋಸ್ಟ್ ಅಥವಾ ಸಂಬಂಧಪಟ್ಟ ಪೊಲೀಸ್ ವಾಹನಕ್ಕೆ ವರ್ಗಾಯಿಸಲಾಗುತ್ತಿತ್ತು. ಆದರೀಗ, ಓರ್ವ ವ್ಯಕ್ತಿ 112ಕ್ಕೆ ಕರೆ ಮಾಡಿದ ಕೂಡಲೇ ಅದನ್ನು ಸಂಬಂಧ ಪಟ್ಟ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಅಧಿಕಾರಿಗಳು ಕರೆ ಮಾಡಿದ ಸ್ಥಳವನ್ನು ತಿಳಿದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
"ಅಮೇರಿಕಾದಲ್ಲಿ ಏಕ ತುರ್ತು ಸಹಾಯವಾಣಿ 911 ಇರುವಂತೆಯೇ ದೆಹಲಿಯಲ್ಲಿ 112ನ್ನು ಆರಂಭಿಸಲಾಗಿದೆ. ಒಂದು ವೇಳೆ ಜನರು ತುರ್ತು ಸಹಾಯವಾಣಿ ಸಂಖ್ಯೆಗಳಾದ 100, 101 ಅಥವಾ 102ಕ್ಕೆ ಕರೆ ಮಾಡಿದರೂ ಸಹ ಅದು 112ಕ್ಕೆಕನೆಕ್ಟ್ ಆಗಲಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.