ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ

Former Pakistan Prime Minister Imran Khan arrested: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಮಂಗಳವಾರ ಬಂಧನಕ್ಕೊಳಗಾದರು.

Written by - Girish Linganna | Last Updated : May 11, 2023, 03:35 PM IST
  • ಭ್ರಷ್ಟಾಚಾರ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
  • ಇಮ್ರಾನ್ ಬಂಧನ ವಿರೋಧಿಸಿ ಸೇನಾ ಕಚೇರಿಗೆ ನುಗ್ಗಿ, ವಾಯು ಪಡೆ ಸ್ಮಾರಕ ಧ್ವಂಸಗೊಳಿಸಿರುವ ಬೆಂಬಲಿಗರು
  • ಲಾಹೋರ್‌ನಲ್ಲಿನ ಕಾರ್ಪ್ಸ್ ಕಮಾಂಡರ್ ಮನೆಯಲ್ಲಿ ದಾಂದಲೆ ನಡೆಸಿದ ಪ್ರತಿಭಟನಾಕಾರರು
ಇಮ್ರಾನ್ ಖಾನ್ ಬಂಧನ: ಅಲ್ - ಖಾದಿರ್ ಟ್ರಸ್ಟ್ ಪ್ರಕರಣ ನಡೆದು ಬಂದ ಹಾದಿ title=
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ!

Former Pakistan PM Imran Khan arrested: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಮಂಗಳವಾರ ಬಂಧನಕ್ಕೊಳಗಾದರು. ನ್ಯಾಯಾಲಯದ ಸಂಕೀರ್ಣದಲ್ಲಿ ಪಾಕಿಸ್ತಾನದ ರೇಂಜರ್‌ಗಳು ಇಮ್ರಾನ್ ಖಾನ್ ಅವರನ್ನು ವಶಕ್ಕೆ ಪಡೆದುಕೊಂಡರು. ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ ಮುಖ್ಯ ನ್ಯಾಯಾಧೀಶರಾದ ಆಮೆರ್ ಫಾರೂಕ್ ಅವರು ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರು, ಆಂತರಿಕ ಸಚಿವಾಲಯದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಅಟಾರ್ನಿ ಜನರಲ್ ಅವರನ್ನು ತಕ್ಷಣವೇ ನ್ಯಾಯಾಲಯಕ್ಕೆ ಆಗಮಿಸಿ, ಯಾವ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ವಿವರಿಸುವಂತೆ ಸೂಚಿಸಿದರು.

ಇಮ್ರಾನ್ ಖಾನ್ ಅವರು ಓರ್ವ ಮಹತ್ವದ ಗುಪ್ತಚರ ಅಧಿಕಾರಿಯವರ ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಪಾಕಿಸ್ತಾನಿ ಸೇನೆ ಇಮ್ರಾನ್ ಖಾನ್ ಬಂಧನಕ್ಕೂ ಹಿಂದಿನ ದಿನ ಈ ಆರೋಪವನ್ನು ನಿರಾಕರಿಸಿದೆ. ಇಷ್ಟಾದರೂ ಇಮ್ರಾನ್ ಖಾನ್ ತಾನು ಮಂಗಳವಾರ ಬಂಧನಕ್ಕೊಳಗಾಗುವ ಮೊದಲು ಮತ್ತೆ ಮತ್ತೆ ವೀಡಿಯೋ ಮೂಲಕ ಇದೇ ಆರೋಪ ಮಾಡುತ್ತಾ ಬಂದಿದ್ದರು. ಅಲ್ ಖಾದಿರ್ ಟ್ರಸ್ಟ್ ಅನ್ನು ಸ್ಥಾಪಿಸಿರುವ ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿ, ಆತ್ಮೀಯ ಸ್ನೇಹಿತ ಜುಲ್ಫಿಕರ್ ಬುಖಾರಿ ಹಾಗೂ ಬಾಬರ್ ಅವಾನ್ ಅವರೆಲ್ಲರೂ ಈಗ ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪಾಕಿಸ್ತಾನದ ಪಂಜಾಬಿನ ಝೇಲಮ್ ಜಿಲ್ಲೆಯ ಸೊಹಾವಾ ತೆಹ್ಸಿಲ್‌ನಲ್ಲಿ ಅಲ್ ಖಾದಿರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈ ಟ್ರಸ್ಟ್ ಆರಂಭಿಸಲಾಯಿತು. ಈ ವಿಶ್ವವಿದ್ಯಾಲಯ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ ಹೊಂದಿತ್ತು.

ಇದನ್ನೂ ಓದಿ: ಭಾರತದ 1.4 ಬಿಲಿಯನ್ ಗ್ರಾಹಕರ ಬಿಡಿಗಾಸಿನಲ್ಲಿ ಪಾಲಿಗಾಗಿ ಸಮರ

ಅಲ್ ಖಾದಿರ್ ಟ್ರಸ್ಟ್ ಪ್ರಕರಣದ ಹಾದಿ

ಮೇ 15, 2019: ಪ್ರಧಾನಿ ಇಮ್ರಾನ್ ಖಾನ್ ಅಲ್ ಖಾದಿರ್ ವಿಶ್ವವಿದ್ಯಾಲಯವನ್ನು ಘೋಷಿಸಿದರು. ಸೂಫಿಸಂ, ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣಕ್ಕಾಗಿ ಅಲ್ ಖಾದಿರ್ ವಿಶ್ವವಿದ್ಯಾಲಯವನ್ನು ಸೊಹಾವಾ, ಝೇಲಂನಲ್ಲಿ ಸ್ಥಾಪಿಸುವುದಾಗಿ ಅವರು ಹೇಳಿದರು. ‘ಒಂದು ವೇಳೆ ಒಂದು ಸಿದ್ಧಾಂತ ಸತ್ತು ಹೋದರೆ, ಅದರೊಡನೆ ಆ ದೇಶವೂ ಸಾವನ್ನಪ್ಪುತ್ತದೆ’ ಎಂದಿದ್ದರು.

ಡಿಸೆಂಬರ್ 2, 2019: ಓರ್ವ ರಿಯಲ್ ಎಸ್ಟೇಟ್ ದೈತ್ಯ ಉದ್ಯಮಿಯ ಮೇಲಿದ್ದ ಪ್ರಕರಣವನ್ನು ಇಮ್ರಾನ್ ಖಾನ್ ಅವರ ಮಂತ್ರಿಮಂಡಲ ಕೈಗೆತ್ತಿಕೊಂಡಿತು. ಡಿಸೆಂಬರ್ 2018ರಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಅಧಿಕಾರಕ್ಕೆ ಬಂದ ಬಳಿಕ, ರಿಯಾಜ್ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಹೊಂದಿದ್ದ ಆಸ್ತಿಯ ಕುರಿತು ಎನ್‌ಸಿಎ ತನಿಖೆ ನಡೆಸಿದ ಮೊದಲ ವರದಿಗಳು ಕಾಣಿಸಿಕೊಂಡವು. ಮಲಿಕ್ ರಿಯಾಜ್ ಮೇಲಿದ್ದ ಅಕೌಂಟ್ಸ್ ಫ್ರೀಜಿಂಗ್ ಆರ್ಡರ್ಸ್ (ಎಎಫ್ಓ) ಹಾಗೂ ಪಾಕಿಸ್ತಾನಕ್ಕೆ ನಿಧಿಯ ವಾಪಸಾತಿಯ ಪ್ರಕರಣವನ್ನು ಇಂಗ್ಲೆಂಡಿನ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್‌ಸಿಎ) ನಡೆಸಿದ್ದು, ಈ ಕುರಿತು ಇಮ್ರಾನ್ ಖಾನ್ ಸರ್ಕಾರ ಚರ್ಚೆ ಆರಂಭಿಸಿತು.

ಡಿಸೆಂಬರ್ 3, 2019: ನ್ಯಾಷನಲ್ ಕ್ರೈಮ್ ಏಜೆನ್ಸಿ, ಇಂಗ್ಲೆಂಡ್ (ಎನ್‌ಸಿಎ) ಪ್ರೈವೇಟ್ ಹೌಸಿಂಗ್ ಸೊಸೈಟಿಯ ಸಿಇಓ ಮಲಿಕ್ ರಿಯಾಜ್ ಮೇಲಿನ ಆರೋಪಗಳ ತನಿಖೆ ನಡೆಸಿ, ಪಾಕಿಸ್ತಾನದ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿರುವ (ಎನ್‌ಬಿಪಿ) ಪಾಕಿಸ್ತಾನದ ಸುಪ್ರೀಂಕೋರ್ಟ್ ಖಾತೆಗೆ ಬಹುತೇಕ 140 ಮಿಲಿಯನ್ ಪೌಂಡ್ ಠೇವಣಿ ಮಾಡಲಾಗಿದೆ ಎಂದು ಪತ್ತೆ ಹಚ್ಚಿತು.

ನ್ಯಾಷನಲ್ ಕ್ರೈಮ್ ಏಜೆನ್ಸಿ, ಇಂಗ್ಲೆಂಡ್ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಪ್ರೈವೇಟ್ ಹೌಸಿಂಗ್ ಸೊಸೈಟಿಯ ಸಿಇಓ ಮಲಿಕ್ ರಿಯಾಜ್ ತನ್ನ ವಿದೇಶೀ ಬ್ಯಾಂಕ್ ಖಾತೆಗಳಿಂದ ಪಾಕಿಸ್ತಾನಕ್ಕೆ ಬಹುತೇಕ 140 ಮಿಲಿಯನ್ ಪೌಂಡ್ಸ್ ವರ್ಗಾಯಿಸಿದ್ದಾರೆ ಎಂದಿತು. ಆದರೆ ಬಳಿಕ ಈ ಹಣ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿದ್ದ ಸುಪ್ರೀಂಕೋರ್ಟ್ ಖಾತೆಯಲ್ಲಿ ಕಾಣಿಸಿಕೊಂಡಿತು. ಪ್ರೈವೇಟ್ ಹೌಸಿಂಗ್ ಬೋರ್ಡ್ ಸೊಸೈಟಿಯ ಮಾಲೀಕರು ಎಸ್‌ಸಿಪಿಗೆ 460 ಬಿಲಿಯನ್ ರೂ. ಪಾವತಿಸಲು ಒಪ್ಪಿಗೆ ಸೂಚಿಸಿದ್ದರೂ, ಆ ಹಣವನ್ನು ಸರ್ಕಾರದ ಖಾತೆಗೆ ವರ್ಗಾಯಿಸಬೇಕೋ ಅಥವಾ ಸುಪ್ರೀಂಕೋರ್ಟ್ ಖಾತೆಗೆ ವರ್ಗಾಯಿಸಬೇಕೋ ಎಂಬ ಸಂಶಯಗಳಿದ್ದವು.

ರಿಯಾಜ್ ರಿಯಲ್ ಎಸ್ಟೇಟ್ ಸಂಸ್ಥೆ, ಬಾಹ್ರಿಯಾ ಟೌನ್ ಲಿಮಿಟೆಡ್ ಕರಾಚಿಯ ಮಲಿರ್ ಜಿಲ್ಲೆಯ ಹೊರಭಾಗದಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಸಾಬೀತಾಗಿತ್ತು. ಈ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದ ಸುಪ್ರೀಂಕೋರ್ಟ್ ಆ ವರ್ಷ 460 ಬಿಲಿಯನ್ ರೂ.ಗಳ ದಂಡವನ್ನು ನೀಡುವಂತೆ ಸೂಚಿಸಿತ್ತು. ಎನ್‌ಸಿಎ ತೀರ್ಪಿನ ಕೆಲಗಂಟೆಗಳ ಬಳಿಕ ಮಲಿಕ್ ರಿಯಾಜ್ ಟ್ವೀಟ್ ಮಾಡಿ, ಪಡೆದುಕೊಂಡ ಮೊತ್ತವನ್ನು 460 ಬಿಲಿಯನ್ ದಂಡಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದಿದ್ದರು.

ಇದನ್ನೂ ಓದಿ: SC On Maharashtra Politics: ಆಡಳಿತಾರೂಢ ಶಿಂಧೆ ಸರ್ಕಾರಕ್ಕೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸುಪ್ರೀಂ

ಡಿಸೆಂಬರ್ 26, 2019: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಅಲ್ ಖಾದಿರ್ ವಿಶ್ವವಿದ್ಯಾಲಯ ಯೋಜನೆಗಾಗಿ ಟ್ರಸ್ಟ್ ಒಂದನ್ನು ನೋಂದಾಯಿಸಿದರು. ಮಲಿಕ್ ರಿಯಾಜ್ ಅವರ ಪ್ರೈವೇಟ್ ಹೌಸಿಂಗ್ ಸೊಸೈಟಿ ಅದರ ಖರ್ಚುವೆಚ್ಚ ನೋಡಿಕೊಳ್ಳಲು ಒಪ್ಪಿಕೊಂಡಿತು. ಮಲಿಕ್ ರಿಯಾಜ್ ಅವರ ಪ್ರೈವೇಟ್ ಹೌಸಿಂಗ್ ಸೊಸೈಟಿಯ ಕುರಿತಾದ ಮಂತ್ರಿಮಂಡಲದ ಅನುಮೋದನೆ ದೊರೆತ ಕೆಲ ವಾರಗಳಲ್ಲಿ ಇಮ್ರಾನ್ ಖಾನ್ ಅಲ್ ಖಾದಿರ್ ಯುನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ನೋಂದಾಯಿಸಿದರು. ಪ್ರೈವೇಟ್ ಹೌಸಿಂಗ್ ಸೊಸೈಟಿ ವಿಶ್ವವಿದ್ಯಾಲಯದ ದಾನಿಯಾಯಿತು.

ತನ್ನ ಒಪ್ಪಂದದಲ್ಲಿ ಪ್ರೈವೇಟ್ ಹೌಸಿಂಗ್ ಸೊಸೈಟಿ ಉದ್ದೇಶಿತ ಅಲ್ ಖಾದಿರ್ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಒಪ್ಪಿಕೊಂಡು, ಅಲ್ ಖಾದಿರ್ ಯೋಜನೆಗೆ ಟ್ರಸ್ಟ್‌ಗೆ ಹಣ ಪೂರೈಕೆ ಮಾಡುವುದಾಗಿ ತಿಳಿಸಿತು. ಜನವರಿ 2020: ಪ್ರೈವೇಟ್ ಹೌಸಿಂಗ್ ಸೊಸೈಟಿ ಝೇಲಮ್ ಜಿಲ್ಲೆಯಲ್ಲಿ 243 ಮಿಲಿಯನ್ ರೂ. ಮೌಲ್ಯದ 460 ಕನಾಲ್ ನೆಲವನ್ನು ಸ್ವಾಧೀನಪಡಿಸಿಕೊಂಡು, ಜುಲ್ಫಿ ಬುಖಾರಿಗೆ ವರ್ಗಾಯಿಸಿತು. ನಂತರದ ತಿಂಗಳಲ್ಲಿ ಇಸ್ಲಾಮಾಬಾದ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಟ್ರಸ್ಟ್ ಡೀಡ್ ಅನ್ನು ನೋಂದಣಿ ಮಾಡಲಾಯಿತು. ಆ ಸಂದರ್ಭದಲ್ಲಿ ಭೂಮಿಯ ಮೌಲ್ಯ 243 ಮಿಲಿಯನ್ ರೂ. ಎಂದು ಸ್ಟಾಂಪ್‌ನಲ್ಲಿ ನಮೂದಿಸಲಾಯಿತು.

ಜುಲೈ 2020 - ಜೂನ್ 2021: ಜುಲೈ 2020ರಿಂದ ಜೂನ್ 2021ರ ಅವಧಿಯಲ್ಲಿ ಟ್ರಸ್ಟಿನ ಒಟ್ಟು ಆದಾಯ 101 ಮಿಲಿಯನ್ ರೂ. ಆಗಿತ್ತು. ಸಿಬ್ಬಂದಿ ಮತ್ತು ಉದ್ಯೋಗಿಗಳ ಸಂಬಳ ಸೇರಿದಂತೆ, ಟ್ರಸ್ಟಿನ ಖರ್ಚು ಬಹುತೇಕ 8.58 ಮಿಲಿಯನ್ ರೂ. ಆಗಿತ್ತು.

ಎಪ್ರಿಲ್ 22, 2020: ಜುಲ್ಫಿಕರ್ ಅಬ್ಬಾಸ್ ಬುಖಾರಿ ಹಾಗೂ ಜಹೀರ್ ಉದ್ ದಿನ್ ಬಾಬರ್ ಆವನ್ ಅವರನ್ನು ಟ್ರಸ್ಟ್‌ನಿಂದ ಕಿತ್ತು ಹಾಕಲಾಯಿತು. ಇಸ್ಲಾಮಾಬಾದ್ ಜಂಟಿ ಸಬ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದ ಅಲ್ ಖಾದಿರ್ ಟ್ರಸ್ಟ್ ಮುಖ್ಯಸ್ಥರಾದ ಇಮ್ರಾನ್ ಖಾನ್ ಅವರು ಜುಲ್ಫಿಕರ್ ಅಬ್ಬಾಸ್ ಬುಖಾರಿ ಹಾಗೂ ಜಹೀರ್ ಉದ್ ದಿನ್ ಬಾಬರ್ ಆವನ್ ಅವರನ್ನು ಟ್ರಸ್ಟ್‌ನಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದರು. ಬಳಿಕ ಟ್ರಸ್ಟ್ ಡೀಡ್‌ನಲ್ಲಿ ತಿದ್ದುಪಡಿ ತಂದು, ಟ್ರಸ್ಟ್ ಕಛೇರಿಯನ್ನು ಇಮ್ರಾನ್ ಖಾನ್ ಅವರ ಬನಿಗಲ ಹೌಸ್‌ಗೆ ಸ್ಥಳಾಂತರಿಸಲಾಯಿತು. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗಲೇ ಪತ್ರ ಮತ್ತು ಟ್ರಸ್ಟ್ ಡೀಡ್‌ಗೆ ಸಹಿ ಹಾಕಿ, ಜಂಟಿ ಸಬ್ ರಿಜಿಸ್ಟ್ರಾರ್‌ಗೆ ತಲುಪಿಸಲಾಯಿತು.

ಜನವರಿ 2021 - ಡಿಸೆಂಬರ್ 2021: ಜನವರಿ 2021 ಮತ್ತು ಡಿಸೆಂಬರ್ 2021ರ ನಡುವೆ ಅಲ್ ಖಾದಿರ್ ಟ್ರಸ್ಟ್‌ಗೆ 180 ಮಿಲಿಯನ್ ಡಾಲರ್ ಅನುದಾನ ನೀಡಲಾಯಿತು. ಜನವರಿ 22, 2021: ಈ ಭೂಮಿಯನ್ನು ಜುಲ್ಫಿ ಬುಖಾರಿ ಟ್ರಸ್ಟ್ ಸ್ಥಾಪನೆಯಾದ ಬಳಿಕ ಟ್ರಸ್ಟ್ ಹೆಸರಿಗೆ ವರ್ಗಾವಣೆ ನಡೆಸಿದರು. ಅಲ್ ಖಾದಿರ್ ಟ್ರಸ್ಟ್ ಉಸ್ತುವಾರಿಯಾಗಿ, ಜುಲ್ಫಿಕರ್ ಅಬ್ಬಾಸ್ ಬಖಾರಿ ಪ್ರೈವೇಟ್ ಹೌಸಿಂಗ್ ಸೊಸೈಟಿ ಸಂಸ್ಥೆಯಿಂದ ಪಡೆದ ಭೂಮಿ 458 ಕನಲ್, 4 ಮಾರ್ಲ, ಹಾಗೂ 58 ಚದರ ಅಡಿ ವಿಸ್ತೀರ್ಣ ಹೊಂದಿತ್ತು.

ಇದನ್ನೂ ಓದಿ: Maharashtra: ಸುಪ್ರೀಂ ತೀರ್ಪಿನ ಬಳಿಕ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕಾನೂನುಬಾಹೀರ ಎಂದ ಸಂಜಯ್ ರಾವುತ್

ಮಾರ್ಚ್ 24, 2021, ಬುಶ್ರಾ ಬೀಬಿ ಮತ್ತು ಪ್ರೈವೇಟ್ ಹೌಸಿಂಗ್ ಸೊಸೈಟಿ ನಡುವಿನ ಒಪ್ಪಂದ: ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲೇ, ಅವರ ಪತ್ನಿ ಬುಶ್ರಾ ಬೀಬಿ ಮತ್ತು ಪ್ರೈವೇಟ್ ಹೌಸಿಂಗ್ ಸೊಸೈಟಿ ಮಧ್ಯೆ ಇಮ್ರಾನ್ ಖಾನ್ ನಿವಾಸದಲ್ಲಿ ಒಪ್ಪಂದ ಏರ್ಪಟ್ಟಿತು. ಉಡುಗೊರೆಯ ರೂಪದಲ್ಲಿ ಭೂಮಿ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಇದರಲ್ಲಿ ನಮೂದಿಸಲಾಯಿತು.

ನವೆಂಬರ್ 29, 2021, ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿದ ಇಮ್ರಾನ್ ಖಾನ್: ಝೇಲಮ್ ಜಿಲ್ಲೆಯಲ್ಲಿನ ಅಲ್ ಖಾದಿರ್ ವಿಶ್ವವಿದ್ಯಾಲಯದ ಶೈಕ್ಷಣಿಕ ಕಟ್ಟಡಗಳನ್ನು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಉದ್ಘಾಟಿಸಿದರು. ಅಲ್ ಖಾದಿರ್ ವಿಶ್ವವಿದ್ಯಾಲಯ ಆರಂಭದಲ್ಲಿ 500 ವಿದ್ಯಾರ್ಥಿಗಳಿಗೆ ಅವಕಾಶ ಹೊಂದಿತ್ತು. ಮುಂದಿನ ಹಂತಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎನ್ನಲಾಯಿತು.

ಮಾಹಿತಿ ಮತ್ತು ಪ್ರಸಾರ ಸಚಿವರಾದ ಚೌಧರಿ ಫವಾದ್ ಹುಸೇನ್ ಅವರ ಪ್ರಕಾರ, ಈ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ಕ್ಷೇತ್ರಗಳಿಗೆ ಹೊಸ ಆಯಾಮ ನೀಡಲಿದೆ. ಸೂಫಿ, ಇಸ್ಲಾಮಿಕ್ ಹಾಗೂ ವಿಜ್ಞಾನ ವಿಭಾಗದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಒದಗಿಸುವ ಕೇಂದ್ರ ಇದಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಫೆಬ್ರವರಿ 17, 2022, ಅಲ್ ಖಾದಿರ್ ಯೋಜನೆಗೆ ಚಾರಿಟೇಬಲ್ ಸ್ಥಿತಿ: ಪಂಜಾಬ್ ಸರ್ಕಾರದ ಚಾರಿಟಿ ಕಮಿಷನ್ ಅಲ್ ಖಾದಿರ್ ಪ್ರಾಜೆಕ್ಟ್ ಟ್ರಸ್ಟ್ ಅನ್ನು ಚಾರಿಟಿ ಎಂದು ನೋಂದಾಯಿಸಿತು.

ಜೂನ್ 14, 2022: ಆಂತರಿಕ ಸಚಿವ ಸನಾವುಲ್ಲಾ ಎಂಬವರು ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಮೇಲೆ ಅಕ್ರಮವಾಗಿ ಪ್ರೈವೇಟ್ ಹೌಸಿಂಗ್ ಸೊಸೈಟಿ ಸಂಸ್ಥೆಯಿಂದ ಭೂಮಿ ಪಡೆದ ಆರೋಪ ಮಾಡಿದರು. ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಪ್ರೈವೇಟ್ ಹೌಸಿಂಗ್ ಸೊಸೈಟಿಯ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿ, ಅದಕ್ಕೆ ಪ್ರತಿಯಾಗಿ ಲಂಚದ ರೂಪದಲ್ಲಿ ನೂರಾರು ಕನಲ್ ಭೂಮಿ ಮತ್ತು 5 ಬಿಲಿಯನ್ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು.

ಸಚಿವರು, ಈ ಪ್ರಕರಣ ಇಲ್ಲಿಗೇ ಮುಗಿದಿಲ್ಲ ಎಂದಿದ್ದಾರೆ. ಸರ್ಕಾರ ರಿಯಲ್ ಎಸ್ಟೇಟ್ ಸಂಸ್ಥೆಯ 50 ಬಿಲಿಯನ್ ರೂ. ಉಳಿಸಿದ ಬಳಿಕ, ಪ್ರೈವೇಟ್ ಹೌಸಿಂಗ್ ಸೊಸೈಟಿ ಒಪ್ಪಂದಕ್ಕೆ ಸಹಿ ಹಾಕಿ, 530 ಮಿಲಿಯನ್ ರೂ. ಮೌಲ್ಯದ 458 ಕನಲ್ ಭೂಮಿಯನ್ನು ಇಮ್ರಾನ್ ಖಾನ್ ಮತ್ತವರ ಪತ್ನಿಯ ಮಾಲಕತ್ವದ ಟ್ರಸ್ಟ್‌ಗೆ ನೀಡಿದೆ ಎಂದು ಆರೋಪಿಸಿದರು.

ಈ ಕುರಿತು ವಿವರಣೆ ನೀಡಿದ ಸನಾವುಲ್ಲಾ, ಭೂಮಿಯನ್ನು ಅಲ್ ಖಾದಿರ್ ಟ್ರಸ್ಟ್‌ಗೆ ಪ್ರೈವೇಟ್ ಹೌಸಿಂಗ್ ಸೊಸೈಟಿ ನೀಡಿದ್ದು, ಈ ಒಪ್ಪಂದಕ್ಕೆ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಖಾನ್ ಸಹಿ ಹಾಕಿದ್ದಾರೆ ಎಂದಿದ್ದರು. ಈ ಲಾಭ ರಹಿತ ಸಂಸ್ಥೆಗೆ ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ ಇಬ್ಬರೇ ನಿರ್ದೇಶಕರಾಗಿದ್ದರು. ಸಚಿವರು ತನ್ನ ಆರೋಪದಲ್ಲಿ, ಇನ್ನೂ 240 ಕನಾಲ್ ಭೂಮಿಯನ್ನು ಬುಶ್ರಾ ಬೀಬಿಯ ಆತ್ಮೀಯ ಸ್ನೇಹಿತ ಫರಾ ಶೆಹ್‌ಜಾಂದಿ ಹೆಸರಿಗೆ ನೀಡಲಾಗಿದೆ ಎಂದಿದ್ದರು.

ಡಿಸೆಂಬರ್ 1, 2022: ನ್ಯಾಷನಲ್ ಅಕೌಂಟಬಲಿಟಿ ಬ್ಯೂರೋ (ಎನ್‌ಬಿಎ), 190 ಮಿಲಿಯನ್ ಪೌಂಡ್ಸ್ (50 ಬಿಲಿಯನ್ ರೂ.)ಗಳನ್ನು ಪಿಟಿಐ ಸರ್ಕಾರವಿದ್ದಾಗ ಒಂದು ಇತ್ಯರ್ಥ ಪ್ರಕರಣಕ್ಕೆ ಸಂಬಂಧಿಸಿ ಪಡೆದ ಆರೋಪದಡಿ ಎನ್‌ಬಿಎ ಪ್ರೈವೇಟ್ ಹೌಸಿಂಗ್ ಸೊಸೈಟಿಯ ಮಾಲಕರನ್ನು ವಿಚಾರಣೆಗೆ ಕರೆಯುತ್ತದೆ. ಎನ್‌ಬಿಎ ಪ್ರೈವೇಟ್ ಹೌಸಿಂಗ್ ಸೊಸೈಟಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಯಾಕೆ 458 ಎಕರೆ ಭೂಮಿಯನ್ನು ಅಲ್ ಖಾದಿರ್ ಟ್ರಸ್ಟ್ ವಿಶ್ವವಿದ್ಯಾಲಯಕ್ಕೆ ನೀಡಿದೆ ಎಂಬ ಕುರಿತೂ ವಿಚಾರಣೆ ನಡೆಸುತ್ತದೆ.

ಇದನ್ನೂ ಓದಿ: RPC Singh Joins BJP: ಕೇಂದ್ರ ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಬಿಜೆಪಿಗೆ ಸೇರ್ಪಡೆ

ಮಾರ್ಚ್ 2, 2022: ಬುಶ್ರಾ ಖಾನ್ ಹಾಗೂ ಮತ್ತಿತರರು ಅಲ್ ಖಾದಿರ್ ಸಂಸ್ಥೆಯ ದತ್ತಿ ನಿಧಿಯನ್ನು ನಡೆಸುತ್ತಿರುತ್ತಾರೆ. ಸೊಹಾವಾದ ಸಬ್ ಕ್ಲರ್ಕ್ ಕಚೇರಿಯಲ್ಲಿ "ಎಂಡೋಮೆಂಟ್ ಫಂಡ್ ಫಾರ್ ಅಲ್ ಖಾದಿರ್ ಇನ್ಸ್ಟಿಟ್ಯೂಟ್" ಎಂಬ ಟ್ರಸ್ಟ್ ಡೀಡ್‌ಗೆ ಸಹಿ ಹಾಕಲಾಯಿತು.

ಈ ಒಪ್ಪಂದದಲ್ಲಿ ಟ್ರಸ್ಟಿಗಳಾಗಿ ಬುಶ್ರಾ ಖಾನ್, ಫರ್ಹತ್ ಶೆಹಜ಼ಾದಿ, ಹಾಗೂ ಡಾ. ಆರಿಫ್ ನಜೀರ್ ಬಟ್ಟ್ ಅವರ ಹೆಸರು ನಮೂದಿಸಲಾಯಿತು. ಈ ಒಪ್ಪಂದವನ್ನು ಇಮ್ರಾನ್ ಖಾನ್ ಅವರೇ ಬರೆದಿದ್ದರು. ಇದರೊಡನೆ, ಅಲ್ ಖಾದಿರ್ ವಿಶ್ವವಿದ್ಯಾಲಯ ಟ್ರಸ್ಟ್ ಯೋಜನೆ ತನ್ನ ಜಾಲತಾಣದಲ್ಲಿ ವಿಶ್ವವಿದ್ಯಾಲಯ ಎಂದು ಕರೆಸಿಕೊಂಡಿದೆ. ಆದರೆ ವಾಸ್ತವವಾಗಿ ಇದು ವಿಶ್ವವಿದ್ಯಾಲಯವಲ್ಲದೆ, ಕೇವಲ ಕಾಲೇಜ್ ಆಗಿದೆ. ಮಾರ್ಚ್ 17, 2022ರ ಬಳಿಕ ಪದವಿ ಪ್ರದಾನ ಮಾಡುವ ಹಕ್ಕು ನೀಡಬೇಕೆಂಬ ಸಂಸ್ಥೆಯ ಮನವಿ ಇನ್ನೂ ಪಂಜಾಬ್ ಹೈಯರ್ ಎಜುಕೇಶನ್ ಕಮಿಷನ್ (ಪಿಎಚ್ಇಸಿ) ಬಳಿ ಬಾಕಿಯಾಗಿದೆ.

ಇದೊಂದು ಲಾಭ ರಹಿತ ಸಂಸ್ಥೆ ಎಂದು ನೊಂದಣಿಯಾಗಿದ್ದರೂ, ಸಂಸ್ಥೆ ವಿದ್ಯಾರ್ಥಿಗಳಿಂದ ಟ್ಯೂಷನ್ ಮೊತ್ತವನ್ನು ಪಡೆಯುತ್ತದೆ. ಅವರ ಒಪ್ಪಂದದ ಪ್ರಕಾರ, ಶ್ರೀಮಂತ ಉದ್ಯಮಿಗಳು ಅಲ್ ಖಾದಿರ್ ಟ್ರಸ್ಟ್ ಖರ್ಚುವೆಚ್ಚಗಳನ್ನು ನಿರ್ವಹಿಸುತ್ತಾರೆ. ಸಂಸ್ಥೆಯ ಅತ್ಯುನ್ನತ ಟ್ರಸ್ಟಿಗಳಲ್ಲಿ ಒಬ್ಬರಾದ ಡಾ.ಆರಿಫ್ ನಜೀರ್ ಬಟ್ಟ್ ಪ್ರಕಾರ, ಪಂಜಾಬ್ ಹೈಯರ್ ಎಜುಕೇಶನ್ ಕಮಿಷನ್ (ಪಿಎಚ್ಇಸಿ) ಇನ್ನೂ ಅಲ್ ಖಾದಿರ್ ಸಂಸ್ಥೆಗೆ ಪದವಿ ಪ್ರದಾನ ಮಾಡುವ ಸ್ಥಾನಮಾನ ಒದಗಿಸಿಲ್ಲ. ಅಲ್ ಖಾದಿರ್ ಸಂಸ್ಥೆ ಇಂದಿಗೂ ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಇದು ಕೇವಲ ನಿರ್ವಹಣಾ ವಿಜ್ಞಾನ ಹಾಗೂ ಇಸ್ಲಾಮಿಕ್ ಅಧ್ಯಯನ 2 ವಿಭಾಗಗಳನ್ನು ಮಾತ್ರವೇ ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News