ದೆಹಲಿ ಬಸ್, ಮೆಟ್ರೋನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕೇವಲ ರಾಜಕೀಯ ಗಿಮಿಕ್: ಮನೋಜ್ ತಿವಾರಿ

 ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣ ಯೋಜನೆ ಭರವಸೆ ಕೇವಲ ರಾಜಕೀಯ ಗಿಮಿಕ್ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಟೀಕಿಸಿದ್ದಾರೆ.

Last Updated : Jun 3, 2019, 08:42 PM IST
ದೆಹಲಿ ಬಸ್, ಮೆಟ್ರೋನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕೇವಲ ರಾಜಕೀಯ ಗಿಮಿಕ್: ಮನೋಜ್ ತಿವಾರಿ title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಬಸ್, ಮೆಟ್ರೋಗಳಲ್ಲಿ ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣ ಯೋಜನೆ ಭರವಸೆ ಕೇವಲ ರಾಜಕೀಯ ಗಿಮಿಕ್ ಎಂದಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಈ ಪೊಳ್ಳು ಭರವಸೆಗಳನ್ನು ದೆಹಲಿ ಜನತೆ ನಂಬುವುದಿಲ್ಲ ಎಂದಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಜ್ರಿವಾಲ್ ಅವರ ಆಲೋಚನೆಯೇನೋ ಸರಿಯಾಗಿದೆ. ಆದರೆ ಅದರ ಕಾರ್ಯರೂಪಕ್ಕೆ ಹಣ ಎಲ್ಲಿದೆ? ಆದಾಯ ಎಲ್ಲಿದೆ? ಮೊದಲು ಅವರು ಹವಾಲ ಹಣದ ಹಗರಣಗಳಿಂದ ಮುಕ್ತರಾಗಬೇಕು, ಆಗಲೇ ದೆಹಲಿಯ ಅಭಿವೃದ್ಧಿ ಸಾಧ್ಯ. ಕೇವಲ ಮಹಿಳೆಯರಷ್ಟೇ ಅಲ್ಲ, ಎಲ್ಲರೂ ಮೆಟ್ರೋ ಮತ್ತು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿವಾರಿ ಹೇಳಿದ್ದಾರೆ.

ಮತ್ತೊಂದೆಡೆ, ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿ ಇದುವರೆಗೂ ಈಡೇರಿಸದ ದೆಹಲಿಯ ನೀರಿನ ಸಮಸ್ಯೆ, ಮೂಲಭೂತ ಸೌಕರ್ಯ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಬಿಜೆಪಿ ಗಮನಹರಿಸಲಿದೆ ಎಂದಿದ್ದಾರೆ.

ಮೆಟ್ರೋ ಮತ್ತು ಡಿಟಿಸಿ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣದ ಅನುಭವ ಪಡೆಯಬಹುದು. ಇದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಇನ್ನೆರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ದೆಹಲಿ ಸಿಎಂ ಅರವಿಂದ್' ಕೇಜ್ರಿವಾಲ್ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದರು.
 

Trending News