ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಆರಂಭ; ಜೈಲಾ? ಬೇಲಾ?

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಆರಂಭವಾಗಲಿದೆ.

Last Updated : Sep 18, 2019, 03:52 PM IST
ಕೆಲವೇ ಕ್ಷಣಗಳಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಆರಂಭ; ಜೈಲಾ? ಬೇಲಾ? title=

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಆರಂಭವಾಗಲಿದೆ.

ಮಂಗಳವಾರ ನಡೆದ ತೀವ್ರ ವಾದ ವಿವಾದಗಳ ಬಳಿಕ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದ ನ್ಯಾಯಾಲಯ ಇಂದು ಆ ಅರ್ಜಿಯ ವಿಚಾರಣೆ ನಡೆಸಲಿದ್ದು, ಡಿಕೆಶಿ ಅವರಿಗೆ ಜಾಮೀನು ಸಿಗಲಿದೆಯೇ ಅಥವಾ ತಿಹಾರ್ ಜೈಲು ಸೇರಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ಇಂದಿನ ವಿಚಾರಣೆಯಲ್ಲಿ ಜಾಮೀನು ಸಿಕ್ಕಿದ್ದೇ ಆದಲ್ಲಿ, ಇಂದೇ ಡಿಕೆಶಿ ಬಿಡುಗಡೆಯಾಗಲಿದ್ದಾರೆ.

ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಬೇಕು ಎಂದು ಡಿಕೆಶಿ ಪರ ವಕೀಲ ಮುಕುಲ್ ರೋಹ್ಟಗಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅಷ್ಟೇ ಅಲ್ಲದೆ, ಅವರು ದೇಶ ಬಿಟ್ಟು ಹೋಗದಂತೆ, ಅವರ ಪಾಸ್ಪೋರ್ಟ್ ಅನ್ನೂ ಸಹ ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಹೇಳಿದ್ದು, ಜಾಮೀನು ನೀಡುವಂತೆ ಮನವಿ ಮಾಡಿದ್ದರು. 

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇಡಿ ಪರ ವಕೀಲರು, ವಿಚಾರಣೆ ಪೂರ್ಣಗೊಳ್ಳದ ಕಾರಣ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ನ್ಯಾಯಾಲಯ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸದ್ಯ ದೆಹಲಿಯ ಆರ್ ಎಂಎಲ್ ಆಸ್ಪತ್ರೆಗೆ ದಾಖಲಾಗಿರುವ ಡಿಕೆಶಿ ಅವರಿಗೆ ಒಂದು ವೇಳೆ ಜಾಮೀನು ದೊರೆಯದೆ ಇದ್ದಲ್ಲಿ, ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ. 

Trending News