ಮುಂಬೈ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿದೆ. ಮುಂಬೈ ನಗರದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಇಡೀ ನಗರವೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಬಾಂದ್ರಾ, ಬಾಯ್ಖುಲಾ, ಖುರ್ಲಾ ಪ್ರದೇಶಗಳು ಸುರಿಯುತ್ತಿರುವ ಭಾರಿ ಮಳೆಗೆ ಜಲಾವೃತವಾಗಿದೆ ಮತ್ತು ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಕೆಲ ಆಸ್ಪತ್ರೆಗಳಿಗೂ ನೀರು ನುಗ್ಗಿದ್ದು, ರೋಗಿಗಳು ಪರದಾಡುವಂತಾಗಿದೆ.
ಮಳೆಯು ಇಂದು ಕಡಿಮೆಯಾಗಬಹುದೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಆದರೆ ಇನ್ನೂ 24ಗಂಟೆ ಭಾರೀ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. 2005ರ ಜುಲೈ ಬಳಿಕ ಅತೀ ಹೆಚ್ಚು ವರ್ಷಧಾರೆ ಕಂಡಿರೋ ವಾಣಿಜ್ಯನಗರಿಯಲ್ಲಿ, ಇನ್ನೂ ಮೂರು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಅಂತ ಇಲಾಖೆ ಹೇಳಿದೆ.
ಮಳೆಯಿಂದಾಗಿ ಪ್ರತಿಕೂಲ ಹವಮಾನ ಉಂಟಾಗಿರುವುದರಿಂದ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ದು, ಮುಂಬೈಗೆ ಆಗಮಿಸಬೇಕಿದ್ದ 5 ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಅಲ್ಲದೆ ಭಾರೀ ಗಾಳಿ ಮಳೆಯಿಂದ ಮುಂಬೈ ವಿಮಾನ ನಿಲ್ದಾಣವು ಜಲಾವೃತವಾಗಿದೆ.