ನವದೆಹಲಿ: ತಮಿಳುನಾಡಿನ ಕೆಲವು ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ರಾಮನಾಥಪುರಂನಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ನೀಲಗಿರಿಯ ಜಿಲ್ಲಾಧಿಕಾರಿ ಕೂಡ ಭಾರಿ ಮಳೆಯ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ನಿನ್ನೆ, ಕೊಯಮತ್ತೂರು ಮತ್ತು ಕನ್ಯಾಕುಮಾರಿಯಲ್ಲಿಯೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.
ಪ್ರಾದೇಶಿಕ ಹವಾಮಾನ ಕಚೇರಿಯ ಪ್ರಕಾರ, ಮುಂದಿನ ಐದು ದಿನಗಳು ಈಶಾನ್ಯ ಮಾನ್ಸೂನ್ ಮುಂದುವರಿಯಲಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ನೀಲಗಿರಿ, ಕೊಯಮತ್ತೂರು, ಥೇನಿ ಮತ್ತು ದಿಂಡಿಗುಲ್ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯ್ಯತೆಯಿದ್ದು, ಜನರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಏತನ್ಮಧ್ಯೆ, ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಎರಡು ದಿನಗಳವರೆಗೆ ಕೊಡೈಕನಾಲ್ ಬೆಟ್ಟದ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ದಿಂಡಿಗಲ್ ಆಡಳಿತವು ಸೂಚನೆ ನೀಡಿದೆ. ನೀಲಗಿರಿ ಜಿಲ್ಲೆಯಲ್ಲಿ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 10 ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.