ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಲವೆಡೆ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಧ್ಯಪ್ರದೇಶದ ಮಾಂಡ್ಸೌರ್, ರತ್ಲಂ, ಅಗರ್-ಮಾಲ್ವಾ, ಶಾಜಾಪುರ, ಭಿಂದ್ ಶಿಯೋಪುರ್, ನೀಮುಚ್, ದಮೋಹ್, ರೈಸನ್ ಮತ್ತು ಅಶೋಕ್ ನಗರ ಜಿಲ್ಲೆಗಳು ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿದ್ದು, ಈ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿವೆ.
ರಾಜಸ್ಥಾನದ ಕೋಟಾ, ಬುಂಡಿ, ಬಾರನ್, ಜ್ಹಾಲಾವರ್ ಮತ್ತು ಚಿತ್ತೋರ್ಗರ್ ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಸೃಷ್ಟಿಯಾಗಿದ್ದು, ಚಂಬಲ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಭಾರಿ ಮಳೆಯಿಂದಾಗಿ ರಾಣಾ ಪ್ರತಾಪ್ ಸಾಗರ್ ಅಣೆಕಟ್ಟು, ಜವಾಹರ್ ಸಾಗರ್ ಮತ್ತು ಕೋಟಾ ಬ್ಯಾರೇಜ್ ಅಣೆಕಟ್ಟಿನ ಎಲ್ಲಾ ದ್ವಾರಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ದೆಹಲಿ-ಮುಂಬೈ ಮಾರ್ಗದ ಹಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಹವಾಮಾನ ವೈಪರೀತ್ಯ ಮತ್ತು ರೈಲ್ವೆ ಹಳಿಗಳಲ್ಲಿ ನೀರು ನಿಂತಿರುವ ಕಾರಣ ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಬಾರನ್, ಜ್ಹಾಲಾವರ್, ಕೋಟಾ ಮತ್ತು ಚಿತ್ತೋರ್ಗರ್ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.
ರಾಜಸ್ಥಾನದ ವಿಪತ್ತು ನಿರ್ವಹಣಾ ಸಚಿವ ಮಾಸ್ಟರ್ ಭನ್ವರ್ಲಾಲ್ ಮೇಘವಾಲ್ ಅವರು ಸರ್ಕಾರಿ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಪ್ರವಾಹ ಪೀಡಿತರಿಗೆ ಶೀಘ್ರದಲ್ಲಿಯೇ ಅಗತ್ಯ ನೆರವು ನೀಡುವಂತೆ ಆದೇಶಿಸಿದ್ದಾರೆ. ಸೇನಾ ಪಡೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ.