ನವದೆಹಲಿ: ಹಿಂದೂಗಳೂ ಸಹ ಹಿಂಸಕರು. ಇದಕ್ಕೆ ರಾಮಾಯಣ, ಮಹಾಭಾರತ ಪುರಾಣ ಕಥೆಗಳೇ ಸಾಕ್ಷಿ ಎಂದು ಸಿಪಿಐ ಮುಖ್ಯಸ್ಥ ಸೀತಾರಾಂ ಯಚೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಹಿಂದೂಗಳಿಗೆ ಹಿಂಸೆಯಲ್ಲಿ ನಂಬಿಕೆಯಿಲ್ಲ ಎಂದು ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ. ದೇಶದಲ್ಲಿ ಹಲವರು ರಾಜರು ಯುದ್ಧಗಳನ್ನು ಮಾಡಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಯುದ್ಧಗಳೂ ಸಹ ಹಿಂಸೆಯಿಂದಲೇ ಕೂಡಿವೆ. ಓರ್ವ ಆರ್ಎಸ್ಎಸ್ ಪ್ರಚಾರಕರಾಗಿ ನೀವು ಪುರಾಣ ಕಥೆಗಳನ್ನು ಹೇಳುತ್ತಿರಿ. ಆದರೂ ಹಿಂದುಗಳು ಹಿಂಸಾತ್ಮಕರಲ್ಲ ಎಂದು ಹೇಗೆ ಹೇಳುತ್ತೀರಿ? " ಎಂದು ಭೋಪಾಲ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಯಚೂರಿ ಹೇಳಿದರು.
Sitaram Yechury, CPI(M): Ramayana & Mahabharata are also filled with instances of violence & battles. Being a pracharak, you narrate the epics but still claim Hindus can't be violent? What is the logic behind saying there is a religion which engages in violence & we Hindus don't pic.twitter.com/S3ZpDj102u
— ANI (@ANI) May 3, 2019
ಹಿಂದೂಗಳು ಹಿಂಸಾಚಾರದಲ್ಲಿ ತೊಡಗುವುದಿಲ್ಲ ಎಂಬುದನ್ನು ಇತಿಹಾಸ ಒಪ್ಪುವುದಿಲ್ಲ. ಅಷ್ಟಕ್ಕೂ ಹಿಂಸಾಚಾರದಲ್ಲಿ ಒಂದು ಧರ್ಮವಿದೆ ಎಂದು ಹೇಳುವುದು ಮತ್ತು ಅದರಲ್ಲಿ ಹಿಂದುಗಳು ಇಲ್ಲ ಎಂದು ಹೇಳುವುದರಲ್ಲಿ ಯಾವ ತರ್ಕವಿದೆ? ಎಂದು ಯಚೂರಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಭೋಪಾಲ್ ನಲ್ಲಿ ಟಿಕೆಟ್ ನೀಡುವ ಮೂಲಕ ಬಿಜೆಪಿ ಹಿಂದೂಗಳ ವೋಟ್ ಬ್ಯಾಂಕಿನ ಧ್ರುವೀಕರಿಸುತ್ತಿದೆ. ಬಿಜೆಪಿಗೆ ಶೇ.50 ಸ್ಥಾನಗಳನ್ನು ಗೆಲ್ಲಲು ಸಾಧ್ಯವೋ, ಇಲ್ಲವೋ ಎಂಬ ಭಯವಿದೆ. ಹೀಗಾಗಿ ಮತಕ್ಕಾಗಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.