ನವದೆಹಲಿ: ಯುವ ಭಾರತ 'ಐದನೇ ತಲೆಮಾರ'ನ್ನು ಬಯಸುವುದಿಲ್ಲ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿಕೆ ನೀಡಿದ್ದು, 2024 ರಲ್ಲಿ ರಾಹುಲ್ ಗಾಂಧಿಯನ್ನು ಸಂಸತ್ತಿಗೆ ಮರು ಆಯ್ಕೆ ಮಾಡುವ ದುರಂತವನ್ನು ಕೇರಳ ಪುನರಾವರ್ತಿಸಿದರೆ, ಅದು ಕೇವಲ "ಕಷ್ಟಪಟ್ಟು ದುಡಿಯುವ" ಮತ್ತು "ಸ್ವಯಂ ನಿರ್ಮಿತ" ನರೇಂದ್ರ ಮೋದಿಯವರಿಗಷ್ಟೇ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ರಾಮಚಂದ್ರ ಗುಹಾ, 'ನೀವು(ಮಲೆಯಾಳಿಗಳು) ಏಕೆ ರಾಹುಲ್ ಗಾಂಧಿಯವರನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದೀರಿ, ನಾನು ವೈಯಕ್ತಿಕವಾಗಿ ರಾಹುಲ್ ಗಾಂಧಿ(Rahul Gandhi) ವಿರೋಧಿ ಅಲ್ಲ. ಅವರು ಸೌಮ್ಯ ನಡತೆಯ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆದರೆ ಯುವ ಭಾರತವು ಕುಟುಂಬದ ಐದನೇ ಪೀಳಿಗೆಯನ್ನು ಬಯಸುವುದಿಲ್ಲ ಎಂದು ಹೇಳಿದರು.
ಇದೇ ವೇಳೆ 2024 ರರ ರಾಷ್ಟ್ರೀಯ ಚುನಾವಣೆಯ ಸಂದರ್ಭದಲ್ಲಿ ಕೇರಳಾ ಜನರು ರಾಹುಲ್ ಗಾಂಧಿಯವರನ್ನು ಮತ್ತೆ ಆಯ್ಕೆ ಮಾಡಿದ್ದೆ ಆದರೆ, ನೀವು ನರೇಂದ್ರ ಮೋದಿ (Narendra Modi) ಗೆ ಮಾತ್ರ ಸಹಾಯ ಮಾಡುತ್ತೀರಿ. ಏಕೆಂದರೆ ನರೇಂದ್ರ ಮೋದಿಯವರ ದೊಡ್ಡ ಶಕ್ತಿ ಎಂದರೆ ಅವರು ರಾಹುಲ್ ಗಾಂಧಿ ಅಲ್ಲ ಎಂದು ಅವರು ತಿಳಿಸಿದರು.
Historian Ramachandra Guha: If you Malyalis make the mistake of re-electing Rahul Gandhi in 2024 too, you are merely handing over an advantage to Narendra Modi because Narendra Modi's great advantage is that he is not Rahul Gandhi. (17.1) https://t.co/i0pgZqJ4V3
— ANI (@ANI) January 18, 2020
ಕಾಂಗ್ರೆಸ್ ಆದರ್ಶವಾದಕ್ಕೆ ದ್ರೋಹ ಮತ್ತು ಎಡಪಂಥೀಯರ ಬೂಟಾಟಿಕೆ ಭಾರತದಲ್ಲಿ ಧಾರ್ಮಿಕ ಅತಿರೇಕದ ದೇಶಭಕ್ತಿಗೆ ದಾರಿ ಮಾಡಿಕೊಟ್ಟಿದೆ ಎಂದು ಇದೇ ವೇಳೆ ಗುಹಾ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.
"ನನಗೆ ಕೇರಳಿಗರ ವಿರುದ್ಧ ಒಂದೇ ಒಂದು ದೂರಿದೆ. ಅದು ನೀವು ರಾಹುಲ್ ಗಾಂಧಿಯವರನ್ನು ಸಂಸದರಾಗಿ ಆಯ್ಕೆ ಮಾಡಿರುವುದು. ಅವರು ಹಳೆಯ ಕುಟುಂಬ ರಾಜವಂಶದ ಭಾಗವಾಗಿದ್ದಾರೆ. ಕಾಂಗ್ರೆಸ್ ಆದರ್ಶವಾದಕ್ಕೆ ದ್ರೋಹ ಮತ್ತು ಎಡಪಂಥೀಯರ ಬೂಟಾಟಿಕೆ ಭಾರತದಲ್ಲಿ ಧಾರ್ಮಿಕ ಜಿಂಗೊಯಿಸಂಗೆ(ಒಂದು ರೀತಿಯ ಅತಿರೇಕದ ರಾಷ್ಟ್ರಪ್ರೇಮ) ದಾರಿ ಮಾಡಿಕೊಟ್ಟಿದೆ" ಎಂದು ಅವರು ಆರೋಪಿಸಿದರು.
ವಯನಾಡ್ ಸಂಸದರ ವಿದೇಶ ಪ್ರವಾಸಗಳ ಬಗ್ಗೆಯೂ ಪ್ರಸ್ತಾಪಿಸಿದ ರಾಮಚಂದ್ರ ಗುಹಾ ಅವರು ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುತ್ತಾ, "ನರೇಂದ್ರ ಮೋದಿ ಸ್ವಯಂ ನಿರ್ಮಿತರು. ಅವರು 15 ವರ್ಷಗಳ ಕಾಲ ಒಂದು ರಾಜ್ಯವನ್ನು ಆಳಿದರು. ಅವರಿಗೆ ಆಡಳಿತಾತ್ಮಕ ಅನುಭವವಿದೆ, ಅವರು ನಂಬಲಾಗದಷ್ಟು ಶ್ರಮಿಸುತ್ತಿದ್ದಾರೆ ಮತ್ತು ಅವರು ಎಂದಿಗೂ ಯುರೋಪಿನಲ್ಲಿ ರಜಾದಿನಗಳನ್ನು ಕಳೆದಿಲ್ಲ" ಎನ್ನುತ್ತಾ ತಾವು ಇಲ್ಲವನ್ನೂ ಬಹಳ ಗಂಭೀರವಾಗಿ ಹೇಳುತ್ತಿರುವುದಾಗಿ ತಿಳಿಸಿದರು.
ಗಾಂಧಿಯ ನಂತರ ಭಾರತ(India After Gandhi), ಗಾಂಧಿಯ ಮೊದಲು ಭಾರತ(Gandhi before India) ಮತ್ತು ಗಾಂಧಿ ದಿ ಇಯರ್ ಡೇಟ್ ಚೇಂಜ್ ದಿ ವರ್ಲ್ಡ್(Gandhi: The Years That Changed the World) ಲೇಖನಗಳ ಭಾರತದ ಖ್ಯಾತ ಬರಹಗಾರ ರಾಮಚಂದ್ರ ಗುಹಾ, ಮೋದಿ ಸರ್ಕಾರದ ದೊಡ್ಡ ವಿಮರ್ಶಕರಾಗಿದ್ದಾರೆ. ಆದಾಗ್ಯೂ, ಕುಟುಂಬ ರಾಜಕಾರಣ ಮತ್ತು ಇತರ ಹಲವು ವಿಷಯಗಳ ಬಗ್ಗೆ ಅವರು ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ(CAA) ಅನ್ನು ಬಹಿರಂಗವಾಗಿ ವಿರೋಧಿಸಿದವರಲ್ಲಿ ರಾಮಚಂದ್ರ ಗುಹಾ ಸಹ ಒಬ್ಬರು. ಅಲ್ಲದೆ ಈ ಕಾನೂನಿನ ವಿರುದ್ಧ ನಿರಂತರವಾಗಿ ಅವರು ವಾಗ್ಧಾಳಿ ನಡೆಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗುಹಾ ಅವರನ್ನು ಸೆಕ್ಷನ್ -144 ಅನ್ನು ಉಲ್ಲಂಘಿಸಿದ್ದಕ್ಕಾಗಿ ನಗರ ಪೊಲೀಸರು ಗುರುವಾರ ಅವರನ್ನು ಟೌನ್ ಹಾಲ್ ಸೆಂಟರ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ನಂತರ ಪೊಲೀಸರು 61 ವರ್ಷದ ಗುಹಾ ಅವರನ್ನು ಬಿಡುಗಡೆ ಮಾಡಿದರು.