ಗಾಂಧೀಜಿಗೆ ಅವಮಾನಿಸಿದ ಸಾದ್ವಿ ಪ್ರಗ್ಯಾರನ್ನು ನಾನೆಂದೂ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ

ಸಾಧ್ವಿ ಪ್ರಗ್ಯಾ ಕ್ಷಮೆ ಕೇಳಿರಬಹುದು. ಆದರೆ, ನಾನೆಂದೂ ಅವರನ್ನು ಕ್ಷಮಿಸುವುದಿಲ್ಲ ಎಂದು ಪ್ರದಾನಿ ಮೋದಿ ಹೇಳಿದ್ದಾರೆ.

Last Updated : May 17, 2019, 04:45 PM IST
ಗಾಂಧೀಜಿಗೆ ಅವಮಾನಿಸಿದ ಸಾದ್ವಿ ಪ್ರಗ್ಯಾರನ್ನು ನಾನೆಂದೂ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ title=

ನವದೆಹಲಿ: ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳುವ ಮೂಲಕ ಮಹಾತ್ಮ ಗಾಂಧೀಜಿಯನ್ನು ಅವಮಾನಿಸಿದ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ನಾನೆಂದೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, "ಮಹಾತ್ಮ ಗಾಂಧೀಜಿ ಅಥವಾ ಗೋಡ್ಸೆ ಬಗ್ಗೆ ಹೇಳಿಕೆಗಳನ್ನು ನೀಡುವುದು ತಪ್ಪು ಮತ್ತು ಸಮಾಜಕ್ಕೆ ಒಳ್ಳೆಯದಲ್ಲ. ತನ್ನ ಹೇಳಿಕೆಗಾಗಿ ಸಾಧ್ವಿ ಪ್ರಗ್ಯಾ ಕ್ಷಮೆ ಕೇಳಿರಬಹುದು. ಆದರೆ, ನಾನೆಂದೂ ಅವರನ್ನು ಕ್ಷಮಿಸುವುದಿಲ್ಲ" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 

ಗೋಡ್ಸೆ ಬಗ್ಗೆ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ಬಗ್ಗೆ ಮೌನವಹಿಸಿರುವುದೇಕೆ ಎಂದು ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಯನ್ನು ಇಂದು ಬೆಳಿಗ್ಗೆ ಪ್ರಶ್ನಿಸಿದ್ದರು. "ಒಂದೆಡೆ ಸಾಧ್ವಿ ಪ್ರಗ್ಯಾ ಗೋಡ್ಸೆಯನ್ನು ದೇಶಭಕ್ತ ಎನ್ನುತ್ತಾರೆ. ಮತ್ತೊಂದೆಡೆ ಹಿಂಸಾಚಾರಕ್ಕೆ ವಿದ್ಯಾಸಾಗರರ ಪ್ರತಿಮೆ ಬಲಿಯಾಗಿದೆ. ಹೀಗಿದ್ದರೂ ಪ್ರಧಾನಿ ಮೌನ ವಹಿಸಿದ್ದಾರೆ" ಎಂದು ಸಿಬ್ಬಲ್ ಟ್ವೀಟ್ ಮಾಡಿದ್ದರು. 

ಕೆಲ ದಿನಗಳ ಹಿಂದೆ ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್, ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನೇ ನಾಥೂರಾಮ್ ಗೋಡ್ಸೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್, ನಾಥೂರಾಮ್ ಗೋಡ್ಸೆ ಒಬ್ಬ ಅಪ್ಪಟ ದೇಶಭಕ್ತ. ಈಗಲೂ ದೇಶಭಕ್ತರೇ ಹಾಗೂ ಮುಂದೆಯೂ ದೇಶಭಕ್ತರಾಗಿಯೇ ಉಳಿಯುತ್ತಾರೆ ಎಂದು ಹೇಳಿದ್ದರು. ಪ್ರಗ್ಯಾ ನೀಡಿದ್ದ ಈ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದು ಪ್ರಜ್ಞಾ ಕ್ಷಮೆ ಕೇಳಿದ್ದರು.
 

Trending News