ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಪ್ ಅಭ್ಯರ್ಥಿ ಆತಿಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಆರೋಪ ಸಾಬೀತಾದರೆ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.
"ಅರವಿಂದ್ ಕೇಜ್ರಿವಾಲ್ ರೀತಿಯ ವ್ಯಕ್ತಿಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಪಡೆದಿರುವುದಕ್ಕೆ ನಾಚಿಕೆಯಾಗುತ್ತದೆ. ಆಪ್ ಅಭ್ಯರ್ಥಿ ವಿರುದ್ಧದ ಕರಪತ್ರಗಳನ್ನು ನಾನು ಪ್ರಕಟಿಸಿ, ಹಂಚುತ್ತಿರುವ ಆರೋಪ ಸಾಬೀತಾದರೆ ತಕ್ಷಣವೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ" ಎಂದು ಕೇಜ್ರಿವಾಲ್ ಹಾಗೂ ಅಭ್ಯರ್ಥಿ ಆತಿಶಿಗೆ ಗಂಭೀರ್ ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್ "ನಿಮ್ಮದೇ ಪಕ್ಷದ ಮಹಿಳೆಯ ಗೌರವ, ಘನತೆಗಳಿಗೆ ಧಕ್ಕೆ ತರುತ್ತಿರುವ ನಿಮ್ಮ ನಡೆ ಅಸಹ್ಯ ಮೂಡಿಸುತ್ತದೆ, ಇದು ಚುನಾವಣೆ ಗೆಲ್ಲುವುದಕ್ಕಾಗಿ ಮಾಡಲಾಗುತ್ತಿದೆ, ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದಕ್ಕಾಗಿ ಪೊರಕೆಯ ಅವಶ್ಯಕತೆ ಇದೆ" ಎನ್ನುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.