ಶ್ರೀನಗರ: ಪುಲ್ವಾಮಾ ದಾಳಿಯ ನಂತರ ಜಮ್ಮು ಕಾಶ್ಮೀರ ಆಡಳಿತ ಮತ್ತೊಂದು ಪ್ರಮುಖ ಕ್ರಮವನ್ನು ತೆಗೆದುಕೊಂಡಿದ್ದು 18 ಪ್ರತ್ಯೇಕತಾವಾದಿಗಳು ಮತ್ತು ಪಿಡಿಪಿ ನಾಯಕ ವಹಿದ್ ಪರ್ರಾ ಮತ್ತು ಐಎಎಸ್ ಅಧಿಕಾರಿ ಶಾಹ್ ಫೈಸಲ್ ಸೇರಿದಂತೆ 155 ನಾಯಕರ ಭದ್ರತೆಯನ್ನು ಬುಧವಾರ ಹಿಂತೆಗೆದುಕೊಂಡಿದೆ.
ಫೆ.20 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್ ಸುಬ್ರಮಣ್ಯಂ ನೇತೃತ್ವದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ, ಪ್ರತ್ಯೇಕವಾದಿ ನಾಯಕರಿಗೆ ಭದ್ರತೆ ನೀಡುವುದು ವ್ಯರ್ಥ ಎಂಬ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಪ್ರತ್ಯೇಕವಾದಿಗಳಿಗೆ ಭದ್ರತೆ ನೀಡುವುದು ವ್ಯರ್ಥ. ಜೊತೆಗೆ ರಾಜ್ಯದ ಬೊಕ್ಕಸಕ್ಕೂ ಒಡೆತ. ಈ ಹಣವನ್ನು ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಚರ್ಚೆಯಾಗಿವೆ.
ಈ ನಾಯಕರನ್ನು ರಕ್ಷಿಸಲು ಸುಮಾರು 1,000 ಪೊಲೀಸರು ಮತ್ತು 100 ವಾಹನಗಳನ್ನು ನಿಯೋಜಿಸಲಾಗಿತ್ತು. ಪುಲ್ವಾಮಾ ದಾಳಿಯ ನಂತರ, ಪ್ರತ್ಯೇಕತಾವಾದಿಗಳ ಮೇಲೆ ಸರಕಾರ ದೊಡ್ಡ ಕ್ರಮ ಕೈಗೊಂಡಿದೆ. ದಾಳಿಯ ನಂತರ, ರಾಷ್ಟ್ರದ ವಿರೋಧಿ ಶಕ್ತಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ಸುಮಾರು 1,000 ಪೊಲೀಸ್ ಸಿಬ್ಬಂದಿ, 100 ವಾಹನಗಳು ಮುಕ್ತವಾದಂತಾಗಿದೆ.
ಪ್ರತ್ಯೇಕತಾವಾದಿ ನಾಯಕರಾದ ಎಸ್ಎಎಸ್ ಗೀಲಾನಿ, ಅಘಾ ಸೈಯದ್, ಮೌಲ್ವಿ ಅಬ್ಬಾಸ್ ಅನ್ಸಾರಿ, ಯಾಸಿನ್ ಮಲಿಕ್, ಸಲೀಮ್ ಗಲಾನಿ, ಶಾಹಿದ್ ಉಲ್ ಇಸ್ಲಾಂ, ಜಾಫರ್ ಅಕ್ಬರ್ ಭಟ್, ನೈಮ್ ಅಹ್ಮದ್ ಖಾನ್, ಮುಖ್ತಾರ್ ಅಹ್ಮದ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದೆ.
ಇದಲ್ಲದೆ, ಇತ್ತೀಚಿಗಷ್ಟೇ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ 2010ನೇ ಬ್ಯಾಚ್ ನ ಐಎಎಸ್ ಟಾಪರ್ ಶಾಹ್ ಫೈಸಲ್ ಹಾಗೂ ಪಿಡಿಪಿ ನಾಯಕ ವಹಿದ್ ಪರ್ರಾ ಸೇರಿದಂತೆ 155 ರಾಜಕಾರಣಿಗಳು ಹಾಗೂ ಹೋರಾಟಗಾರರ ಭದ್ರತೆಯನ್ನು ಹಿಂಪಡೆಯಲಾಗಿದೆ.