ಕೇರಳ ಕಮ್ಯುನಿಸ್ಟ್ ಚಳುವಳಿಯ ದಿಟ್ಟ ಮಹಿಳಾ ಧ್ವನಿ ಕೆ.ಆರ್.ಗೌರಿ ಅಮ್ಮಾ

ವಯೋಸಹಜ ಖಾಯಿಲೆಯಿಂದ ಕೇರಳದ ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮಾ(102) ತಿರುವಂತಪುರಂನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

Written by - Manjunath N | Last Updated : May 11, 2021, 05:46 PM IST
  • ಆಧುನಿಕ ಕೇರಳದ ನಿರ್ಮಾಣದಲ್ಲಿ ಕೆ.ಆರ್ ಗೌರಿ ಅಮ್ಮಾ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಅಷ್ಟೇ ಅಲ್ಲದೆ ಕಮ್ಯುನಿಸ್ಟ್ ಇತಿಹಾಸದಲ್ಲಿಯೂ ಕೂಡ ಅವರ ಪಾತ್ರ ಅಷ್ಟೇ ಮಹತ್ತರವಾದದ್ದು.
  • ಸಕ್ರೀಯ ರಾಜಕಾರಣದಲ್ಲಿ ಮಹಿಳೆಯರೇ ವಿರಳವಾಗಿದ್ದಂತಹ ಸಂದರ್ಭದಲ್ಲಿ ಕೆ.ಆರ್.ಗೌರಿ ಅಮ್ಮಾ ಚಳುವಳಿಗಳ ಮೂಲಕ ರಾಜಕೀಯಕ್ಕೆ ಧುಮುಕುವ ಮೂಲಕ ಮಹಿಳಾ ಸಬಲೀಕರಣದ ಪರವಾಗಿ ಕೊನೆಯವರೆಗೂ ಧ್ವನಿ ಎತ್ತಿದರು.
  • "ಕೇರಳದ ರಾಜಕೀಯ ಇತಿಹಾಸ ಮತ್ತು ರಾಜ್ಯದಲ್ಲಿನ ಕಮ್ಯುನಿಸಂನ ಬೆಳವಣಿಗೆಯು ಗೌರಿ ಅಮ್ಮಾ ಇಲ್ಲದೆ ಇರಲು ಸಾಧ್ಯವಿಲ್ಲ"
ಕೇರಳ ಕಮ್ಯುನಿಸ್ಟ್ ಚಳುವಳಿಯ ದಿಟ್ಟ ಮಹಿಳಾ ಧ್ವನಿ ಕೆ.ಆರ್.ಗೌರಿ ಅಮ್ಮಾ title=
Photo Courtesy: Twitter

ನವದೆಹಲಿ: ವಯೋಸಹಜ ಖಾಯಿಲೆಯಿಂದ ಕೇರಳದ ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮಾ(102) ತಿರುವಂತಪುರಂನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

ಎಪ್ರಿಲ್ 22 ರಂದು ಗೌರಿ ಅಮ್ಮಾ ಅವರನ್ನು ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದ ವಾರದಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು, ಆದರೆ ಮಂಗಳವಾರ (ಮೇ 11) ಬೆಳಿಗ್ಗೆ 7 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆಧುನಿಕ ಕೇರಳ (Kerala) ದ ನಿರ್ಮಾಣದಲ್ಲಿ ಕೆ.ಆರ್ ಗೌರಿ ಅಮ್ಮಾ  ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಷ್ಟೇ ಅಲ್ಲದೆ ಕಮ್ಯುನಿಸ್ಟ್ ಇತಿಹಾಸದಲ್ಲಿಯೂ ಕೂಡ ಅವರ ಪಾತ್ರ ಅಷ್ಟೇ ಮಹತ್ತರವಾದದ್ದು, ಸಕ್ರೀಯ ರಾಜಕಾರಣದಲ್ಲಿ ಮಹಿಳೆಯರೇ ವಿರಳವಾಗಿದ್ದಂತಹ ಸಂದರ್ಭದಲ್ಲಿ ಕೆ.ಆರ್.ಗೌರಿ ಅಮ್ಮಾ  ಚಳುವಳಿಗಳ ಮೂಲಕ ರಾಜಕೀಯಕ್ಕೆ ಧುಮುಕುವ ಮೂಲಕ ಮಹಿಳಾ ಸಬಲೀಕರಣದ ಪರವಾಗಿ ಕೊನೆಯವರೆಗೂ ಧ್ವನಿ ಎತ್ತಿದರು. ಕೇರಳ ವಿಧಾನಸಭೆಯಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿದ ಮಹಿಳಾ ಶಾಸಕಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಲ್ಲದೆ, ಅತಿ ಹೆಚ್ಚು ಸಂಖ್ಯೆಯ ವಿಧಾನಸಭೆಗಳಲ್ಲಿ ಸೇವೆ ಸಲ್ಲಿಸಿದವರು, ವಿಧಾನಸಭೆಯ ಅತ್ಯಂತ ಹಿರಿಯ ಮಹಿಳಾ ಸದಸ್ಯೆ, ಹಿರಿಯ ಮಹಿಳಾ ಮಂತ್ರಿ ಎನ್ನುವ ಶ್ರೇಯವನ್ನು ಹೊಂದಿದ್ದರು.

ವಿದ್ಯಾರ್ಥಿನಿಯಾಗಿದ್ದಾಗಲೇ ಚಳುವಳಿಗೆ ಧುಮಿಕಿದ್ದ ಗೌರಿ ಅಮ್ಮಾ: 

ಹಿಂದುಳಿದ ಈಜವಾ ಸಮುದಾಯದಲ್ಲಿ ಕಾನೂನು ಪದವಿ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಹೊಂದಿದ್ದ ಗೌರಿ ಅಮ್ಮಾ, 1946 ರಲ್ಲಿ ವಿದ್ಯಾರ್ಥಿನಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು.1948 ರಲ್ಲಿ ತಿರುವಾಂಕೂರಿನಲ್ಲಿ ನಡೆದ ಮೊದಲ ಸಾರ್ವತ್ರಿಕ ಮತದಾರರ ಚುನಾವಣೆ ಮತ್ತು 1977 ಮತ್ತು 2006 ರ ವಿಧಾನಸಭಾ ಚುನಾವಣೆಗಳಲ್ಲಿ ಹೊರತುಪಡಿಸಿ, ಗೌರಿ ಅಮ್ಮ ಇತರ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ವಿಜಯಶಾಲಿಯಾಗಿದ್ದಾರೆ. 

ಸುದೀರ್ಘ ರಾಜಕೀಯ ಜೀವನ:

1951 ರಲ್ಲಿ ಗೌರಿ ಅಮ್ಮಾ  ಥರಾವರೂರಿನಿಂದ ಮಲಬಾರ್ ಪ್ರದೇಶದ ತಿರುವಾಂಕೂರು-ಕೊಚ್ಚಿನ್ ವಿಧಾನಸಭೆ ಮತ್ತು ಮದ್ರಾಸ್ ವಿಧಾನಸಭೆ ಕ್ಷೇತ್ರಗಳಿಗೆ ಮತ್ತು 1954 ರಲ್ಲಿ ಚೆರ್ತಾಲಾದಿಂದ ತಿರುವಾಂಕೂರು-ಕೊಚ್ಚಿನ್ ಕ್ಷೇತ್ರಕ್ಕೆ ಆಯ್ಕೆಯಾದರು. 1948 ಮತ್ತು 2006 ರ ನಡುವೆ ಅವರು ಸ್ಪರ್ಧಿಸಿದ 16 ಚುನಾವಣೆಗಳಲ್ಲಿ ಗೌರಿ ಅಮ್ಮ 13 ಬಾರಿ ಗೆದ್ದರು. ಅವರು ವಿಧಾನಸಭೆಯಲ್ಲಿ ಎಂಟು ಬಾರಿ ಚೆರ್ತಲಾ ಮತ್ತು ಅರೂರ್ ನ್ನು ಪ್ರತಿನಿಧಿಸಿದರು.1957, 1967, 1980 ಮತ್ತು 1987 ರಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು.

ಭೂ ಸುಧಾರಣಾ ಕಾಯ್ದೆಯಲ್ಲಿ ಮಹತ್ವದ ಪಾತ್ರ:

ಗೌರಿ ಅಮ್ಮಾ  ಮುಖ್ಯಮಂತ್ರಿ ಇ.ಎಂ.ಎಸ್ ನಂಬೂದರಿಪಾಡ್ ನೇತೃತ್ವದ ವಿಶ್ವದ ಮೊದಲ ಚುನಾಯಿತ ಪ್ರಜಾಪ್ರಭುತ್ವ ಕಮ್ಯುನಿಸ್ಟ್ ಸರ್ಕಾರದಲ್ಲಿ ಏಪ್ರಿಲ್ 1957 ರಿಂದ 1959 ರವರೆಗೆ ಕಂದಾಯ, ಅಬಕಾರಿ ಮತ್ತು ದೇವಸ್ವಂ ಸಚಿವರಾಗಿ ಸೇವೆ ಸಲ್ಲಿಸಿದರು.ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಬದಲಾವಣೆಗಳಿಗೆ ಕಾರಣವಾದ ಐತಿಹಾಸಿಕ ಭೂ ಸುಧಾರಣಾ ಮಸೂದೆಯನ್ನು ಜಾರಿಗೆ ತರುವ ಮೂಲಕ ಶತಮಾನಗಳಷ್ಟು ಹಳೆಯದಾದ ಊಳಿಗಮಾನ ಪದ್ಧತಿಯನ್ನು ಕೊನೆಗೊಳಿಸಿದ್ದು, ಒಂದು ರೀತಿಯಲ್ಲಿ ಅವರಿಗೆ ಕೇರಳದಲ್ಲಿ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.

ನಂತರ, ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಂತಹ ಇಎಂಎಸ್ ನಂಬೂದರಿಪಾಡ್ ಅವರ ಸರ್ಕಾರದ ಸಚಿವ ಸಂಪುಟದಲ್ಲಿ ಮಾರ್ಚ್ 1967 ರಿಂದ ಅಕ್ಟೋಬರ್ 1969 ರವರೆಗೆ ಕಂದಾಯ, ನಾಗರಿಕ ಸರಬರಾಜು, ಮಾರಾಟ ತೆರಿಗೆ, ಅಬಕಾರಿ ಮತ್ತು ಸಮಾಜ ಕಲ್ಯಾಣ ಖಾತೆಗಳನ್ನು ನಿರ್ವಹಿಸಿದರು.

ಟಿ.ವಿ. ಥಾಮಸ್ ಮತ್ತು ಗೌರಿ ಅಮ್ಮ ಅವರು ಕೇರಳ ಕಮ್ಯುನಿಸ್ಟ್ ಸರ್ಕಾರದಲ್ಲಿ ಪ್ರಮುಖ ದಂಪತಿಗಳಾಗಿದ್ದರು.ಇಎಂಎಸ್ ನಂಬೂದರಿಪಾಡ್ ನೇತೃತ್ವ ಸರ್ಕಾರದಲ್ಲಿ ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಇದೇ ವೇಳೆ ಪತಿ-ಪತ್ನಿಯರು ಇಬ್ಬರು ಶಾಸಕರ ಹುದ್ದೆಯನ್ನು ಅಲಂಕರಿಸಿದವರೆಂದರೆ ಕೆ. ದಾಮೋದರ ಮೆನನ್ ಮತ್ತು ಲೀಲಾ ದಾಮೋದರ ಮೆನನ್ ಎಂದು ಹೇಳಬಹುದು.

1964 ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಯಾದಾಗ, ದಂಪತಿಗಳು ತಮ್ಮನ್ನು ವಿರೋಧಿಸುವ ಬಣಗಳಲ್ಲಿ ಗುರುತಿಸಿಕೊಂಡರು.1967 ರಲ್ಲಿ ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಎರಡು ಪಕ್ಷಗಳನ್ನು ಪ್ರತಿನಿಧಿಸುವ ಪತ್ನಿ ಮತ್ತು ಪತಿ ಇಬ್ಬರೂ ಮಂತ್ರಿಗಳಾದಾಗ, ಅವರು ತಿರುವನಂತಪುರಂನ ಪಕ್ಕದ ಅಧಿಕೃತ ನಿವಾಸಗಳಲ್ಲಿ ಉಳಿದುಕೊಂಡರು.

ಇ.ಕೆ.ನಯನಾರ್ ಸಚಿವ ಸಂಪುಟದಲ್ಲಿ, ಗೌರಿ ಅಮ್ಮ ಜನವರಿ 1980 ರಿಂದ ಅಕ್ಟೋಬರ್ 1981 ರವರೆಗೆ ಕೃಷಿ ಮತ್ತು ಸಮಾಜ ಕಲ್ಯಾಣ ಸಚಿವರಾಗಿದ್ದರು. ಮಾರ್ಚ್ 1987 ರಿಂದ ಜೂನ್ 1991 ರವರೆಗೆ ಅವರು ಎರಡನೇ ನಾಯನಾರ್ ಸಂಪುಟದಲ್ಲಿ ಕೈಗಾರಿಕೆ, ಸಾಮಾಜಿಕ ಕಲ್ಯಾಣ, ನ್ಯಾಯ ಆಡಳಿತದ ಸಚಿವರಾಗಿ ಕಾರ್ಯನಿರ್ವಹಿಸಿದರು.

ಸಿಪಿಎಂ ಪಕ್ಷದಿಂದ ಬಹಿಷ್ಕಾರ:

ಗೌರಿ ಅಮ್ಮಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 1994 ರಲ್ಲಿ ಸಿಪಿಐ (ಎಂ) ನಿಂದ ಹೊರಹಾಕಲಾಯಿತು, ಆಗ ಅವರು ಜನತಿಪತಿಯ ಸಂರಕ್ಷಣ ಸಮಿತಿ (ಜೆಎಸ್ಎಸ್) ಪಕ್ಷವನ್ನು ಸ್ಥಾಪಿಸಿದರು. ನಂತರ ಜೆಎಸ್ಎಸ್ ಪಕ್ಷವು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಜೊತೆಗೆ ಕೈಜೋಡಿಸಿತು. ಗೌರಿ ಅಮ್ಮ  2004 ರಿಂದ 2006 ರ ಅವಧಿಯಲ್ಲಿ ಒಮ್ಮನ್ ಚಾಂಡಿ ಸಚಿವ ಸಂಪುಟದಲ್ಲಿ ಕೃಷಿ ವಿಶ್ವವಿದ್ಯಾಲಯ, ಪಶು ಸಂಗೋಪನೆ ಖಾತೆಗಳನ್ನು ನಿರ್ವಹಿಸಿದರು. ತದನಂತರ ಅವರು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನ್ನು ತ್ಯಜಿಸಿದರು.

ಗೌರಿ ಅಮ್ಮಾ  ತಮ್ಮ 101ನೇ ವರ್ಷಕ್ಕೆ ಕಾಲಿಟ್ಟಾಗ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಕೇರಳದ ರಾಜಕೀಯ ಇತಿಹಾಸ ಮತ್ತು ರಾಜ್ಯದಲ್ಲಿನ ಕಮ್ಯುನಿಸಂನ ಬೆಳವಣಿಗೆಯನ್ನು ಗೌರಿ ಅಮ್ಮಾ ಅವರನ್ನು ನೆನೆಯದೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಕೊಡುಗೆಯನ್ನು ಸ್ಮರಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News