ರಾಂಚಿ: ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರ ಮದುವೆಯ ವಿಚ್ಛೇದನ ವಿಚಾರವಾಗಿ ಲಾಲೂ ಪ್ರಸಾದ ಯಾದವ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ.
ಸಧ್ಯ 950 ಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲೂ ಪ್ರಸಾದ್ ಇಂದು ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಆರ್ಐಎಂಎಸ್) ನಲ್ಲಿ ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವಾರದ ಹಿಂದೆ ತಂದೆ ಲಾಲು ಅವರನ್ನು ಭೇಟಿಯಾಗಿ ಮದುವೆ ವಿಚ್ಚೇದನದ ವಿಚಾರವಾಗಿ ಚರ್ಚಿಸಿದ್ದ ತೇಜ್ ಪ್ರತಾಪ್ ಯಾದವ್ ಆ ವೇಳೆ ಐಶ್ವರ್ಯ ರೈ ಗೆ ವಿಚ್ಛೇದನ ನೀಡುವ ವಿಚಾರವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದೇ ಮೇ ತಿಂಗಳಲ್ಲಿ ತೇಜ್ ಪ್ರತಾಪ್ ಮಾಜಿ ಸಚಿವ ಚಂದ್ರಿಕಾ ರೈ ಪುತ್ರಿ ಹಾಗೂ ಮಾಜಿ ಬಿಹಾರ ಮುಖ್ಯಮಂತ್ರಿ ದರೋಗಾ ರೈ ಮೊಮ್ಮಗಳಾದ ಐಶ್ವರ್ಯಾ ರೈರನ್ನು ಮದುವೆಯಾಗಿದ್ದರು ಆದರೆ ತಮ್ಮಿಬ್ಬರದು ಸರಿಹೊಂದದ ಜೋಡಿ ಎಂದು ತೇಜ್ ಪ್ರತಾಪ್ ವಿಚ್ಛೇದನಕ್ಕೆ ಮುಂದಾಗಿದ್ದರು. ಈಗ ವಿಚಾರವಾಗಿ ಲಾಲೂ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ವೈದ್ಯ ಡಿ.ಕೆ.ಜಾ "ಲಾಲೂ ಪ್ರಸಾದ್ ಯಾದವ್ ಅವರಿಗೆ ಒತ್ತಡ ಉತ್ತಮವಾದದ್ದಲ್ಲ, 70 ವರ್ಷ ವಯಸ್ಸಿನವರಾಗಿರುವ ಅವರು ಪ್ರತಿದಿನ 14-15 ಔಷಧಿಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಕೆಟ್ಟಪರಿಣಾಮವನ್ನುಂಟು ಮಾಡುತ್ತದೆ. ಸಕ್ಕರೆ (ಮಧುಮೇಹ), ಮೂತ್ರಪಿಂಡ ಸಂಬಂಧಿತ ಮತ್ತು ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ಭಾರಿ ಪ್ರಮಾಣದಲ್ಲಿ ಇನ್ಸುಲಿನ್ ನೀಡಲಾಗಿದೆ" ಎಂದು ಅವರು ತಿಳಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸಕ್ಕರೆ ಮಟ್ಟದಲ್ಲಿ ಏರುಪೇರಾದ ಕಾರಣ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.