ಅಜಾತಶತ್ರು ಅಟಲ್ ಜೀ ಆರೋಗ್ಯ ಸ್ಥಿತಿ ಚಿಂತಾಜನಕ

ಮತ್ತೆ ಏಮ್ಸ್ ಆಸ್ಪತ್ರೆಯತ್ತ ಪ್ರಧಾನಿ ಮೋದಿ.  

Last Updated : Aug 16, 2018, 11:21 AM IST
ಅಜಾತಶತ್ರು ಅಟಲ್ ಜೀ ಆರೋಗ್ಯ ಸ್ಥಿತಿ ಚಿಂತಾಜನಕ title=

ನವದೆಹಲಿ: ದೇಶಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು, ಅಜಾತ ಶತ್ರು ಎಂದೇ ಖ್ಯಾತರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ನಿನ್ನೆ ಸಂಜೆಯಷ್ಟೇ ಭೇಟಿ ಮಾಡಿ ಅಟಲ್ ಜೀ ಆರೋಗ್ಯ ವಿಚಾರಿಸಿದ್ದ ಪ್ರಧಾನಿ ಮೋದಿ ಮತ್ತೆ ಏಮ್ಸ್ ಆಸ್ಪತ್ರೆಯತ್ತ ತೆರೆಳುತ್ತಿದ್ದಾರೆ. 

ಕಳೆದ ಒಂಬತ್ತು ವಾರಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಜಪೇಯಿ ಅವರ ಆರೋಗ್ಯ ಕಳೆದ 24 ಗಂಟೆಯಿಂದ ಕ್ಷೀಣಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಏಮ್ಸ್ ನಿಂದ ಬೆಳಿಗ್ಗೆ ಮತ್ತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೇ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಏಮ್ಸ್ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಇಂದು ರದ್ದುಪಡಿಸಿದೆ. ಇಂದು ಮುಂಜಾನೆ 06:45ರ ಸುಮಾರಿಗೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಾಜಪೇಯಿ ಅವರ ಆರೋಗ್ಯ ವಿಚಾರಿಸಿದರು.

ಬೆಳಿಗ್ಗೆ 08:50ಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಸ್ಪತ್ರೆಗೆ ಭೇಟಿ ನೀಡಿದ್ದರು.
 
ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ತಮ್ಮ ಮಗಳು ಪ್ರತಿಭಾ ಅಡ್ವಾಣಿಯೊಂದಿಗೆ ಏಮ್ಸ್ ಗೆ ತೆರಳಿದ್ದರು.

ಅಲ್ಲದೆ, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಟಲ್ ಜೀ ಆರೋಗ್ಯ ವಿಚಾರಿಸಿದರು. 

ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಚೇತರಿಕೆಗಾಗಿ ದೇಶದಾದ್ಯಂತ ಅವರ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಏಮ್ಸ್ ಗೆ ಭೇಟಿ ನೀಡಿದ್ದರು. ಆಮ್ ಆದ್ಮಿ ಪಾರ್ಟಿಯಿಂದ ರಾಜೀನಾಮೆ ನೀಡಿದ ಅವರ ಸಹಾಯಕ ಅಶುತೋಷ್ ಅವರು ಮಾಜಿ ಪ್ರಧಾನಮಂತ್ರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಎಲ್ಲಾ ಸೈದ್ಧಾಂತಿಕ ಭಿನ್ನತೆಗಳ ಹೊರತಾಗಿಯೂ, ನಾನು ಯಾವಾಗಲೂ ಅಟಲ್ ಜೀ ಯವರನ್ನು ಗೌರವಿಸುತ್ತಿದ್ದೇನೆ. ಅವರು ನಿಜವಾದ ರಾಜಕಾರಣಿಯಾಗಿದ್ದಾರೆ, ಅವರು ಪ್ರಜಾಪ್ರಭುತ್ವವಾದಿ ಕಲ್ಪನೆಗಳಲ್ಲಿ ನಂಬಿಕೆ ಹೊಂದಿದ್ದಾರೆ" ಎಂದು ಅಶುತೋಷ್ ಟ್ವೀಟ್ ಮಾಡಿದ್ದಾರೆ.
 

Trending News