ಮುಂಬೈ: ಲಾಕ್ಡೌನ್ ಮಧ್ಯೆ, ಮುಂಬೈನ ಬಾಂದ್ರಾದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದ ಜನಸಮೂಹ ನಮ್ಮನ್ನು ಮನೆಗೆ ಕಳುಹಿಸಬೇಕೆಂದು ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ವೇಳೆ ನೆರೆದ ಜನರು ನಮ್ಮ ಬಳಿ ತಿನ್ನಲು ಏನೂ ಇಲ್ಲ ಹೀಗಾಗಿ ನಮ್ಮನ್ನು ನಮ್ಮ ನಮ್ಮ ಗ್ರಾಮಗಳಿಗೆ ವಾಪಸ್ ಕಳುಹಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಬಾಂದ್ರಾ ವೆಸ್ಟ್ ನಿಲ್ದಾಣದ ಮುಂಭಾಗದಲ್ಲಿರುವ ಜಮಾ ಮಸೀದಿ ಬಳಿ ಜನರು ಜಮಾಯಿಸಿದ್ದರು. ಇವರಲ್ಲಿ ಹೆಚ್ಚಿನವರು ಯುಪಿ ಮತ್ತು ಬಿಹಾರದಿಂದ ವಲಸೆ ಬಂದ ಕಾರ್ಮಿಕರಿದ್ದಾರೆ. ಆದರೆ, ನಂತರ ಸ್ಥಳೀಯ ಮುಖಂಡರು ಹಾಗೂ ಪೊಲೀಸರ ಹಸ್ತಕ್ಷೇಪದ ಬಳಿಕ ಅವರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಈಗಾಗಲೇ ಮುಂಬೈನ ಬಾಂದ್ರಾ ಪ್ರದೇಶವನ್ನು ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಈ ರೀತಿಯ ಭಾರಿ ಜನಸಮೂಹ ನೆರೆದಿದ್ದು ಇದೀಗ ಚಿಂತೆಗೀಡುಮಾಡಿದೆ. ಇಡೀ ದೇಶದಲ್ಲಿ ಮಹಾರಾಷ್ಟ್ರದಿಂದ ಅತಿ ಹೆಚ್ಚು ಅಂದರೆ 2337 ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೇವಲ ಮುಂಬೈ ಒಂದರಿಂದಲೇ 1500 ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಈ ಕುರಿತು ಹೇಳಿಕೆ ನೀಡಿರುವ ಮಹಾ ಸರ್ಕಾರದ ಮಂತ್ರಿ ನವಾಬ್ ಮಲಿಕ್ ಈ ಎಲ್ಲ ಜನರಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಸರ್ಕಾರ ಎಲ್ಲ ಜನರಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿದ್ದು, ಈ ಜನರು ತಮ್ಮನ್ನು ಮನೆಗೆ ಕಳುಹಿಸುವಂತೆ ವಿನಂತಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.