ಲೋಕಸಭಾ ಚುನಾವಣೆ 2019: ಎರಡನೇ ಹಂತದ ಚುನಾವಣೆ ಅಧಿಸೂಚನೆ ಪ್ರಕಟ

ಎರಡನೇ ಹಂತದಲ್ಲಿ ತಮಿಳುನಾಡಿನ 39 ಸ್ಥಾನಗಳು, ಬಿಹಾರದ 40 ಸ್ಥಾನಗಳಲ್ಲಿ 5 ಸ್ಥಾನಗಳಿಗೆ, ಜಮ್ಮು ಕಾಶ್ಮೀರದ ಆರು, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಕರ್ನಾಟಕದ 28 ಸ್ಥಾನಗಳಲ್ಲಿ 14, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 10 ಮತ್ತು ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Last Updated : Mar 19, 2019, 04:25 PM IST
ಲೋಕಸಭಾ ಚುನಾವಣೆ 2019: ಎರಡನೇ ಹಂತದ ಚುನಾವಣೆ ಅಧಿಸೂಚನೆ ಪ್ರಕಟ title=

ನವದೆಹಲಿ: ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ  ಏಪ್ರಿಲ್ 18ರಂದು ನಡೆಯಲಿದ್ದು, ಈ ಸಂಬಂಧ ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಪ್ರಕಟಿಸಿದೆ. 

ಎರಡನೇ ಹಂತದಲ್ಲಿ 13 ರಾಜ್ಯಗಳ 97 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಹೊರಡಿಸಿರುವ ಎರಡನೇ ಹಂತದ ಚುನಾವಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ದೊರೆತಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 

ರಾಷ್ಟ್ರದ 543 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 26 ಕಡೇ ದಿನವಾಗಿದೆ. ಮಾರ್ಚ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾರ್ಚ್ 29 ನಾಮಪತ್ರಗಳನ್ನು ಹಿಂಪಡೆಯಲು ಕಡೇ ದಿನವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎರಡನೇ ಹಂತದಲ್ಲಿ ತಮಿಳುನಾಡಿನ 39 ಸ್ಥಾನಗಳು, ಬಿಹಾರದ 40 ಸ್ಥಾನಗಳಲ್ಲಿ 5 ಸ್ಥಾನಗಳಿಗೆ, ಜಮ್ಮು ಕಾಶ್ಮೀರದ ಆರು, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಕರ್ನಾಟಕದ 28 ಸ್ಥಾನಗಳಲ್ಲಿ 14, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 10 ಮತ್ತು ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಹಂತದಲ್ಲಿ, ಉತ್ತರಪ್ರದೇಶದ ಎಂಟು ಸ್ಥಾನಗಳಲ್ಲಿ ಆಗ್ರ, ಮಥುರಾ, ನಾಗೀನ, ಅಮ್ರೋಹಾ, ಬುಲಂದ್ ಶಹರ್, ಆಲಿಗಢ್, ಹಾಥ್ರಾಸ್ ಮತ್ತು ಫತೇಪುರ್ ಸಿಕ್ರಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತ್ತೊಂದೆಡೆ, ಬಿಹಾರದ ಕಿಶನ್ ಗಂಜ್, ಕತಿಹಾರ್, ಪೂರ್ನಿಯಾ, ಭಾಗಲ್ಪುರ್ ಮತ್ತು ಬಂಕಾ ಲೋಕಸಭಾ ಕ್ಷೇತ್ರಗಳು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಉಧಮ್ಪುರ ಸೀಟುಗಳಲ್ಲದೆ, ಪಶ್ಚಿಮ ಬಂಗಾಳದ ಜಲಪಾಯ್ಗುಡಿ, ಡಾರ್ಜಿಲಿಂಗ್ ಮತ್ತು ರಾಯ್ಗಂಜ್ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಎರಡನೇ ಹಂತದ ಮತದಾನಕ್ಕೆ ಘೋಷಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

17 ನೇ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನಕ್ಕೆ ಈಗಾಗಲೇ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 11ರಂದು 91 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.  

Trending News