ನವದೆಹಲಿ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ನಂತರ ರಾಜಕೀಯಕ್ಕೆ ಪ್ರವೇಶಿಸಬಹುದು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್ಎಸ್ನೊಂದಿಗೆ ಶುಕ್ರವಾರ ಮಾತನಾಡಿದ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್, ಎಂಎಸ್ ಧೋನಿ 'ಟೀಮ್ ನರೇಂದ್ರ ಮೋದಿ ಭಾಗವಾಗಿ ರಾಜಕೀಯದಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.
ಧೋನಿ ಕೇಸರಿ ಪಕ್ಷಕ್ಕೆ ಸೇರಬಹುದು ಮತ್ತು ಈ ಕುರಿತು ದೀರ್ಘಕಾಲದವರೆಗೆ ಚರ್ಚೆ ನಡೆಯುತ್ತಿದೆ ಎಂದು ಪಾಸ್ವಾನ್ ಹೇಳಿದ್ದಾರೆ. ಧೋನಿ ನನ್ನ ಸ್ನೇಹಿತ, ಅವರು ವಿಶ್ವಖ್ಯಾತಿಯ ಆಟಗಾರ ಮತ್ತು ಅವರನ್ನು ಪಕ್ಷಕ್ಕೆ ತರುವ ಬಗ್ಗೆ ಚರ್ಚೆಗಳು ನಡೆದಿವೆ" ಎಂದು ಬಿಜೆಪಿ ನಾಯಕ ಹೇಳಿದರು.ಇನ್ನು ಮುಂದುವರೆದು "ಈ ವಿಷಯದಲ್ಲಿ, ದೀರ್ಘಕಾಲದವರೆಗೆ ಚರ್ಚೆ ನಡೆಯುತ್ತಿದೆ, ಆದರೂ ಅವರ ನಿವೃತ್ತಿಯ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದರು.
2019 ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು "ಸಂಪರ್ಕ್ ಫಾರ್ ಸಮರ್ಥನ್" ಅಭಿಯಾನದ ಸಂದರ್ಭದಲ್ಲಿ ಧೋನಿ ಅವರನ್ನು ಭೇಟಿ ಮಾಡಿದ್ದರು. ಧೋನಿಯ ತವರು ರಾಜ್ಯ ಜಾರ್ಖಂಡ್ನಲ್ಲಿ ಚುನಾವಣೆ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಮುಂಬರುವ ಜಾರ್ಖಂಡ್ ಚುನಾವಣೆಯಲ್ಲಿ ಧೋನಿ ಸಾಧ್ಯವಾದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಮುಖವು ಆಗಬಹುದು ಎಂದು ಹೇಳಲಾಗಿದೆ.
ಐಸಿಸಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ನಂತರ ಎಂಎಸ್ ಧೋನಿ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ, ಅನೇಕರು ಅಪ್ರತಿಮ ಕ್ರಿಕೆಟಿಗ ದೇಶಕ್ಕಾಗಿ ಆಟವಾಡುವುದನ್ನು ಮುಂದುವರೆಸಬೇಕೆಂದು ಸೂಚಿಸಿದ್ದಾರೆ.