ಮುಂಬೈ: ಇಲ್ಲಿನ ನಾಯರ್ ಆಸ್ಪತ್ರೆಯಲ್ಲಿ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI)ಯಂತ್ರಕ್ಕೆ 32 ವರ್ಷದ ವ್ಯಕ್ರಿಯೋಬ ಬಲಿಯಾಗಿರುವ ಧಾರುಣ ಘಟನೆ ಶನಿವಾರ ನಡೆದಿದೆ.
ತಾಯಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದ ರಾಜೇಶ್ ಮಾರು ಎಂಬಾತ ಇನ್ನೋರ್ವ ರೋಗಿಗೆ ಸಹಾಯ ಮಾಡಲು ಮುಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ನಿಯಮದ ಪ್ರಕಾರ ಎಂಆರ್‌ಐ ಯಂತ್ರವಿರುವ ಕೊಠಡಿಗೆ ಲೋಹದ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಆದರೆ ವಯಸ್ಸಾದ ರೋಗಿಗೆ ವಾರ್ಡ್ ಬಾಯ್ ಜೊತೆ ಸಹಾಯ ಮಾಡಳು ಆಮ್ಲಜನಕದ ಸಿಲಿಂಡರ್ ಅನ್ನು ರಾಜೇಶ್ ಕೊಠಡಿ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಆ ತಕ್ಷಣವೇ MRI ಯಂತ್ರ ಸಿಲಿಂಡರ್ ಹಿಡಿದಿದ್ದ ರಾಜೇಶ್ನನ್ನು ಸೆಳೆದುಕೊಂಡಿದೆ. ನಂತರ ಎರಡೇ ನಿಮಿಷಗಳಲ್ಲಿ ರಾಜೇಶ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಈ ಕುರಿತು ಮಾಹಿತಿ ನೀಡಿದ ರಾಜೇಶ್ ಸಂಬಂಧಿಕ ಹರೀಶ್ ಸೋಲಂಕಿ, ಲೋಹದ ವಸ್ತುಗಳಿಗೆ ಅನುಮತಿಯಿಲ್ಲ. ಆದರೆ ವಾರ್ಡ್ ಬಾಯ್ MRI ಯಂತ್ರ ಚಾಲನೆಯಿಲ್ಲ. ಸಿಲಿಂಡರ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾನೆ. ನಂತರ ರಾಜೇಶ್ ಅದನ್ನು ತೆಗೆದುಕೊಂಡು ಹೋಗಿದ್ದಾನೆ. ಆದರೆ ದುರಾದೃಷ್ಟವೆಂಬಂತೆ, ಚಾಲನೆಯಲ್ಲಿದ್ದ ಯಂತ್ರ ಆತ ಒಳಗೆ ಹೋದ ತಕ್ಷಣ ಆತನನ್ನು ಸೆಳೆದುಕೊಂಡಿದೆ. ನಂತರ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅದೇ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಲು ರಾಜೇಶ್ ಆಸ್ಪತ್ರೆಗೆ ಬಂದಿದ್ದರು. ಆದರೆ ಈಗ ಅವರೇ ಮೃತಪಟ್ಟಿದ್ದಾರೆ. ಇದಕ್ಕೆಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತ ಮಂಡಳಿಯ ಅಜಾಗರೂಕತೆಯೇ ಕಾರಣ ಎಂದು ಸೋಲಂಕಿ ಆರೋಪಿಸಿದ್ದಾರೆ.
ರಾಜೇಶ್ ಮಾರುಗೆ ಮೆಟಲ್ ಹೊಂದಿರುವ ಆಮ್ಲಜನಕದ ಸಿಲಿಂಡರ್ ಅನ್ನು ಒಳಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ ವಾರ್ಡ್ ಬಾಯ್ ಅನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಈ ಘಟನೆ ಸಂಬಂಧ ಸೆಕ್ಷನ್ 304 ಎ ಅಡಿಯಲ್ಲಿ ಆಸ್ಪತ್ರೆಯ ವೈದ್ಯ ಸಿದ್ಧಾಂತ್ ಷಾ, ವಾರ್ಡ್ ಬಾಯ್ ವಿಠ್ಠಲ್ ಚವಾಣ್ ಮತ್ತು ಮಹಿಳಾ ವಾರ್ಡ್ ಅಟೆಂಡೆಂಟ್ ಸುನಿತಾ ಸರ್ವೆ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಸಿಸಿಟಿವಿ ಫೂಟೆಜ್ ಅನ್ನು ಪೊಲೀಸರು ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮುಂಬೈನ ಜೆ.ಜೆ.ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತನ ಕುಟುಂಬಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.