ಕ್ಷಿಪಣಿ ಅಳವಡಿಕೆ: ರಫೇಲ್ ಯುದ್ಧ ವಿಮಾನದಲ್ಲಿ ಸೇರ್ಪಡೆಗೊಂಡು ರಕ್ಷಣಾ ಬಲ ವೃದ್ಧಿಸಲಿವೆ ಅಸ್ತ್ರ ಮತ್ತು ಎಸ್ಎಎಡಬ್ಲ್ಯು

Indian Air Force : ಭಾರತೀಯ ವಾಯುಪಡೆ ಇತ್ತೀಚೆಗೆ ಫ್ರೆಂಚ್ ಕಂಪನಿಯಾದ ಡಸಾಲ್ಟ್ ಏವಿಯೇಷನ್‌ ಬಳಿ ಭಾರತೀಯ ನಿರ್ಮಾಣದ ಅಸ್ತ್ರ ಕ್ಷಿಪಣಿಯಂತಹ ಆಯುಧಗಳನ್ನು ರಫೇಲ್ ಯುದ್ಧ ವಿಮಾನದಲ್ಲಿ ಅಳವಡಿಸಲು ಕೋರಿದೆ. ಇದರಿಂದ ಭಾರತೀಯ ರಕ್ಷಣಾ ವ್ಯವಸ್ಥೆ ಇನ್ನಷ್ಟು ದೃಢವಾಗುವ ನಿರೀಕ್ಷೆಗಳಿವೆ.

Written by - Girish Linganna | Edited by - Savita M B | Last Updated : Aug 14, 2023, 07:20 PM IST
  • ರಕ್ಷಣಾ ಅಧಿಕಾರಿಗಳ ಪ್ರಕಾರ, ಭಾರತೀಯ ವಾಯುಪಡೆ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
  • ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್ (ಎಸ್ಎಎಡಬ್ಲ್ಯು) ಹಾಗೂ ಅಸ್ತ್ರ ಕ್ಷಿಪಣಿ
  • ಆಯುಧಗಳನ್ನು ರಫೇಲ್ ಯುದ್ಧ ವಿಮಾನಗಳಲ್ಲಿ ಅಳವಡಿಸಲು ಬಯಸುತ್ತಿದೆ.
ಕ್ಷಿಪಣಿ ಅಳವಡಿಕೆ: ರಫೇಲ್ ಯುದ್ಧ ವಿಮಾನದಲ್ಲಿ ಸೇರ್ಪಡೆಗೊಂಡು ರಕ್ಷಣಾ ಬಲ ವೃದ್ಧಿಸಲಿವೆ ಅಸ್ತ್ರ ಮತ್ತು ಎಸ್ಎಎಡಬ್ಲ್ಯು title=

Missile deployment : ರಕ್ಷಣಾ ಅಧಿಕಾರಿಗಳ ಪ್ರಕಾರ, ಭಾರತೀಯ ವಾಯುಪಡೆ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿ ಪಡಿಸಿರುವ ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್ (ಎಸ್ಎಎಡಬ್ಲ್ಯು) ಹಾಗೂ ಅಸ್ತ್ರ ಕ್ಷಿಪಣಿಯಂತಹ ಆಯುಧಗಳನ್ನು ರಫೇಲ್ ಯುದ್ಧ ವಿಮಾನಗಳಲ್ಲಿ ಅಳವಡಿಸಲು ಬಯಸುತ್ತಿದೆ.

ಅದರೊಡನೆ, ಭಾರತೀಯ ವಾಯುಪಡೆ ಭಾರತೀಯ ಖಾಸಗಿ ಸಂಸ್ಥೆಗಳು ನಿರ್ಮಿಸಿರುವ ಆಯುಧಗಳನ್ನೂ ತನ್ನ ವಿಮಾನಗಳಿಗೆ ಅಳವಡಿಸಿಕೊಳ್ಳಲು ಉದ್ದೇಶಿಸಿದೆ.

ಕಳೆದ ವರ್ಷ, ಅಕ್ಟೋಬರ್ 2022ರಲ್ಲಿ ಭಾರತ್ ಡೈನಾಮಿಕ್ಸ್ ಹಾಗೂ ಡಸಾಲ್ಟ್ ಏವಿಯೇಷನ್‌ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಅಸ್ತ್ರ ಕ್ಷಿಪಣಿ ಹಾಗೂ ಎಸ್ಎಎಡಬ್ಲ್ಯು ಗ್ಲೈಡ್ ಬಾಂಬ್‌ಗಳನ್ನು ರಫೇಲ್ ಯುದ್ಧ ವಿಮಾನಕ್ಕೆ ಅಳವಡಿಸಲು ನಿರ್ಧರಿಸಿದವು.

ಉದ್ಯಮ ಮೂಲಗಳ ಪ್ರಕಾರ, ಭಾರತೀಯ ಆಯುಧಗಳನ್ನು ರಫೇಲ್ ಯುದ್ಧ ವಿಮಾನದಲ್ಲಿ ಅಳವಡಿಸುವುದರಿಂದ ಹೆಚ್ಚು ಶಕ್ತಿಶಾಲಿಯಾದ, ಕಡಿಮೆ ಬೆಲೆಯನ್ನೂ ಹೊಂದಿರುವ ಇಂತಹ ಸ್ಥಳೀಯ ಆಯುಧಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗುವಂತೆ ಮಾಡಬಹುದು.

ಭಾರತದ ಆಯುಧ ವ್ಯವಸ್ಥೆಗಳನ್ನು ಈಗ ಸು-30ಎಂಕೆಐ ಹಾಗೂ ದೇಶೀಯವಾಗಿ ನಿರ್ಮಿಸಿರುವ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ತೇಜಸ್ ವಿಮಾನಗಳಿಗೆ ಅಳವಡಿಸಲಾಗಿದೆ.

ಭಾರತದ ಬಳಿ ಪ್ರಸ್ತುತ 36 ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಿಸುತ್ತಿದ್ದು, ಭಾರತ ತನ್ನ ನೌಕಾಪಡೆಗಾಗಿ ಇನ್ನೂ 26 ರಫೇಲ್ ಮರೀನ್ ಯುದ್ಧ ವಿಮಾನಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಭಾರತೀಯ ವಾಯುಪಡೆ ದೇಶೀಯ ಆಯುಧಗಳ ಮೇಲೆ ಆಸಕ್ತಿ ಹೊಂದಿರುವುದು ಸ್ವಾವಲಂಬನೆ ಮತ್ತು ಭಾರತದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ-ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ ಜಾರಿ ಅಗತ್ಯ: ಸಚಿವ ಈಶ್ವರ ಖಂಡ್ರೆ

ಅದಲ್ಲದೆ, ಈಗ ಚೀನಾದೊಡನೆ ಪದೇ ಪದೇ ನಡೆಯುತ್ತಿರುವ ಚಕಮಕಿಗಳೂ ಭಾರತೀಯ ವಾಯುಪಡೆ ದೇಶೀಯವಾಗಿ ನಿರ್ಮಿಸಿರುವ ಆಯುಧ ವ್ಯವಸ್ಥೆಗಳ ಮೇಲೆ ಒತ್ತು ಕೊಡುವಂತೆ ಮಾಡಿದೆ.

ಫ್ರಾನ್ಸ್‌ನಲ್ಲಿ ನಿರ್ಮಾಣಗೊಂಡಿರುವ ರಫೇಲ್ ಯುದ್ಧ ವಿಮಾನಗಳು ಭಾರತ, ಫ್ರಾನ್ಸ್, ಈಜಿಪ್ಟ್, ಕತಾರ್, ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಳಕೆಯಾಗುತ್ತಿವೆ. ಇನ್ನು ಗ್ರೀಸ್, ಕ್ರೊಯೇಷಿಯಾ, ಯುಎಇ, ಹಾಗೂ ಇಂಡೋನೇಷ್ಯಾಗಳೂ ರಫೇಲ್ ವಿಮಾನಗಳ ಖರೀದಿಗೆ ಆಸಕ್ತಿ ತೋರಿವೆ.

ಅಸ್ತ್ರ ಕ್ಷಿಪಣಿ
ಅಸ್ತ್ರ ಗಾಳಿಯಿಂದ ಗಾಳಿಗೆ (ಏರ್ ಟು ಏರ್) ದಾಳಿ ನಡೆಸುವ ಕ್ಷಿಪಣಿ ಸದ್ಯ 100 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಅಸ್ತ್ರ ಮಾರ್ಕ್ 2 ಆವೃತ್ತಿ 160 ಕಿಲೋಮೀಟರ್ ವ್ಯಾಪ್ತಿ ಹೊಂದುವ ನಿರೀಕ್ಷೆಗಳಿವೆ. ಅದಲ್ಲದೆ, 300 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ, ಇನ್ನಷ್ಟು ಆಧುನಿಕವಾದ ಕ್ಷಿಪಣಿಯ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲು ಆಲೋಚಿಸಲಾಗುತ್ತಿದೆ.

2020ರಿಂದ, ಭಾರತೀಯ ವಾಯುಪಡೆ ಅಸ್ತ್ರ ವಾಯು ಕ್ಷಿಪಣಿಗಳನ್ನು ಬಳಸುತ್ತಾ ಬಂದಿದೆ. ಭಾರತೀಯ ನಿರ್ಮಾಣದ ಆಯುಧಗಳನ್ನು ಈಗಾಗಲೇ ಸು-30ಎಂಕೆಐ ಹಾಗೂ ಸ್ವದೇಶೀ ನಿರ್ಮಿತ ಎಲ್‌ಸಿಎ ತೇಜಸ್ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗಿದೆ.

ಎಸ್ಎಎಡಬ್ಲ್ಯು: ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್
ಎಸ್ಎಎಡಬ್ಲ್ಯು ವನ್ನು ಭಾರತೀಯ ವಾಯುಪಡೆ ರಿಸರ್ಚ್ ಸೆಂಟರ್ ಇಮಾರತ್ ಹಾಗೂ ಡಿಆರ್‌ಡಿಓದ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದೆ. ಇದೊಂದು ಸಣ್ಣ ಬಾಂಬ್ ಆಗಿದ್ದು, ಅತ್ಯಂತ ನಿಖರವಾಗಿ ದಾಳಿ ನಡೆಸಬಲ್ಲದು. ಇದು ರನ್‌ವೇಗಳು, ಬಂಕರ್‌ಗಳು ಹಾಗೂ ಹ್ಯಾಂಗರ್‌ಗಳನ್ನು ಹಾಳು ಮಾಡಬಲ್ಲ ಆಯುಧವಾಗಿದೆ. ಇದು 125 ಕೆಜಿ ತೂಕ ಹೊಂದಿದ್ದು, ಗುರಿಯೊಳಗೆ ನುಗ್ಗಿ ದಾಳಿ ಮಾಡಬಲ್ಲದು. ಇದರಲ್ಲಿ ದೊಡ್ಡ ಸ್ಫೋಟಕ ಭಾಗವಿದ್ದು, ಅಂದಾಜು ನೂರು ಕಿಲೋಮೀಟರ್‌ಗಳಷ್ಟು ದೂರದಿಂದಲೇ ಇದನ್ನು ಉಡಾಯಿಸಬಹುದು. ಆ ಮೂಲಕ ಶತ್ರುಗಳ ವಾಯುನೆಲೆಗಳ ಮೇಲೆ ದಾಳಿ ನಡೆಸುವಾಗಲೂ ನಮ್ಮ ವಿಮಾನಗಳು ಮತ್ತು ಪೈಲಟ್‌ಗಳು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಭಾರತದ ಮೊದಲ ಸ್ವದೇಶೀ ನಿರ್ಮಿತ ಆ್ಯಂಟಿ ಏರ್‌ಫೀಲ್ಡ್ ಆಯುಧವನ್ನು ನಿರ್ಮಿಸಿದ ಕೀರ್ತಿ ಡಿಆರ್‌ಡಿಓಗೆ ಸಲ್ಲುತ್ತದೆ.

ಪ್ರಸ್ತುತ, ಎಸ್ಎಎಡಬ್ಲ್ಯು ಅನ್ನು ಜಾಗ್ವಾರ್ ಹಾಗೂ ಸು-30ಎಂಕೆಐ ಯುದ್ಧ ವಿಮಾನಗಳಿಂದ ಪ್ರಯೋಗಿಸಬಹುದಾಗಿದೆ. ಸು-30ಎಂಕೆಐ ವಿಮಾನ ತನ್ನ ರೆಕ್ಕೆಯಲ್ಲಿ ನಾಲ್ಕು ಸುತ್ತುಗಳ ಸ್ಮಾರ್ಟ್ ಕ್ವಾಡ್ ರ್ಯಾಕ್ ವ್ಯವಸ್ಥೆಯಲ್ಲಿ 20-32 ಎಸ್ಎಎಡಬ್ಲ್ಯುಗಳನ್ನು ಹೊಂದಬಲ್ಲದು. ಭವಿಷ್ಯದಲ್ಲಿ ಎಸ್ಎಎಡಬ್ಲ್ಯು ಡಸಾಲ್ಟ್ ರಫೇಲ್ ಹಾಗೂ ಎಚ್ಎಎಲ್ ತೇಜಸ್ ಎಂಕೆ-1ಎ ಯುದ್ಧ ವಿಮಾನಗಳಲ್ಲೂ ಕಾರ್ಯಾಚರಿಸಲಿದೆ.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇದನ್ನೂ ಓದಿ-ಆರು ಸೆಕೆಂಡ್ ಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಪತ್ತೆ ಹಚ್ಚುವಿರಾ ?

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News