ನವದೆಹಲಿ: ಭಾರತದ ಎಚ್ಚರಿಕೆ ಕಡೆಗೂ ಮಣಿದ ಪಾಕ್ ಸರ್ಕಾರ ತನ್ನ ವಶದಲ್ಲಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆಮಾಡುವುದಾಗಿ ಹೇಳಿದೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಎರಡೂ ರಾಷ್ಟ್ರಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಾಳೆ ಭಾರತೀಯ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
Pakistan Prime Minister Imran Khan: As a peace gesture we are releasing Wing Commander Abhinandan tomorrow. pic.twitter.com/J0Attb6KDC
— ANI (@ANI) February 28, 2019
ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಹೇಳಿದ್ದ ಭಾರತಕ್ಕೆ, ಪಾಕ್ ಮಾತುಕತೆಗೆ ಆಹ್ವಾನಿಸಿತ್ತು. ಹಾಗೆಯೇ ಮಾತುಕತೆಗೆ ಒಪ್ಪಿದರೆ ಮಾತ್ರ ಅಭಿನಂದನ್ ರನ್ನು ಬಿಡುಗಡೆ ಮಾಡುವುದಾಗಿ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಸಚಿವಾಲಯ ಕೂಡಲೇ ಭಾರತೀಯ ಪೈಲಟ್ ರನ್ನು ವಾಪಸ್ ಕಳುಹಿಸಿಕೊಡಬೇಕು. ಪೈಲಟ್ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಷರತ್ತಿಗೂ ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ವಿಂಗ್ ಕಮಾಂಡರ್'ಗೆ ತೊಂದರೆ ಮಾಡಿದರೆ ದಾಳಿ ನಡೆಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿತ್ತು. ಭಾರತ ಈ ನಿಲುವಿಗೆ ಬೆಂಬಲವಾಗಿ ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹತ್ತು ಪ್ರಮುಖ ದೇಶಗಳು ನಿಂತದ್ದೇ ಪಾಕ್ ಮೇಲಿನ ಒತ್ತಡ ಹೆಚ್ಚಲು ಕಾರಣವಾಗಿತ್ತು. ಇದಕ್ಕೆ ಹೆದರಿದ ಪಾಕ್ ನಾಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಪಾಕ್ ವಾಯು ಪಡೆಯ ಮೂರು ಫೈಟರ್ ಜೆಟ್ ವಿಮಾನ ಗಳು ಬುಧವಾರ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿ ಒಳನುಗ್ಗಿ ಬಂದಾಗ ಅವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಿಗ್ 21 ಫೈಟರ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮ್ಮ ವಿಮಾನ ಪತನಗೊಂಡಾಗ ಪಿಓಕೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಆಗ ಪಾಕ್ ಸೇನೆ ಅವರನ್ನು ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.