ರಾಷ್ಟ್ರಪತಿಯಿಂದ 16ನೇ ಲೋಕಸಭೆ ವಿಸರ್ಜನೆ

ಇಂದು ರಾಷ್ಟ್ರಪತಿ ಕೋವಿಂದ್​​ 16ನೇ ಲೋಕಸಭೆ ವಿಸರ್ಜನೆ ಆದೇಶಕ್ಕೆ ಸಹಿ ಹಾಕಿದ್ದು, ಈ ಕ್ಷಣದಿಂದಲೇ ಜಾರಿಯಾಗಲಿದೆ. 

Last Updated : May 25, 2019, 03:27 PM IST
ರಾಷ್ಟ್ರಪತಿಯಿಂದ 16ನೇ ಲೋಕಸಭೆ ವಿಸರ್ಜನೆ title=

ನವದೆಹಲಿ: ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನಂತೆ ರಾಷ್ಟ್ರಪತಿ ರಾಮನಾಥ್​​ ಕೋವಿಂದ್​ ಇಂದು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದಾರೆ. 

2019ರ ಜೂನ್​​ 3ರವರೆಗೆ 16ನೇ ಲೋಕಸಭೆಯ ಅವಧಿ ಪೂರ್ಣಗೊಳ್ಳಬೇಕಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ರಾಷ್ಟ್ರಪತಿಗಳಿಗೆ ಲೋಕಸಭೆ ವಿಸರ್ಜನೆಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಇಂದು ರಾಷ್ಟ್ರಪತಿ ಕೋವಿಂದ್​​ 16ನೇ ಲೋಕಸಭೆ ವಿಸರ್ಜನೆ ಆದೇಶಕ್ಕೆ ಸಹಿ ಹಾಕಿದ್ದು, ಈ ಕ್ಷಣದಿಂದಲೇ ಜಾರಿಯಾಗಲಿದೆ. 

ರಾಷ್ಟ್ರಪತಿ ಭವನದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಅದನ್ನು ಅಂಗೀಕರಿಸಿರುವ ರಾಷ್ಟ್ರಪತಿ ಕೋವಿಂದ್, ಹೊಸ ಸರ್ಕಾರ ರಚನೆಯಾಗುವವರೆಗೂ ಅವರೇ ಪ್ರಧಾನಿಯಾಗಿ ಮುಂದುವರೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಮತ್ತೊಂದೆಡೆ, ಇಂದು ಸಂಜೆ ವೇಳೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಲಿರುವ ನರೇಂದ್ರ ಮೋದಿ ಅವರು, ಹೊಸ ಸರ್ಕಾರವನ್ನು ರಚನೆ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಿದ್ದಾರೆ. ಬಳಿಕ ಮೇ 30ರಂದು ಮೋದಿ ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

Trending News