ಹೈದರಾಬಾದ್: ಭಾರತದ ಮುಸ್ಲಿಮರನ್ನು 'ಪಾಕಿಸ್ತಾನಿ' ಎಂದು ಕರೆಯುವವರನ್ನು ಜೈಲಿಗೆ ಹಾಕಬೇಕು ಎಂದು ಅಖಿಲ ಭಾರತ ಮಜ್ಲಿಸ್ ಇ ಇತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಮೊಹಮ್ಮದ್ ಅಲಿ ಜಿನ್ನಾ ಅವರ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಭಾರತದಲ್ಲಿರುವ ಮುಸ್ಲಿಮರನ್ನು 'ಪಾಕಿಸ್ತಾನಿ'ಗಳು ಎನ್ನುವವರ ವಿರುದ್ಧ ನೂತನ ಕಾನೂನು ಜಾರಿಗೆ ತಂದು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿರುವ ಓವೈಸಿ, ಬಿಜೆಪಿ ಸರ್ಕಾರ ಈ ಕ್ರಮಕ್ಕೆ ಮುಂದಾಗುವುದಿಲ್ಲ ಎಂದೂ ಟೀಕಿಸಿದ್ದಾರೆ.
ವಿವಾದಾತ್ಮಕ ಟ್ರಿಪಲ್ ತಲಾಕ್ ಮಸೂದೆಯನ್ನು ಉಲ್ಲೇಖಿಸಿ ಮಾತನಾಡಿದ ಒವೈಸಿ ಇದು "ಮಹಿಳಾ ವಿರೋಧಿ" ಎಂದು ಹೇಳಿದ್ದಾರೆ. ಕೇಂದ್ರ ಪರಿಚಯಿಸಿದ ಈ ಮಸೂದೆ ತ್ರಿವಳಿ ತಲಾಖ್ ಅನ್ನು ಕಾನೂನು ಬಾಹಿರ ಎಂದು ಹೇಳುವ ಮೂಲಕ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನಿಗದಿ ಮಾಡಿದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತಾದರೂ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ತಡೆಹಿಡಿದಿದೆ.
ಏತನ್ಮಧ್ಯೆ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಪಿಪಿಬಿಬಿ) ಫೆಬ್ರವರಿ 9 ಮತ್ತು 10 ರಂದು ಹೈದರಾಬಾದ್ ಒವೈಸಿ ಆಸ್ಪತ್ರೆಯಲ್ಲಿ ಸಾಮಾನ್ಯ ಮತ್ತು ಕಾರ್ಯನಿರ್ವಾಹಕ ಸದಸ್ಯರ ಪೂರ್ಣ ಸಭೆಯನ್ನು ನಡೆಸಲು ಸಿದ್ಧವಾಗಿದೆ.
ಬೋರ್ಡ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೇರಿದಂತೆ 50 ಕ್ಕೂ ಹೆಚ್ಚಿನ ಸದಸ್ಯರು, ಪ್ರಧಾನ ಕಾರ್ಯದರ್ಶಿ ಮೌಲಾನಾ ಸಲೀಮ್ ಖಸ್ಮಿ, ಕಾರ್ಯದರ್ಶಿ ಮಂಡಳಿಯ ವಕೀಲ ಝಫರಿಯಾಬ್ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.