ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಎಐಎಡಿಎಂಕೆ ಅಭ್ಯರ್ಥಿಯಾಗಿ ಇ.ಮಧುಸೂದನ್ ಅವರ ಹೆಸರನ್ನು ಘೋಷಿಸಲಾಗಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಂಯೋಜಕರು ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಮತ್ತು ಜಂಟಿ ಸಂಯೋಜಕ ಕೆ. ಪಳನಿಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಏಪ್ರಿಲ್ 12 ಕ್ಕೆ ಉಪ-ಚುನಾವಣೆ ನಿಗದಿಯಾಗಿತ್ತಾದರೂ ಅಭ್ಯರ್ಥಿಯು ಮತದಾರರಿಗೆ ಲಂಚದ ಆಮಿಷ ಒಡ್ಡಿದ್ದ ಹಿನ್ನೆಲೆಯಲ್ಲಿ ಚುನಾವಣೆಯನ್ನು ರದ್ದುಪಡಿಸಲಾಗಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ಡಿಸೆಂಬರ್ 31 ರೊಳಗೆ ಉಪ-ಚುನಾವಣೆಯನ್ನು ನಡೆಸಬೇಕೆಂದು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲೂ ಚುನಾವಣೆ ಘೋಷಣೆಯಾಗಿದೆ.
ಎಐಎಡಿಎಂಕೆಯ ಎರಡೆಲೆ ಚಿನ್ಹೆ ಪಡೆದಿರುವ ಓ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಬಣದಿಂದ ಇ.ಮಧುಸೂದನ್ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಆರ್.ಕೆ ನಗರ ಉಪಚುನಾವಣೆಗೆ ಡಿಎಂಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ಮರುದು ಗಣೇಶನ್ ಕಣಕ್ಕಿಳಿಯಲಿದ್ದಾರೆ.