ನವದೆಹಲಿ: ಲಾಕ್ಡೌನ್ ಜಾರಿಗೊಳಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ನಿಧಾನಕ್ಕೆ ಸಾಬೀತಾಗುತ್ತಿದೆ. ಲಾಕ್ಡೌನ್ ಜಾರಿ ಮಾಡಿದ್ದರೂ ಕೋವಿಡ್ -19 (Covid-19) ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ.
ಕಳೆದ ಎರಡು ದಿನಗಳಲ್ಲಿ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಜನ COVID 19 ಪೀಡಿತರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ COVID 19 ವೈರಸ್ ಪೀಡಿತರ ಪಟ್ಟಿಯಲ್ಲಿ ಭಾರತ 9ನೇ ಸ್ಥಾನಕ್ಕೂ ಏರಿತ್ತು. ಈಗ 8ನೇ ಸ್ಥಾನದತ್ತ ಧಾವಿಸಿದೆ.
ಕಳೆದ 8 ದಿನಗಳಿಂದಲೂ ಪ್ರತಿನಿತ್ಯ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಮೊನ್ನೆಯಿಂದ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಕರೋನವೈರಸ್ (Coronavirus) COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದವರು ಈಗ ಕೈ ಹಿಸುಕಿಕೊಳ್ಳುವಂತಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 7,964 ಪ್ರಕರಣಗಳು ವರದಿಯಾಗಿವೆ. ದೇಶದ ಕೊರೋನಾ ಪೀಡಿತರ ಸಂಖ್ಯೆ 1,73,763ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ COVID 19 ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು ಇತ್ತೀಚೆಗೆ 12ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು. ಬಳಿಕ ಇರಾನ್ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೆ ಬಂದಿತ್ತು. ಮೇ 28ರಂದು ಟರ್ಕಿಯನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೆ ಬಂದಿತ್ತು. ಈಗ 8ನೇ ಸ್ಥಾನದಲ್ಲಿರುವ ಜರ್ಮನಿಯನ್ನೂ ಹಿಂದಿಕ್ಕುವತ್ತ ಸಾಗಿದೆ. ಏಕೆಂದರೆ ಜರ್ಮನಿಯ ಕೊರೋನಾ ಪೀಡಿತರ ಸಂಖ್ಯೆ 1,83,019. ಭಾರತದ ಕೊರೋನಾ ಪೀಡಿತರ ಸಂಖ್ಯೆ 1,73,763. ಅಂದರೆ ಸುಮಾರು 10 ಸಾವಿರದ ವ್ಯತ್ಯಾಸ ಮಾತ್ರ ಇದೆ. ಜರ್ಮನಿಗಿಂತ ಭಾರತದಲ್ಲಿ ಅತ್ಯಂತ ವೇಗವಾಗಿ ಕೊರೋನಾ ಹರಡುತ್ತಿರುವುದರಿಂದ ಒಂದೆರಡು ದಿನದಲ್ಲಿ ಭಾರತವು ಜರ್ಮನಿಯನ್ನು ಹಿಂದಿಕ್ಕುವ ಸಾಧ್ಯತೆಗಳು ದಟ್ಟವಾಗಿವೆ.
ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609,
ಮೇ 21ರಂದು 6,088,
ಮೇ 22ರಂದು 6,654,
ಮೇ 23ರಂದು 6,767,
ಮೇ 24ರಂದು 6,977,
ಮೇ 25ರಂದು 6,535,
ಮೇ 26ರಂದು 6,387,
ಮೇ 27ರಂದು 6,566,
ಮೇ 28ರಂದು 7,466,
ಮೇ 29ರಂದು 7,964.
ಇನ್ನು ಕೊರೊನಾದಿಂದ ಬಲಿಯಾದವರ ಸಂಖ್ಯೆಯನ್ನು ನೋಡುವುದಾದರೆ ನಿನ್ನೆ ಒಂದೇ ದಿನ 265 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 4,971ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 82,370 ಜನ ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ. ಇದೇ ರೀತಿಯ ಟ್ರೆಂಡ್ ಮುಂದುವರೆದರೆ ದೇಶದ COVID 19 ವೈರಸ್ ಪೀಡಿತರ ಪೀಡಿತರ ಸಂಖ್ಯೆ 2 ಲಕ್ಷದ ಗಡಿಯನ್ನೂ ದಾಟಲಿದೆ.