ನವದೆಹಲಿ: ಲೋಕಸಭಾ ಚುನಾವಣೆ (ಲೋಕಸಭಾ ಚುನಾವಣೆಗಳು 2019) ಅಂತ್ಯದ ನಂತರ ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ)ದ ಮುಖಂಡ ಅಖಿಲೇಶ್ ಯಾದವ್ ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಉಂಟಾಗಬಹುದಾದ ಸಂಭವನೀಯ ಪರಿಸ್ಥಿತಿಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮಮತಾ ಬ್ಯಾನರ್ಜಿ ಶೀಘ್ರದಲ್ಲೇ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಮೇ 23 ರಂದು ಚುನಾವಣಾ ಫಲಿತಾಂಶಗಳು ಹೊರಬೀಳಲಿದ್ದು, ಬಳಿಕ ಅಖಿಲೇಶ್ ಯಾದವ್, ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಭೇಟಿಯಾಗುವ ಸಾಧ್ಯತೆಯಿದೆ.
ಚುನಾವಣೋತ್ತರ ಸಮೀಕ್ಷೆಗಳ ಬಳಿಕ ಅಖಿಲೇಶ್-ಮಾಯಾವತಿ ಭೇಟಿ:
ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಿ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಅಖಿಲೇಶ್ ಮತ್ತು ಮಾಯಾವತಿ ಅರ್ಧ ಗಂಟೆಗಳಿಗೂ ಅಧಿಕ ಸಮಯ ಮಾತುಕತೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಪಕ್ಷಗಳು ಎಷ್ಟು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣೋತ್ತರ ಸಮೀಕ್ಷೆಗಳ ಟ್ರೆಂಡಿಂಗ್ ಗಮನಿಸಿದ ಬಳಿಕ ರಾಜಕೀಯ ಪಕ್ಷಗಳು ತಮ್ಮದೇ ಕಾರ್ಯತಂತ್ರ ರೂಪಿಸಲು ಪ್ರಾರಂಭಿಸಿವೆ. ಅದೇ ವೇಳೆ ಕೆಲವು ಪಕ್ಷಗಳು ಚುನಾವಣೋತ್ತರ ಸಮೀಕ್ಷೆ ತಪ್ಪು ಮಾಹಿತಿ ನೀಡಿದೆ ಎಂದು ಹೇಳುತ್ತಿವೆ. ಅದಾಗ್ಯೂ, ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲಲಿವೆ ಎಂಬುದನ್ನು ಎಕ್ಸಿಟ್ ಪೋಲ್ ನಲ್ಲಿ ಸ್ಪಷ್ಟವಾಗಿ ಹೇಳಲಾಗಿಲ್ಲ.
ಚುನಾವಣೋತ್ತರ ಸಮೀಕ್ಷೆಯಂತೆ ಎನ್ಡಿಎಗೆ ಬಹುಮತ ಲಭಿಸಲಿದೆಯೇ? ಅಥವಾ ಮಹಾಮೈತ್ರಿ ಅಧಿಕಾರ ರಚಿಸಲಿದೆಯೇ? ದೇಶದ ಆಡಳಿತ ಯಾರ ಕೈ ಸೇರಲಿದೆ ಎಂಬುದು ಮೇ 23 ಫಲಿತಾಂಶದ ಬಳಿಕವಷ್ಟೇ ಸ್ಪಷ್ಟವಾಗಲಿದೆ.