Israel-Hamas War: ಹಮಾಸ್ ಸಂಘಟನೆ ಗಾಜಾ ಪಟ್ಟಿಯ ನೆಲದಾಳದಲ್ಲಿ ಅತ್ಯಂತ ದೀರ್ಘವಾದ ಸುರಂಗಗಳ ಜಾಲವನ್ನು ನಿರ್ಮಿಸಿದೆ. ಈ ಸುರಂಗಗಳನ್ನು ಹಮಾಸ್ ರಾಕೆಟ್ ದಾಳಿ ನಡೆಸಲು, ಆಯುಧಗಳನ್ನು ಸಾಗಿಸಲು, ಹಾಗೂ ಒತ್ತೆಯಾಳುಗಳನ್ನು ಬಚ್ಚಿಡಲು ಬಳಸಿಕೊಳ್ಳುತ್ತದೆ. ಈ ಸುರಂಗಗಳನ್ನು ಪತ್ತೆಹಚ್ಚುವುದು ಅತ್ಯಂತ ಕಷ್ಟಕರವಾಗಿದ್ದು, ಅವುಗಳಲ್ಲಿ ಶತ್ರುಗಳನ್ನು ಹಿಡಿಯುವ ಜಾಲಗಳು, ಹಾಗೂ ಅತ್ಯಂತ ಗಟ್ಟಿಯಾದ ಕಾಂಕ್ರೀಟ್ ಗೋಡೆಗಳಿವೆ.
ಈ ಅಪಾಯವನ್ನು ಎದುರಿಸಲು, ಇಸ್ರೇಲ್ ಒಂದು ಆಧುನಿಕವಾದ ಆಯುಧವನ್ನು ಅಭಿವೃದ್ಧಿ ಪಡಿಸಿದೆ. ಅದುವೇ ಸ್ಪಾಂಜ್ ಬಾಂಬ್. ಇವುಗಳು ರಾಸಾಯನಿಕ ಗ್ರೆನೇಡ್‌ಗಳಾಗಿದ್ದು, ಅತ್ಯಂತ ವೇಗವಾಗಿ ವ್ಯಾಪಿಸಿ, ಶೀಘ್ರವಾಗಿ ಗಟ್ಟಿಯಾಗುವ ನೊರೆಯನ್ನು ಹೊರಸೂಸುತ್ತದೆ. ಈ ನೊರೆ ಸುರಂಗಗಳ ಬಾಗಿಲುಗಳನ್ನು ಮುಚ್ಚಿ ಹಾಕಬಲ್ಲದಾಗಿದ್ದು, ಸೈನಿಕರ ಮೇಲಿನ ದಾಳಿಗಳನ್ನು ತಡೆದು, ಭೂ ಕಾರ್ಯಾಚರಣೆಯ ಸಂದರ್ಭದಲ್ಲಿ ಇಸ್ರೇಲಿ ಸೈನಿಕರಿಗೆ ಸುರಂಗಗಳನ್ನು ಸುರಕ್ಷಿತವಾಗಿಡುತ್ತದೆ.
ಇದನ್ನೂ ಓದಿ-ಗರ್ಭಿಣಿ ನಾಯಿಯನ್ನು ಅತ್ಯಾಚಾರ ಮಾಡಿ, 3ನೇ ಮಹಡಿಯ ಬಾಲ್ಕನಿಯಿಂದ ಎಸೆದ ಕಾಮುಕ..! ಥೂ.. ರಾಕ್ಷಸ
ಈ ಸ್ಪಾಂಜ್ ಬಾಂಬ್‌ಗಳನ್ನು ಒಂದು ಸುರಕ್ಷಿತ ಪ್ಲಾಸ್ಟಿಕ್ ಕಂಟೇನರ್ ಇಡಲಾಗುತ್ತದೆ. ಸ್ಪಾಂಜ್ ಬಾಂಬ್ ಎರಡು ದ್ರವಗಳನ್ನು ಹೊಂದಿದ್ದು, ಅವುಗಳನ್ನು ಪ್ರತ್ಯೇಕಿಸುವ ಸಲುವಾಗಿ ಕಂಟೇನರ್ ಮಧ್ಯದಲ್ಲಿ ಒಂದು ಗೋಡೆ ಇಡಲಾಗಿರುತ್ತದೆ. ಒಂದು ಬಾರಿ ಕಾರ್ಯಾಚರಣೆ ಆರಂಭಗೊಂಡಾಗ, ಈ ಎರಡೂ ದ್ರವಗಳು ಒಂದರೊಡನೊಂದು ಬೆರೆತು, ಉದ್ದೇಶಿತ ಗುರಿಯೆಡೆಗೆ ಚಲಿಸುತ್ತವೆ. ಈ ನೊರೆ ವಿಷಕಾರಿಯಾಗಿಲ್ಲ ಮತ್ತು ಬೆಂಕಿ ಹೊತ್ತಿಕೊಳ್ಳದಂತಹ ವಸ್ತುವಾಗಿದೆ. ಕಾರ್ಯಾಚರಣೆಯ ಬಳಿಕ ನೀರು ಬಳಸಿ ಇದನ್ನು ತೆಗೆಯಬಹುದು.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸ್ಪಾಂಜ್ ಬಾಂಬ್‌ಗಳನ್ನು 2021ರಿಂದ ಪರೀಕ್ಷಿಸುತ್ತಾ ಬಂದಿದೆ. ಇದನ್ನು ಗಾಜಾ ಗಡಿಯ ಸಮೀಪದಲ್ಲಿ ಒಂದು ಅಣಕು ಸುರಂಗ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. ಯಾಹಾಲೋಮ್‌ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಇಸ್ರೇಲಿನ ಕಾಂಬ್ಯಾಟ್ ಇಂಜಿನಿಯರಿಂಗ್ ಕಾರ್ಪ್ಸ್ ಪಡೆಯ ವಿಶೇಷ ಕಮಾಂಡೋಗಳಾದ 'ವೀಸೆಲ್ಸ್' ಇದರ ಜವಾಬ್ದಾರಿ ಹೊಂದಿದ್ದರು. ಅವರು ಈ ಸುರಂಗಗಳನ್ನು ಪತ್ತೆ ಹಚ್ಚಲು, ಉಗ್ರರನ್ನು ನಿವಾರಿಸಲು ಮತ್ತು ಸುರಂಗಗಳನ್ನು ನಾಶಪಡಿಸಲು ಹೆಸರುವಾಸಿಯಾಗಿದ್ದಾರೆ.
ಸ್ಪಾಂಜ್ ಬಾಂಬ್‌ಗಳು ಹಮಾಸ್ ಸುರಂಗ ಜಾಲವನ್ನು ನಾಶಪಡಿಸುವ ಇಸ್ರೇಲ್ ಪ್ರಯತ್ನಗಳ ಭಾಗವಾಗಿದ್ದು, ಈ ಸುರಂಗಗಳನ್ನು ಗಾಜಾದಲ್ಲಿ ಸಮರ್ಥ ಗೆಲುವು ಸಾಧಿಸಲು ಇಸ್ರೇಲ್‌ಗಿರುವ ಅಡ್ಡಿ ಎಂದು ಪರಿಗಣಿಸಲಾಗಿದೆ. ಈ ಸುರಂಗಗಳನ್ನು ಹಮಾಸ್ 1990ರ ದಶಕದ ಮಧ್ಯಭಾಗದಿಂದ ಬಳಸುತ್ತಾ ಬಂದಿದ್ದು, ಕಾಲ ಕ್ರಮೇಣ ಈ ಸುರಂಗಗಳು ಹೆಚ್ಚು ಹೆಚ್ಚು ಆಧುನಿಕವೂ, ವ್ಯಾಪಕವೂ ಆಗಿ ಪರಿಣಮಿಸಿದವು. ಹಮಾಸ್ ಬಳಿ ವಿವಿಧ ರೀತಿಯ ಸುರಂಗಗಳಿದ್ದು, ಕೆಲವು ಸಮುದ್ರ ತೀರದ ಮರಳು ನೆಲದಾಳದಲ್ಲಿ ಮತ್ತು ಗಡಿಗಳಲ್ಲಿ 360 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿವೆ ಎನ್ನಲಾಗಿದೆ. ಕೆಲವು ಸುರಂಗಗಳು ಗಾಜಾದ ವಿವಿಧ ಪ್ರಾಂತ್ಯಗಳನ್ನು ಸಂಪರ್ಕಿಸಿದರೆ, ಇನ್ನೂ ಕೆಲವು ಸುರಂಗಗಳು ಇಸ್ರೇಲ್ ಮತ್ತು ಈಜಿಪ್ಟ್ ಒಳಗೆ ಪ್ರವೇಶಿಸುತ್ತವೆ ಎನ್ನಲಾಗಿದೆ.
ಈ ಸುರಂಗಗಳು ಹಮಾಸ್ ವೆಸ್ಟ್ ಬ್ಯಾಂಕ್‌ಗಿಂತಲೂ ಗಾಜಾದಲ್ಲಿ ಶಕ್ತಿಶಾಲಿಯಾಗಿರುವುದಕ್ಕೆ ಕಾರಣವಾಗಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲ್ ಹೆಚ್ಚಿನ ಭದ್ರತಾ ಕ್ರಮವನ್ನು ಹೊಂದಿದೆ. ಈ ಸುರಂಗಗಳು, ಹಮಾಸ್ ಉಗ್ರರಿಗೆ ಗಾಜಾದಾದ್ಯಂತ ಇಸ್ರೇಲಿ ವಾಯುದಾಳಿಗಳನ್ನು ತಪ್ಪಿಸಿ, ಸಂಚರಿಸಲು, ಆಯುಧಗಳು ಮತ್ತು ಇತರ ವಸ್ತುಗಳನ್ನು ಸಾಗಿಸಲು ನೆರವಾಗುತ್ತದೆ. ಹಮಾಸ್ ಸಂಘಟನೆ ಈ ಸುರಂಗಗಳನ್ನು ತನ್ನ ನಾಯಕರನ್ನು ಬಚ್ಚಿಡಲು, ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲು, ರಾಕೆಟ್ ಲಾಂಚರ್‌ಗಳನ್ನು ಇಡಲು ಮತ್ತು ಒತ್ತೆಯಾಳುಗಳನ್ನು ಕೂಡಿ ಹಾಕಲು ಬಳಸುತ್ತದೆ.
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ಅನಿರೀಕ್ಷಿತವಾಗಿ ಭಾರೀ ದಾಳಿ ನಡೆಸಿ, 1400 ಜನರನ್ನು ಹತ್ಯೆಗೈದ ಬಳಿಕ, ಬಹುತೇಕ ಮೂರು ವಾರಗಳಿಂದ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಅಂದಿನಿಂದ, 7,000ಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಇಸ್ರೇಲ್ ವಾಯುದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಇಸ್ರೇಲ್ ಶುಕ್ರವಾರದಂದು ಗಾಜಾದೊಳಗೆ ಆಕ್ರಮಣ ಆರಂಭಿಸಿದ್ದು, ಹಮಾಸ್ ವಿರುದ್ಧ ಭೂ ಕಾರ್ಯಾಚರಣೆಗೆ ಸಿದ್ಧಗೊಂಡಿದೆ.
ಇದನ್ನೂ ಓದಿ-Daily GK Quiz: ಯಾವ ಸೊಳ್ಳೆಯ ಕಡಿತದಿಂದ ಡೆಂಗ್ಯೂ ಜ್ವರ ಬರುತ್ತದೆ?
ಆದರೆ, ಹಮಾಸ್ ಸುರಂಗ ಜಾಲ ಅತ್ಯಂತ ಕನಿಷ್ಠ ಹಾನಿಗೆ ಒಳಗಾಗಿದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದು, ಹಮಾಸ್ ಇಂದಿಗೂ ತನ್ನ ಯೋಧರನ್ನು ನಿಯಂತ್ರಿಸುವ, ನೇತೃತ್ವ ವಹಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕಾದ ಅಧಿಕಾರಿಗಳೂ ಈ ಸುರಂಗಗಳನ್ನು ಭೇದಿಸುವಲ್ಲಿನ ಕಷ್ಟಗಳು ಮತ್ತು ಅದರಿಂದ ಉಂಟಾಗುವ ಸಾವುನೋವುಗಳ ಕುರಿತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ.
ಆದರೆ ನೂತನ ಆಯುಧವಾದ ಸ್ಪಾಂಜ್ ಬಾಂಬ್ ಭೂಗರ್ಭದ ಯುದ್ಧದಲ್ಲಿ ಇಸ್ರೇಲಿಗೆ ಮಹತ್ತರ ಮೇಲುಗೈ ಒದಗಿಸಬಲ್ಲದು. ಇವುಗಳು ಅತ್ಯಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಸುರಂಗಗಳನ್ನು ಮುಚ್ಚಿ, ಅದನ್ನು ಹಮಾಸ್ ಉಗ್ರರು ಬಳಸಲು ಸಾಧ್ಯವಾಗದಂತೆ ಮಾಡುತ್ತದೆ. ಸ್ಪಾಂಜ್ ಬಾಂಬ್‌ಗಳು ಇಸ್ರೇಲ್‌ಗೆ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಇಸ್ರೇಲಿಗರನ್ನು ಸಾವಿನಿಂದ ರಕ್ಷಿಸಲು, ಹಮಾಸ್ ಉಗ್ರರು ಅವರನ್ನು ಮಾನವ ಗುರಾಣಿಗಳಂತೆ ಬಳಸದಂತೆ ತಡೆಯಲು ಸಾಧ್ಯವಾಗಬಹುದು.
ಲೇಖಕರು
ಗಿರೀಶ್ ಲಿಂಗಣ್ಣ
( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)