ಲಕ್ನೋ: ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳಿಸಿದ್ದು, ಇದುವರೆಗೂ ರಾಜ್ಯದಲ್ಲಿ ಒಂದೇ ಒಂದು ಗಲಭೆಯೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಲು ರಾಜ್ಯದ 23 ಕೋಟಿ ಜನತೆ ಸಕಾರಾತ್ಮಕವಾಗಿ ಸಹಕರಿಸಿದ್ದರಿಂದಲೇ ರಾಜ್ಯದ ಅಭಿವೃದ್ಧಿ ಸಾಧ್ಯವಾಗಿದೆ. ಹಾಗಾಗಿ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಯೋಗಿ ಆದಿತ್ಯನಾಥ್ ಹೇಳಿದರು.
ಎಸ್ಪಿ-ಬಿಎಸ್ಪಿ ಸರ್ಕಾರ ಟಾರ್ಗೆಟ್ ಮಾಡಿದ ಯೋಗಿ ಆದಿತ್ಯನಾಥ್
ಈ ಹಿಂದಿನ ಎಸ್ಪಿ-ಬಿಎಸ್ಪಿ ಸರ್ಕಾರಗಳ ಅಧಿಕಾರವಧಿಯನ್ನು ಟಾರ್ಗೆಟ್ ಮಾಡಿದ ಯೋಗಿ, 1990ರಿಂದಲೂ ಎಸ್ಪಿ-ಬಿಎಸ್ಪಿ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಗಲಭೆ, ದಂಧೆ, ಹಗರಣಗಳು ಎಗ್ಗಿಲ್ಲದಂತೆ ನಡೆದಿದ್ದವು. ರಾಜ್ಯದ ಅಭಿವೃದ್ಧಿಯೂ ಕುಂಠಿತವಾಗಿತ್ತು. ಅಪರಾಧಗಳ ಸಂಖ್ಯೆ ಹೆಚ್ಚಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಸರ್ಕಾರದ ನೀತಿಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿದರು.
ಕೋಮುಗಲಭೆ ಇಲ್ಲದೆ ರಾಜ್ಯ ಶಾಂತವಾಗಿದೆ
ಮಾರ್ಚ್ 19, 2017ರಲ್ಲಿ ಉತ್ತರಪ್ರದೇಶದ ಜನತೆ ಸೇವೆ ಮಾಡಲು ನಮಗೆ ಅವಕಾಶ ದೊರೆಯಿತು. ಅಲ್ಲಿಂದ ಇಲ್ಲಿಯವರೆಗೆ ಹದಗೆಟ್ಟಿದ್ದ ಉತ್ತರಪ್ರದೇಶದ ಪರಿಸ್ಥಿತಿಯನ್ನು ಬದಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಹಿಂದೆ ರಾಜ್ಯದಲ್ಲಿದ್ದ ಕೋಮುಗಲಭೆ ಈಗ ಹೆಸರಿಲ್ಲದಂತಾಗಿದೆ. ಈಗ ರಾಜ್ಯ ಶನತ್ವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ. ಇದು ನಮ್ಮ ಸರ್ಕಾರದ ಯಶಸ್ವಿ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಯೋಗಿ ಹೇಳಿದರು.
ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಆಗದ ಬಂಡವಾಳ ಹೂಡಿಕೆಯನ್ನು ನಾವು ಎರಡು ವರ್ಷಗಳಲ್ಲಿ ದ್ವಿಗುಣ ಮಾಡಿದ್ದೇವೆ. 15 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ ಒದಗಿಸಲಾಗಿದೆ. 68 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜನವರಿ 24ರಂದು ಉತ್ತರಪ್ರದೇಶ ಸಂಸ್ಥಾಪನಾ ದಿನವನ್ನು ರಾಜ್ಯದಲ್ಲಿ ಆಚರಿಸಲಾಯಿತು ಎಂದು ಯೋಗಿ ಆದಿತ್ಯನಾಥ್ ಹೇಳಿದರು.