ಪ್ರಧಾನಿ ಮೋದಿ ರ್ಯಾಲಿಯಲ್ಲಿ ಸಚಿವೆ ಸೊಂಟಕ್ಕೆ ಕೈ ಹಾಕಿದ ಸಚಿವ; ವ್ಯಾಪಕ ಪ್ರತಿಭಟನೆ

ಫೆಬ್ರವರಿ 9ರಂದು ಅಗರ್ತಲಾದಲ್ಲಿ ನಡೆದ ಪ್ರಧಾನಿ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ ವೇದಿಕೆಯ ಮೇಲೆ ತ್ರಿಪುರ ಸಚಿವ ಮನೋಜ್ ಕಂತಿ ದೇವ್ ಅವರು ಸಮಾಜ ಕಲ್ಯಾಣ ಸಚಿವೆ ಸಂತಾನಾ ಚಕ್ಮಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

Last Updated : Feb 12, 2019, 12:04 PM IST
ಪ್ರಧಾನಿ ಮೋದಿ ರ್ಯಾಲಿಯಲ್ಲಿ ಸಚಿವೆ ಸೊಂಟಕ್ಕೆ ಕೈ ಹಾಕಿದ ಸಚಿವ; ವ್ಯಾಪಕ ಪ್ರತಿಭಟನೆ title=

ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಸಚಿವೆಯ ಸೊಂಟಕ್ಕೆ ಸಚಿವರೊಬ್ಬರು ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. 

ಫೆಬ್ರವರಿ 9ರಂದು ಅಗರ್ತಲಾದಲ್ಲಿ ನಡೆದ ಪ್ರಧಾನಿ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ ವೇದಿಕೆಯ ಮೇಲೆ ತ್ರಿಪುರ ಸಚಿವ ಮನೋಜ್ ಕಂತಿ ದೇವ್ ಅವರು ಸಮಾಜ ಕಲ್ಯಾಣ ಸಚಿವೆ ಸಂತಾನಾ ಚಕ್ಮಾ ಅವರ ಸೊಂಟಕ್ಕೆ ಕೈ ಹಾಕಿರುವುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದ್ದು, ಈ ವರ್ತನೆಯಿಂದ ಸಿಡಿಮಿಡಿಗೊಂಡ ಸಚಿವೆ ಕೂಡಲೇ ಬಿಜೆಪಿ ಸಚಿವರ ಕೈಯನ್ನು ಹಿಂದಕ್ಕೆ ತಳ್ಳಿದ್ದಾರೆ. 

ಸದ್ಯ ಸಚಿವ ಮನೋಜ್ ದೇವ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತ್ರಿಪುರಾದ ಎಡಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿವೆ. "ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ವಿಪ್ಲಾಬ್ ಕುಮಾರ್ ದೇವ್ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದ ಸಾರ್ವಜನಿಕ ಸಮಾವೇಶದಲ್ಲಿ ವೇದಿಕೆಯ ಮೇಲೆ ಸಚಿವೆಯೊಂದಿಗೆ ಅನುಚಿತವಾಗಿ ವರ್ತಿಸಿದ ಸಚಿವ ಮನೋಜ್ ಕಾಂತಿ ದೇಬ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಎಡಪಂಥೀಯ ಸಂಚಾಲಕ ಬಿಜಾನ್ ಧಾರ್ ಆಗ್ರಹಿಸಿದ್ದಾರೆ. 

ಏತನ್ಮಧ್ಯೆ, ಸಚಿವರೊಬ್ಬರ ನಡತೆ ಬಗ್ಗೆ ಆರೋಪಿಸಿರುವ ಎಡಪಕ್ಷಗಳ ಒತ್ತಾಯವನ್ನು ಆಡಲಳಿತಾರೂಢ ಬಿಜೆಪಿ ತಳ್ಳಿಹಾಕಿದೆ. ಆದರೆ ಈ ಘಟನೆ ಬಗ್ಗೆ ಸಚಿವೆ ಸಂತಾನಾ ಚಕ್ಮಾ ಅವರು ಇದುವರೆಗೂ ಯಾವುದೇ ಹೇಳಿಕೆ ನೀಡದಿರುವುದು ಮತ್ತು ದೂರು ದಾಖಲಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಅಷ್ಟೇ ಅಲ್ಲದೆ,  CPI-M, AIDWA ಪಕ್ಷಗಳ ಮಹಿಳಾ ಘಟಕ  ಸಚಿವ ಮನೋಜ್ ಕಾಂತಿ ದೇಬ್ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭಿಸಿದ್ದು, ಬಂಧನಕ್ಕೆ ಒತ್ತಾಯಿಸಿವೆ.
 

Trending News