Budget Session 2022 Updates: ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ (Ramnath Kovind) ಅವರ ಭಾಷಣದ (President Address) ಮೂಲಕ ಈ ವರ್ಷದ ಮೊದಲ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಸಂಸತ್ತಿನ ಅಧಿವೇಶನ ಫೆಬ್ರುವರಿ 11ರವರೆಗೆ ನಡೆಯಲಿದೆ. ರಾಷ್ಟ್ರಪತಿಯವರ ಭಾಷಣದ (Budget Session) ನಂತರ ಕೇಂದ್ರ ವಿತ್ತ ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಆರ್ಥಿಕ ಸಮೀಕ್ಷೆಯನ್ನು (Economic Survey) ಮಂಡಿಸಲಿದ್ದಾರೆ. ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ. ಇಲ್ಲಿವೆ ರಾಷ್ಟ್ರಪತಿಯವರ ಭಾಷಣದ ಕೆಲ ಮುಖ್ಯಾಂಶಗಳು
>> ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತ ತನ್ನ ಅಧಿಕಾರಗಳನ್ನು ಪಡೆಯಲು ಸಹಾಯ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಕೂಡ ನಾನು ಗೌರವದಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
>>ಈ ವರ್ಷದಿಂದ ಸರ್ಕಾರವು ನೇತಾಜಿಯವರ ಜನ್ಮದಿನವಾದ ಜನವರಿ 23 ರಂದು ಗಣರಾಜ್ಯೋತ್ಸವವನ್ನು ಪ್ರಾರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಸಾಗಿ ಬಂದ ದಾರಿಯನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದರಿಂದ ಕಲಿಯುವುದು ಬಹಳ ಮುಖ್ಯ ಎಂದು ನನ್ನ ಸರ್ಕಾರ ನಂಬುತ್ತದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಕೋವಿಡ್ ಮಹಾಮಾರಿಯ ಕಾರಣ ಹಲವು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಸಂದರ್ಭಗಳಲ್ಲಿಯೂ ಕೇಂದ್ರ, ರಾಜ್ಯಗಳು, ವೈದ್ಯರು, ದಾದಿಯರು, ವಿಜ್ಞಾನಿಗಳು ಮತ್ತು ನಮ್ಮ ಆರೋಗ್ಯ ಕಾರ್ಯಕರ್ತರು ಒಂದುಗೂಡಿ ಕೆಲಸ ಮಾಡಿದ್ದಾರೆ. ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದ ಸಾಮರ್ಥ್ಯ ಲಸಿಕೆ ವಿತರಣೆಯ ಕಾರ್ಯಕ್ರಮದಲ್ಲಿ ಕಂಡುಬಂದಿದೆ. ಒಂದು ವರ್ಷದೊಳಗೆ, 150 ಕೋಟಿಗೂ ಹೆಚ್ಚು ಡೋಸ್ ಲಸಿಕೆಯನ್ನು ನೀಡಿದ ದಾಖಲೆಯನ್ನು ಭಾರತ ಬರೆದಿದೆ. ಇಂದು ನಾವು ಗರಿಷ್ಠ ಲಸಿಕೆಯ ಪ್ರಮಾಣ ವಿತರಣೆಯ ವಿಷಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಬಡವರು ಆಯುಷ್ಮಾನ್ ಭಾರತ್ ಕಾರ್ಡ್ನಿಂದ ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ. ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಗಳ ಲಭ್ಯತೆಯೂ ಕೂಡ ಒಂದು ಉತ್ತಮ ಹೆಜ್ಜೆಯಾಗಿದೆ ಎಂದು ಕೊವಿಂದ್ ಹೇಳಿದ್ದಾರೆ.
>> ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿರುವ ರಾಷ್ಟ್ರಪತಿಗಳು, ಅಂಬೇಡ್ಕರ್ ಅವರ ಆದರ್ಶ ಸಮಾಜವು ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮರಸ್ಯವನ್ನು ಆಧರಿಸಿದೆ. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ರೂಪವಲ್ಲ, ಪ್ರಜಾಪ್ರಭುತ್ವದ ಆಧಾರವು ಜನರಿಗೆ ಗೌರವದ ಭಾವನೆಯಾಗಿದೆ. ನನ್ನ ಸರ್ಕಾರವು ಬಾಬಾಸಾಹೇಬರ ಆದರ್ಶಗಳನ್ನು ತನ್ನ ಮಾರ್ಗದರ್ಶಿ ತತ್ವವೆಂದು ಪರಿಗಣಿಸುತ್ತದೆ ಎಂದಿದ್ದಾರೆ.
>> ಯಾವುದೇ ಹಸಿದ ವ್ಯಕ್ತಿ ಖಾಲಿ ಹೊಟ್ಟೆ ಮನೆಗೆ ಹೋಗಬಾರದು ಎಂಬುದನ್ನು ಸುನಿಶ್ಚಿತಗೊಳಿಸಲು ನಮ್ಮ ಸರ್ಕಾರ ಪಿಎಂ ಗರೀಬ್ ಕಲ್ಯಾಣ್ ಯೋಜನೆಯ ಅಡಿ ಬಡವರಿಗೆ ಉಚಿತ ಪಡಿತರ ವಿತರಿಸುತ್ತದೆ. ಇಂದು ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಆಹಾರ ಪೂರೈಕೆಯ ಕಾರ್ಯಕ್ರಮ ಮುನ್ನಡೆಸುತ್ತಿದೆ. ಈ ಯೋಜನೆಯನ್ನು ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> 64 ಸಾವಿರ ಕೋಟಿ ರೂ. ಅನುದಾನದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಭವಿಷ್ಯದ ಆರೋಗ್ಯ ಬಿಕ್ಕಟ್ಟಿಗೆ ದೇಶವನ್ನು ಸಿದ್ಧಪಡಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.
>> ಜನ್-ಧನ್-ಆಧಾರ್-ಮೊಬೈಲ್, ಜಾಮ್ ಟ್ರಿನಿಟಿಗಳನ್ನು ನಮ್ಮ ಸರ್ಕಾರ ನಾಗರಿಕರ ಸಬಲೀಕರಣದೊಂದಿಗೆ ಜೋಡಿಸಿದ ಕಾರಣ ಇದೀಗ ನಾವು ಅದರ ಪರಿಣಾಮಗಳನ್ನು ನೋಡುತ್ತಿದ್ದೇವೆ. ದೇಶದ 44 ಕೋಟಿಗೂ ಹೆಚ್ಚು ಬಡ ನಾಗರಿಕರು ಇಂದು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದ್ದು, ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೋಟ್ಯಾಂತರ ಫಲಾನುಭವಿಗಳು DBT ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಕೊವಿಂದ್ ಹೇಳಿದ್ದಾರೆ.
>> ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ನಮ್ಮ ಸರ್ಕಾರ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನೂ ನಡೆಸುತ್ತಿದೆ. ಈ ಯೋಜನೆಯ ಮೂಲಕ ಇದುವರೆಗೆ 28 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು 2,900 ಕೋಟಿ ರೂ.ಗೂ ಹೆಚ್ಚು ಆರ್ಥಿಕ ನೆರವು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹೇಳಿದ್ದಾರೆ.
>> ಇಂದು ಭಾರತದ ಕೃಷಿ ರಫ್ತು 3 ಲಕ್ಷ ಕೋಟಿ ರೂ. ದಾಟಿದೆ. ಸರ್ಕಾರ ಸುಮಾರು 433 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಗೋಧಿಯನ್ನು ಖರೀದಿಸಿದ್ದು, ಇದರಿಂದ ಸುಮಾರು 50 ಲಕ್ಷಕ್ಕೂ ಅಧಿಕ ರೈತರಿಗೆ ಲಾಭ ತಲುಪಿದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಪಿಎಂ-ಕಿಸಾನ್ ಮೂಲಕ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 1.80 ಲಕ್ಷ ಕೋಟಿ ರೂ. ದೊರೆತಿವೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಾಣುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಮಹಿಳಾ ಸಬಲೀಕರಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಉಜ್ವಲ ಯೋಜನೆಯ ಯಶಸ್ಸಿಗೆ ನಾವು ಸಾಕ್ಷಿಯಾಗಿದ್ದೇವೆ. ಮುದ್ರಾ ಯೋಜನೆ ಮೂಲಕ ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಗಳನ್ನು ಉತ್ತೇಜಿಸಲಾಗಿದೆ. 'ಬೇಟಿ ಬಚಾವೋ, ಬೇಟಿ ಪಢಾವೋ' ಹಲವು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ .
>> ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಸ್ಥಳೀಯ ಭಾಷೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ಭಾರತೀಯ ಭಾಷೆಗಳಲ್ಲಿ ನಡೆಸಲು ಒತ್ತು ನೀಡಲಾಗಿದೆ. 10 ರಾಜ್ಯಗಳ 19 ಎಂಜಿನಿಯರಿಂಗ್ ಕಾಲೇಜುಗಳು ಈ ವರ್ಷ 6 ಭಾರತೀಯ ಭಾಷೆಗಳಲ್ಲಿ ಶಿಕ್ಷಣ ನೀಡುತ್ತಿವೆ ಎಂದು ಕೊವಿಂದ್ ಹೇಳಿದ್ದಾರೆ.
>> ನನ್ನ ಸರ್ಕಾರವು ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಿದೆ ಹಾಗೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಸ್ಥಾನಮಾನವನ್ನು ನೀಡಿದೆ ಎಂದು ರಾಮನಾಥ್ ಕೊವಿಂದ್ ಹೇಳಿದ್ದಾರೆ.
>> ಹರ್ ಘರ್ ಜಲ ಯೋಜನೆಯಡಿ 6 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿಯಿಂದ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
>> ಎಲ್ಲಾ 33 ಸೈನಿಕ ಶಾಲೆಗಳು ಈಗ ಹೆಣ್ಣುಮಕ್ಕಳಿಗೂ ಪ್ರವೇಶ ಆರಂಭಿಸಿರುವುದು ಸಂತಸದ ವಿಷಯ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಯಲ್ಲಿ ಮಹಿಳಾ ಕೆಡೆಟ್ಗಳ ಪ್ರವೇಶಕ್ಕೂ ಸರ್ಕಾರ ಅನುಮೋದನೆ ನೀಡಿದೆ. ಮಹಿಳಾ ಕೆಡೆಟ್ಗಳ ಮೊದಲ ಬ್ಯಾಚ್ ಜೂನ್ 2022 ರಲ್ಲಿ ಎನ್ಡಿಎ ಸೇರಲಿದೆ ಎಂಬುದು ಸಂತಸದ ವಿಷಯ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ದೇಶದ ಅಭಿವೃದ್ಧಿಯಲ್ಲಿ ನಮ್ಮ ಸಣ್ಣ ರೈತರು ಪಾತ್ರ ಪ್ರಮುಖವಾಗಿದೆ. ನನ್ನ ಸರ್ಕಾರ ಯಾವಾಗಲೂ ಶೇ 80ರಷ್ಟು ಸಣ್ಣ ರೈತರಿಗೆ ಆದ್ಯತೆ ನೀಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ರೂಪದಲ್ಲಿ 11 ಕೋಟಿಗೂ ಹೆಚ್ಚು ರೈತರ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಅವರು ಹೇಳಿದ್ದಾರೆ.
>> ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಯುವ ಶಕ್ತಿಯ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಭಾರತ ತನ್ನ ಅತ್ಯುತ್ತಮ ಪ್ರದರ್ಶನ ನೀಡಿ 7 ಪದಕಗಳನ್ನು ಗೆದ್ದುಕೊಂಡಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲೂ ಭಾರತ 19 ಪದಕ ಗೆದ್ದು ದಾಖಲೆ ನಿರ್ಮಿಸಿದೆ. ಒಲಿಂಪಿಕ್ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸುವ ಸಲುವಾಗಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ನೂರಾರು ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ಕೊವಿಂದ್ ಹೇಳಿದ್ದಾರೆ.
>> 2016 ರಿಂದ 56 ವಿವಿಧ ವಲಯಗಳಲ್ಲಿ 60 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸುವುದರೊಂದಿಗೆ ದೇಶದಲ್ಲಿ ಆರು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ನನ್ನ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
>> ತೀನ್ ತಲಾಖ್ ಅನ್ನು ಅಪರಾಧ ಎಂದು ಘೋಷಿಸುವ ಮೂಲಕ ನಮ್ಮ ಸರ್ಕಾರವು ದುಷ್ಕೃತ್ಯಗಳನ್ನು ತೊಡೆದುಹಾಕುವ ದಿಕ್ಕಿನಲ್ಲಿ ಸಾಗುತ್ತಿದೆ. ಮುಸ್ಲಿಮ್ ಮಹಿಳೆಯರು ಮೆಹ್ರಮ್ ಜೊತೆ ಹಜ್ ಯಾತ್ರೆಗೆ ಹೋಗುವುದಕ್ಕೆ ಇದ್ದ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದೆ.
>> ಹವಾಮಾನ ಬದಲಾವಣೆಯನ್ನು ಎದುರಿಸುವ ತನ್ನ ಬದ್ಧತೆಯ ಭಾಗವಾಗಿ ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ನಮ್ಮ ಹೊಂದಿದೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
>> ಮಾರ್ಚ್ 2014 ರಲ್ಲಿ 90,000 ಕಿಮೀ ಹೋಲಿಕೆಯಲ್ಲಿ ಇಂದು ಭಾರತವು 1.40 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು ಹೊಂದಿದೆ.
>> ರಕ್ಷಣಾ ಒಪ್ಪಂದಗಳಲ್ಲಿ ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡಲಾಗಿದೆ. ಸಶಸ್ತ್ರ ಪಡೆಗಳು ಇನ್ಮುಂದೆ 209 ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ.
ಇದನ್ನೂ ಓದಿ-ಕಾಂಗ್ರೆಸ್ ಅನ್ನು 'All India Confused Party' ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
>> ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಭಾರತಕ್ಕೆ 48 ಶತಕೋಟಿ ಡಾಲರ್ ಮೌಲ್ಯದ ಎಫ್ ಡಿಐ ಸಿಕ್ಕಿದ್ದು, ಇದು ದೇಶದ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ-Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್
>> ಜಮ್ಮು ಮತ್ತು ಕಾಶ್ಮೀರದ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕಾಗಿ ಉತ್ತಮ ಅವಕಾಶಗಳನ್ನು ಒದಗಿಸಲು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲಿ 7 ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ 2 ಏಮ್ಸ್ಗಳ ನಿರ್ಮಾಣಕ್ಕೆ ಕೆಲಸ ಮುಂದ್ವರೆದಿದೆ. 2 ಏಮ್ಸ್ಗಳಲ್ಲಿ ಒಂದು ಜಮ್ಮು ಮತ್ತು ಇನ್ನೊಂದು ಕಾಶ್ಮೀರದಲ್ಲಿದೆ. ಐಐಟಿ ಜಮ್ಮು ಮತ್ತು ಐಐಎಂ ಜಮ್ಮುವಿನಲ್ಲಿ ಸ್ಥಾಪನೆಗೆ ಕೆಲಸ ನಡೆಯುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಹೇಳಿದ್ದಾರೆ.
ಇದನ್ನೂ ಓದಿ-ಕರ್ನಾಟಕದ ಸೂಪರ್ ಮಾರ್ಕೆಟ್ಗಳಲ್ಲಿ ವೈನ್ ಮಾರಾಟಕ್ಕೆ ತಯಾರಿ ನಡೆಸುತ್ತಿದ್ದೆಯಾ ರಾಜ್ಯ ಸರ್ಕಾರ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.