ನವದೆಹಲಿ: ಅಮೇರಿಕಾ ದೇಶವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
"ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ" ಎಂದು ಶ್ವೇತಭವನದ ಕೌನ್ಸಿಲರ್ ಕೆಲ್ಲಿಯೆನ್ ಕಾನ್ವೇ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಈ ವಾರದ ಆರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಜಂಟಿ ಮಾಧ್ಯಮ ಲಭ್ಯತೆಯ ಸಂದರ್ಭದಲ್ಲಿ ಟ್ರಂಪ್ ಭಾರತವನ್ನು ದಿಗ್ಭ್ರಮೆಗೊಳಿಸಿ ಮೋದಿ ಅಮೆರಿಕಾದ ಮಧ್ಯಸ್ಥಿಕೆ ಕೇಳಿದ್ದಾರೆ ಎಂದು ಹೇಳಿದ್ದರು. ಜಿ -20 ಶೃಂಗಸಭೆ ಜೊತೆಗೆ ಕಳೆದ ತಿಂಗಳು ಜಪಾನ್‌ನಲ್ಲಿ ನಡೆದ ಸಭೆಯಲ್ಲಿ ಮೋದಿ ಕೇಳಿದ್ದಾರೆ ಎಂದು ಟ್ರಂಪ್ ಹೇಳಿದ್ದರು.
ಇನ್ನೊಂದೆಡೆ ಇದಕ್ಕೆ ಸ್ಪಷ್ಟನೆ ನೀಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಪ್ರಧಾನಿ ಮೋದಿ ಇದನ್ನು ಎಂದಿಗೂ ಕೇಳಲಿಲ್ಲ ಮತ್ತು ಕಾಶ್ಮೀರದ ವಿಷಯವನ್ನು ಉಭಯ ನಾಯಕರ ನಡುವೆ ಚರ್ಚಿಸಲಾಗಿಲ್ಲ,ಇದು ಕಾಶ್ಮೀರ ದ್ವಿಪಕ್ಷೀಯ ವಿಷಯ ಎಂದು ಸಚಿವರು ಹೇಳಿದರು.