ಸೂರ್ಯನ ರಹಸ್ಯಗಳ ಅನಾವರಣ: ಚಂದ್ರನ ದಕ್ಷಿಣ ಧ್ರುವದ ಬಳಿಕ, ಆದಿತ್ಯ-ಎಲ್1ನಿಂದ ಸೂರ್ಯನೆಡೆಗೆ ಭಾರತ

Unveiling the Secrets of the Sun : ಭಾರತದ ಮೊದಲ ಅಬ್ಸರ್ವೇಟರಿ ವರ್ಗದ ಸೌರ ಅನ್ವೇಷಣಾ ಯೋಜನೆ, ಆದಿತ್ಯ-ಎಲ್1 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೊಳಿಸಲಿದೆ. 

Written by - Girish Linganna | Edited by - Savita M B | Last Updated : Aug 29, 2023, 12:12 PM IST
  • ಭಾರತದ ಮೊದಲ ಅಬ್ಸರ್ವೇಟರಿ ವರ್ಗದ ಸೌರ ಅನ್ವೇಷಣಾ ಯೋಜನೆ
  • ಈ ಯೋಜನೆ ಸೂರ್ಯ ಮತ್ತು ಅದರ ಹೊರಗಿನ ಕೊರೋನಾವನ್ನು ಅಧ್ಯಯನ ನಡೆಸಲಿದೆ
  • ಇದು ಭಾರತ ಕೈಗೊಂಡ ಮುಂದಿನ ಯೋಜನೆಯಾಗಿದೆ
ಸೂರ್ಯನ ರಹಸ್ಯಗಳ ಅನಾವರಣ: ಚಂದ್ರನ ದಕ್ಷಿಣ ಧ್ರುವದ ಬಳಿಕ, ಆದಿತ್ಯ-ಎಲ್1ನಿಂದ ಸೂರ್ಯನೆಡೆಗೆ ಭಾರತ title=

 Aditya-L1 : ಈ ಯೋಜನೆ ಸೂರ್ಯ ಮತ್ತು ಅದರ ಹೊರಗಿನ ಕೊರೋನಾವನ್ನು ಅಧ್ಯಯನ ನಡೆಸಲಿದೆ. ಇದೊಂದು ಸೂರ್ಯ ಅನ್ವೇಷಣಾ ಯೋಜನೆಯಾಗಿದ್ದು, ಸೂರ್ಯನ ಅನಿಲದ ಮಾದರಿ, ಶಕ್ತಿ ಮಾದರಿ, ಕೊರೋನಾದ ಬಿಸಿಯಾಗುವಿಕೆ, ಹಾಗೂ ಸೌರ ಗಾಳಿಯ ವೇಗವರ್ಧನೆಯ ಕುರಿತು ಅಧ್ಯಯನ ನಡೆಸಲಿದೆ. 

ಚಂದ್ರಯಾನ-3 ಯೋಜನೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದ ಬಳಿಕ, ಇದು ಭಾರತ ಕೈಗೊಂಡ ಮುಂದಿನ ಯೋಜನೆಯಾಗಿದೆ. ಆದಿತ್ಯ-ಎಲ್1 ಯೋಜನೆಯ ಉಡಾವಣೆ ಸೆಪ್ಟೆಂಬರ್ 2ರಂದು ನೆರವೇರುವ ನಿರೀಕ್ಷೆಗಳಿವೆ.

ಆದಿತ್ಯ-ಎಲ್1 ಯೋಜನೆಯ ಉದ್ದೇಶಗಳು
ಆದಿತ್ಯ-ಎಲ್1 ಯೋಜನೆಗೆ ಸೂರ್ಯನಿಗೆ ಸಂಸ್ಕೃತದ ಹೆಸರಾದ ಆದಿತ್ಯ ಎಂದು ಇಡಲಾಗಿದೆ. ಈ ಯೋಜನೆ ಸೂರ್ಯನ ಫೋಟೋಸ್ಫಿಯರ್, ಕ್ರೋಮೋಸ್ಫಿಯರ್ ಹಾಗೂ ಸೂರ್ಯನ ಹೊರಪದರದ ಅಧ್ಯಯನ ನಡೆಸಲಿದೆ. ಈ ಬಾಹ್ಯಾಕಾಶ ನೌಕೆ ಏಳು ಪೇಲೋಡ್‌ಗಳನ್ನು ಹೊಂದಿರಲಿದೆ.

ಆದಿತ್ಯ-ಎಲ್1 ಉಡಾವಣಾ ವಾಹನ
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್, ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ. ಪಿಎಸ್ಎಲ್‌ವಿ ಇಸ್ರೋದ ಉಡಾವಣಾ ವಾಹನ ಬಳಗದ ಅತ್ಯಂತ ನಂಬಿಕಸ್ಥ, ಪ್ರಬಲ ರಾಕೆಟ್ ಆಗಿದ್ದು, ವಿವಿಧ ಕಕ್ಷೆಗಳಿಗೆ ಪೇಲೋಡ್‌ಗಳನ್ನು ತಲುಪಿಸುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿದೆ. ಈ ಉಡಾವಣಾ ವಾಹನ ಬಾಹ್ಯಾಕಾಶ ನೌಕೆಯನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಬಳಿಕ ಆದಿತ್ಯ-ಎಲ್1 ಅದರಿಂದ ಬೇರ್ಪಡಲಿದೆ. ಬಾಹ್ಯಾಕಾಶ ನೌಕೆಯನ್ನು ಲ್ಯಾಗ್ರೇಂಜಿಯನ್ ಪಾಯಿಂಟ್ 1 (ಎಲ್-1) ನಲ್ಲಿ ಇಟ್ಟು, ಸೂರ್ಯನ ವಿನ್ಯಾಸವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ-ಮದರಸಾಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್  ಶಿಕ್ಷಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ

ಈ ಲ್ಯಾಗ್ರೇಂಜ್ ಬಿಂದು ಎಂದರೇನು?
ಲ್ಯಾಗ್ರೇಂಜ್ ಬಿಂದು ಎನ್ನುವುದು ಬಾಹ್ಯಾಕಾಶದಲ್ಲಿರುವ ಒಂದು ಸ್ಥಳವಾಗಿದ್ದು, ಅಲ್ಲಿ ಭೂಮಿ ಮತ್ತು ಚಂದ್ರ, ಅಥವಾ ಭೂಮಿ ಮತ್ತು ಸೂರ್ಯರಂತಹ ಎರಡು ಬೃಹತ್ ಕಾಯಗಳ ನಡುವಿನ ಗುರುತ್ವಾಕರ್ಷಣಾ ಬಲಗಳು ಸಮಾನವಾಗಿ, ಬಾಹ್ಯಾಕಾಶ ನೌಕೆಗೆ ಸ್ಥಿರ ಸ್ಥಾನ ಒದಗಿಸುತ್ತದೆ. ಇದರಿಂದಾಗಿ ಬಾಹ್ಯಾಕಾಶ ನೌಕೆ ಆ ಬಿಂದುವಿನಲ್ಲಿ ನಿರಂತರ ಪ್ರೊಪಲ್ಷನ್ ಅಗತ್ಯವಿಲ್ಲದೆ, ಸ್ಥಿರವಾಗಿರಲು (ಹೋವರ್) ಸಾಧ್ಯವಾಗುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ, ಎಲ್ ಎಂದು ಗುರುತಿಸಲಾಗುವ ಒಟ್ಟು ಐದು ಲ್ಯಾಗ್ರೇಂಜ್ ಬಿಂದುಗಳಿವೆ. ಎಲ್-1 ಬಿಂದು, ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದು, ಈ ಐದು ಬಿಂದುಗಳಲ್ಲಿ ಒಂದಾಗಿದೆ. ಈ ಎಲ್-1 ಬಿಂದುವಿನ ಸುತ್ತ ಒಂದು ಹ್ಯಾಲೋ ಕಕ್ಷೆ ಇರುವುದರಿಂದ, ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಈ ಬಿಂದುವಿನಲ್ಲಿ ಇಡಲಾಗುತ್ತದೆ. 

ಈ ವಿಶಿಷ್ಟ ಕಕ್ಷೆ, ಬಾಹ್ಯಾಕಾಶ ನೌಕೆಗೆ ಯಾವುದೇ ಅಡೆತಡೆಯಿಲ್ಲದೆ, ನಿರಂತರವಾಗಿ, ಗ್ರಹಣದ ಸಮಸ್ಯೆಯೂ ಬರದಂತೆ ಸೂರ್ಯನನ್ನು ಗಮನಿಸುವ ಸಾಮರ್ಥ್ಯ ಒದಗಿಸುತ್ತದೆ. ಈ ಬಿಂದು, ನೈಜ ಸಮಯದಲ್ಲಿ ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅದರ ಪ್ರಭಾವವನ್ನು ಅಧ್ಯಯನ ನಡೆಸಲು ಪೂರಕವಾಗಿದೆ. ಎಲ್-1 ಬಿಂದುವಿಗೆ ತಲುಪಲು, ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಬಹುತೇಕ 125 ದಿನಗಳ ಪ್ರಯಾಣ ನಡೆಸಬೇಕಾಗುತ್ತದೆ.

ಈ ಎಲ್-1 ಬಿಂದು ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ ಜಂಟಿ ಯೋಜನೆಯಾದ ಸೋಲಾರ್ ಆ್ಯಂಡ್ ಹೀಲಿಯೋಸ್ಫಿಯರಿಕ್ ಅಬ್ಸರ್ವೇಟರಿ ಸ್ಯಾಟಲೈಟ್‌ಗೂ (SoHo) ನಿಲುಗಡೆಯ ತಾಣವಾಗಿದೆ.

ಆದಿತ್ಯ ಎಲ್-1 ಪೇಲೋಡ್‌ಗಳು
ಆದಿತ್ಯ ಎಲ್-1 ಸೂರ್ಯನ ವ್ಯವಸ್ಥಿತ ಅಧ್ಯಯನ ನಡೆಸುವ ಉದ್ದೇಶದಿಂದ ಏಳು ವೈಜ್ಞಾನಿಕ ಪೇಲೋಡ್‌ಗಳನ್ನು ಕೊಂಡೊಯ್ಯಲಿದೆ. ಇವುಗಳು ಸೂರ್ಯನ ಕೊರೋನಾದ ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ ಅಧ್ಯಯನ ಹಾಗೂ ಕೊರೋನಲ್ ಮಾಸ್ ಇಜೆಕ್ಷನ್ ಅಧ್ಯಯನ ನಡೆಸಲು ಪರಿಣಾಮಕಾರಿಯಾಗಲಿವೆ. ಈ ಅಧ್ಯಯನ, ಸೂರ್ಯನ ಅತ್ಯಾಧುನಿಕ ಅಧ್ಯಯನವಾಗಿರಲಿದೆ. ಆದಿತ್ಯ ಎಲ್-1 ಹೊಂದಿರುವ ಪೇಲೋಡ್‌ಗಳನ್ನು ಭಾರತದ ವಿವಿಧ ಪ್ರಯೋಗಾಲಯಗಳಲ್ಲಿ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಎಲ್ಲ ಪೇಲೋಡ್‌ಗಳನ್ನು ಇಸ್ರೋದ ವಿವಿಧ ಕೇಂದ್ರಗಳಲ್ಲಿ ಪರಸ್ಪರ ಸಹಕಾರದೊಂದಿಗೆ ನಿರ್ಮಿಸಲಾಗಿದೆ.

ಆದಿತ್ಯ ಎಲ್-1 ಒಯ್ಯುವ ಪೇಲೋಡ್‌ಗಳು ಮತ್ತು ಅವುಗಳ ಕಾರ್ಯ
1. ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್‌ಸಿ): ಈ ಉಪಕರಣ ಸೂರ್ಯನ ಕೊರೋನಾ ಹಾಗೂ ಕೊರೋನಲ್ ಮಾಸ್ ಇಜೆಕ್ಷನ್ನಿನ ಆಯಾಮಗಳನ್ನು ಅಧ್ಯಯನ ನಡೆಸಲಿದೆ. ಈ ಉಪಕರಣವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋ ಫಿಸಿಕ್ಸ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಇದನ್ನೂ ಓದಿ-Rain Alert: ರಾಜ್ಯದ 10 ಜಿಲ್ಲೆಗಳಲ್ಲಿ ಇಂದಿನಿಂದ ಸುರಿಯಲಿದೆ ಭಾರೀ ಮಳೆ: ಜಲಪ್ರಳಯದ ಸೂಚನೆ, ಗುಡುಗು-ಸಿಡಿಲಿನ ಎಚ್ಚರಿಕೆ

2. ಸೋಲಾರ್ ಅಲ್ಟ್ರಾವಯೊಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ): ಈ ಪೇಲೋಡ್ ಸೂರ್ಯನ ಫೋಟೋಸ್ಫಿಯರ್ ಹಾಗೂ ಕ್ರೋಮೋಸ್ಫಿಯರ್ ಗಳ ಛಾಯಾಚಿತ್ರಗಳನ್ನು ನಿಯರ್ ಅಲ್ಟ್ರಾವಯೊಲೆಟ್ (ಯುವಿ) ನಲ್ಲಿ ಚಿತ್ರಿಸುತ್ತದೆ ಹಾಗೂ ಯುವಿ ಸನಿಹದ ಸೌರ ವಿಕಿರಣಗಳನ್ನು ಅಳೆಯುತ್ತದೆ. ಈ ಉಪಕರಣವನ್ನು ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆ್ಯಸ್ಟ್ರೋನಮಿ ಆ್ಯಂಡ್ ಆ್ಯಸ್ಟ್ರೋ ಫಿಸಿಕ್ಸ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

3. ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ಎಎಸ್‌ಪಿಇಎಕ್ಸ್): ಈ ಉಪಕರಣವನ್ನು ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

4. ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (ಪಿಎಪಿಎ): ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರಿನ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಈ ಪೇಲೋಡ್, ಸೌರ ಗಾಳಿ ಮತ್ತು ಎನರ್ಜೆಟಿಕ್ ಅಯಾನ್‌ಗಳು ಹಾಗೂ ಅವುಗಳ ಶಕ್ತಿ ಹಂಚಿಕೆಯನ್ನು ಅಧ್ಯಯನ ನಡೆಸಲಿದೆ.

5. ಸೋಲಾರ್ ಲೋ ಎನರ್ಜಿ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ (ಎಸ್ಒಎಲ್ಇಎಕ್ಸ್ಎಸ್)

6. ಹೈ ಎನರ್ಜಿ ಎಲ್-1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಚ್ಇಎಲ್1ಒಎಸ್): ಈ ಎರಡು ಉಪಕರಣಗಳನ್ನು ಬೆಂಗಳೂರಿನ ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ವಿಶಾಲ ಕ್ಷ ಕಿರಣ ವ್ಯಾಪ್ತಿಯಲ್ಲಿ, ಸೂರ್ಯನಿಂದ ಹೊರಬರುವ ಕ್ಷ ಕಿರಣ ಜ್ವಾಲೆಗಳನ್ನು ಅಧ್ಯಯನ ನಡೆಸಲಿವೆ.

7. ಅಡ್ವಾನ್ಸ್ಡ್ ಟ್ರೈ ಆ್ಯಕ್ಸಿಯಲ್ ಹೈ ರೆಸಲ್ಯೂಷನ್ ಮ್ಯಾಗ್ನೆಟೋಮೀಟರ್ಸ್: ಈ ಪೇಲೋಡ್ ಎಲ್-1 ಬಿಂದುವಿನಲ್ಲಿ ಅಂತರ್ ಗ್ರಹೀಯ ಕಾಂತೀಯ ಕ್ಷೇತ್ರವನ್ನು ಅಧ್ಯಯನ ನಡೆಸಲಿದೆ. ಈ ಪೇಲೋಡನ್ನು ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಇಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಇಸ್ರೋದ ಆದಿತ್ಯ ಎಲ್-1 ಯೋಜನಾ ವೆಚ್ಚ
ಆದಿತ್ಯ ಎಲ್-1 ಯೋಜನೆಯನ್ನು ಅಂದಾಜು ಕೇವಲ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರೂಪಿಸಲಾಗಿದೆ. ಇಸ್ರೋ ಈ ಯೋಜನೆಗಾಗಿ 2019ರ ಡಿಸೆಂಬರ್ ತಿಂಗಳಲ್ಲೇ ಕಾರ್ಯಾರಂಭಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News