UP Board: ಜೈಲಿನಿಂದ ಪರೀಕ್ಷೆ ಬರೆದಿದ್ದ ಕಿಡ್ನಾಪ್ & ಕೊಲೆ ಆರೋಪಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ!

ಉತ್ತರ ಪ್ರದೇಶದ ಸಹರಾನ್‌ಪುರದ ಲೋಕೇಶ್ 12ನೇ ತರಗತಿಯಲ್ಲಿ ಶೇ.72ರಷ್ಟು ಅಂಕ ಗಳಿಸಿದರೆ, ಗಾಜಿಯಾಬಾದ್‌ನ ಅರ್ಜುನ್ 10ನೇ ತರಗತಿಯಲ್ಲಿ ಶೇ.76ರಷ್ಟು ಅಂಕ ಪಡೆದುಕೊಂಡಿದ್ದಾರೆ.

Written by - Puttaraj K Alur | Last Updated : Jun 20, 2022, 04:37 PM IST
  • ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಿಡ್ನಾಪ್ ಮತ್ತು ಕೊಲೆ ಆರೋಪಿಗಳು
  • ಜೈಲಿನಲ್ಲಿದ್ದುಕೊಂಡೇ ಪರೀಕ್ಷೆ ಬರೆದಿದ್ದ ಆರೋಪಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
  • SSLC ಮತ್ತು PUC ಪರೀಕ್ಷೆಯಲ್ಲಿ ಶೇ.70ಕ್ಕೂ ಹೆಚ್ಚು ಅಂಕ ಗಳಿಸಿರುವ ಆರೋಪಿಗಳು
UP Board: ಜೈಲಿನಿಂದ ಪರೀಕ್ಷೆ ಬರೆದಿದ್ದ ಕಿಡ್ನಾಪ್ & ಕೊಲೆ ಆರೋಪಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ! title=
Prisoners Pass Exam in UP Board

ನವದೆಹಲಿ: ಉತ್ತರ ಪ್ರದೇಶದ ಸಹರಾನ್‌ಪುರದ ಲೋಕೇಶ್ 12ನೇ ತರಗತಿಯಲ್ಲಿ ಶೇ.72ರಷ್ಟು ಅಂಕಗಳನ್ನು ಗಳಿಸಿದರೆ, ಗಾಜಿಯಾಬಾದ್‌ನ ಅರ್ಜುನ್ 10ನೇ ತರಗತಿಯಲ್ಲಿ ಶೇ.76ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರು ಕಿಡ್ನಾಪ್ ಮತ್ತು ಕೊಲೆ ಆರೋಪಿಗಳಾಗಿದ್ದು, ಜೈಲಿನಲ್ಲಿದ್ದುಕೊಂಡೇ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಿಡ್ನಾಪ್ ಪ್ರಕರಣದ ಆರೋಪಿ ಲೋಕೇಶ್

ಜೈಲು ಅಧಿಕಾರಿಗಳ ಮಾಹಿತಿ ಪ್ರಕಾರ ಲೋಕೇಶ್ ಸಹರಾನ್‌ಪುರ ಜೈಲಿನಲ್ಲಿದ್ದು, ಬಾಲಕಿಯನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಲೋಕೇಶ್ ಮೇ 2018ರಲ್ಲಿ ತನ್ನ ಸ್ವಂತ ಸಂಬಂಧಿಯೊಬ್ಬರ ಅಪ್ರಾಪ್ತ ಮಗಳನ್ನು ಅಪಹರಿಸಿ ಬಸ್ಸಿನಲ್ಲಿ ಕರ್ನಾಲ್ಗೆ ಕರೆದೊಯ್ದ ಆರೋಪ ಹೊರಿಸಲಾಗಿತ್ತು. ಬಳಿಕ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕಾಗಿ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಇದನ್ನೂ ಓದಿ: Viral Video: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸ ತೆಗೆದ ಪ್ರಧಾನಿ ಮೋದಿ

2021ರಲ್ಲಿ ಶಿಕ್ಷೆ ವಿಧಿಸಲಾಗಿತ್ತು

ಸೆಪ್ಟೆಂಬರ್ 30, 2021ರಂದು ಲೋಕೇಶ್‍ಗೆ 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಜೈಲಿನಲ್ಲಿರುವಾಗ ಲೋಕೇಶ್‌ ಯಾವಾಗಲೂ ಓದಲು ಬಯಸುತ್ತಿದ್ದ. ಆತನಿಗೆ ಇಂಗ್ಲಿಷ್ ಮತ್ತು ಇತಿಹಾಸದಲ್ಲಿ ಅಪಾರ ಆಸಕ್ತಿ ಇದ್ದು, ಅದಕ್ಕಾಗಿ ಜೈಲಿನಲ್ಲಿಯೇ ಎಲ್ಲ ಪುಸ್ತಕಗಳನ್ನು ಒದಗಿಸಿದ್ದೇವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12ನೇ ಪರೀಕ್ಷೆಗೆ ಹಾಜರಾದ ಕೈದಿಗಳಲ್ಲಿ ಈತ ಟಾಪರ್ ಆಗಿದ್ದಾನೆ.

ಕೊಲೆ ಪ್ರಕರಣದ ಆರೋಪಿ ಅರ್ಜುನ್  

ಅದೇ ರೀತಿ ಕೊಲೆ ಆರೋಪಿ ಅರ್ಜುನ್ ಸಿಂಗ್ ಗಾಜಿಯಾಬಾದ್ ಜೈಲಿನಲ್ಲಿದ್ದ. ಈತ 10ನೇ ತರಗತಿಯಲ್ಲಿ ಶೇ.76ರಷ್ಟು ಅಂಕಗಳನ್ನು ಗಳಿಸಿದ್ದು, ಗಣಿತ ಮತ್ತು ವಿಜ್ಞಾನದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾನೆ. ಜೈಲಿನ ಹಿರಿಯ ಅಧಿಕಾರಿಯೊಬ್ಬರು ಅರ್ಜುನ್‍ಗೆ ಮುಂದೆ ಓದುವ ಆಸೆಯಿದ್ದು, ಆತ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್ ಯೋಜನೆಯ ಮೂಲಕ ಅಗ್ನಿವೀರರ ನೇಮಕಾತಿಗೆ ಚಾಲನೆ

ಪರೀಕ್ಷೆ ಬರೆದಿದ್ದ 200ಕ್ಕೂ ಹೆಚ್ಚು ಕೈದಿಗಳು

ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿ 200ಕ್ಕೂ ಹೆಚ್ಚು ಕೈದಿಗಳು ಉತ್ತರಪ್ರದೇಶ ಬೋರ್ಡ್‌ನ ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆ ಬರೆದಿದ್ದರು. ಫಲಿತಾಂಶ ಬಂದಾಗ ಉತ್ತರ ಪ್ರದೇಶದ ಜೈಲು ಕೈದಿಗಳು ಈ ವರ್ಷ ಪ್ರೌಢಶಾಲೆಯಲ್ಲಿಶೇ. 90ರಷ್ಟು ಮತ್ತು ಮಧ್ಯಂತರ ಬೋರ್ಡ್ ಪರೀಕ್ಷೆಗಳಲ್ಲಿ ಶೇ.70ರಷ್ಟು ಯಶಸ್ಸನ್ನು ಸಾಧಿಸಿದ್ದಾರೆ.

14 ಜಿಲ್ಲೆಗಳ ಕೈದಿಗಳು ಪರೀಕ್ಷೆಗೆ ಹಾಜರಾಗಿದ್ದರು

2022ರಲ್ಲಿ 14 ಜಿಲ್ಲೆಗಳ ಕೈದಿಗಳು ಪರೀಕ್ಷೆ ಬರೆದಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 12ನೇ ತರಗತಿ ಪರೀಕ್ಷೆಗೆ ಹಾಜರಾದ 99 ಕೈದಿಗಳಲ್ಲಿ 67 ಮಂದಿ ತೇರ್ಗಡೆಯಾಗಿದ್ದರೆ, ಪ್ರೌಢಶಾಲಾ ಪರೀಕ್ಷೆಗೆ ಹಾಜರಾದ 119 ಕೈದಿಗಳಲ್ಲಿ 104 ಮಂದಿ ತೇರ್ಗಡೆಯಾಗಿದ್ದಾರೆ. ಕಾರಾಗೃಹ ಮಹಾನಿರ್ದೇಶಕ ಆನಂದಕುಮಾರ್ ಮಾತನಾಡಿ, ರಾಜ್ಯದ ಜೈಲುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವು ಬಹುತೇಕ ಎಲ್ಲಾ ಜೈಲುಗಳಲ್ಲಿ ಗ್ರಂಥಾಲಯಗಳು ಮತ್ತು ಅಧ್ಯಯನ ಸೌಲಭ್ಯಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಸಹಾಯ ಮಾಡುವ ಜೈಲು ಸಿಬ್ಬಂದಿ

ಖೈದಿಗಳಿಗೆ ಅಧ್ಯಯನದಲ್ಲಿ ಸಹಾಯ ಬೇಕಾದರೆ ಅವರ ಆಸೆ ಪೂರೈಸಲು ಜೈಲು ಸಿಬ್ಬಂದಿ ಸಂಪೂರ್ಣ ಸಹಾಯ ನೀಡುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಖೈದಿಗಳಿಗಿರುವ ಹವ್ಯಾಸ ಮತ್ತು ಆಸೆ ಪೂರೈಸಲು ನಾವು ಸಂಪೂರ್ಣ ಪೋತ್ಸಾಹಿಸುತ್ತೇವೆ ಮತ್ತು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನು ನಾವು ಮಾಡುತ್ತೇವೆಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News