ಬೆಂಗಳೂರು: ಏರೋ ಇಂಡಿಯಾ ಶೋ ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರ ಆಗಿರುವ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಿಲ್ಲವಾದರೂ, ಲಖನೌದ ಜಿಲ್ಲಾಡಳಿತ ನಡೆಸಿರುವ ಪೂರ್ವಭಾವಿ ಸಿದ್ಧತೆ ಗಮನಿಸಿದರೆ ಈ ಬಾರಿ 'ಏರೊ ಇಂಡಿಯಾ ಶೋ' ಬೆಂಗಳೂರಿನ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಈ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
1996 ರಿಂದ ನಿರಂತರವಾಗಿ ಏರ್ ಶೋ ಆಯೋಜಿಸಿ ಪ್ರಸಿದ್ದಿ ಪಡೆದಿದ್ದ ರಾಜ್ಯದ ಪ್ರತಿಷ್ಠಿತ ಏರ್ ಶೋ ಈ ಬಾರಿ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಏರ್ ಶೋ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳಿವು ಸಿಕ್ಕಿರುವುದರಿಂದಲೇ ಲಖನೌದ ಭಕ್ಷಿ ತಲಾಬ್ ವಾಯುನೆಲೆಯಲ್ಲಿ ಪ್ರದರ್ಶನಕ್ಕೆ ಸಕಲ ತಯಾರಿ ಆರಂಭವಾಗಿದೆ ಎನ್ನಲಾಗುತ್ತಿದೆ. ಲಖನೌ ಜಿಲ್ಲಾಡಳಿತದಿಂದ ಈಗಾಗಲೇ ಜಮೀನು, ನೀರು, ವಿದ್ಯುತ್ ಮತ್ತು ಸಾರಿಗೆ ವ್ಯವಸ್ಥೆಗಳ ತಯಾರಿ ಆರಂಭವಾಗಿದ್ದು, ಏರ್ ಶೋಗೆ ಬರುವ ಗಣ್ಯರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಸಂಬಂಧಿಸಿದಂತೆ ಇತ್ತೀಚಿಗೆ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು. ಇದೇ ವೇಳೆ ಪ್ರತಿಷ್ಠಿತ ಏರೊ ಇಂಡಿಯಾ ಪ್ರದರ್ಶನವನ್ನು ಲಖನೌದಲ್ಲಿ ಆಯೋಜಿಸಬೇಕೆಂದು ಕೋರಿ ಉತ್ತರ ಪ್ರದೇಶ ಸರ್ಕಾರದಿಂದ ರಕ್ಷ ಣಾ ಸಚಿವಾಲಯಕ್ಕೆ ಅಧಿಕೃತ ಮನವಿಯನ್ನೂ ಸಲ್ಲಿಸಲಾಗಿದೆ. ನಂತರ ಮುಖ್ಯಮಂತ್ರಿ ಆದಿತ್ಯನಾಥ್ ಅವರೇ ಟ್ವೀಟ್ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ.
आदरणीय रक्षा मंत्री जी से अनुरोध है कि नवंबर में देश का सबसे प्रतिष्ठित एरो इंडिया शो का आयोजन उत्तर प्रदेश में करें। pic.twitter.com/4UUSwVQVXw
— Yogi Adityanath (@myogiadityanath) August 11, 2018
'ರಾಜಧಾನಿ ಲಖನೌದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಬಕ್ಷಿ ತಾಲಾಬ್ ವಾಯು ನೆಲೆಯಲ್ಲಿ 'ಶೋ' ನಡೆಸಲು ಬೇಕಿರುವ ಎಲ್ಲ ಸೌಲಭ್ಯಗಳಿವೆ. ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ವಾಯುನೆಲೆ ಉತ್ತರ ಪ್ರದೇಶದ ಎರಡನೇಯ ದೊಡ್ಡ ವಾಯು ನೆಲೆಯಾಗಿದೆ ಎಂದು ಯೋಗಿ ರಕ್ಷಣಾ ಸಚಿವರಿಗೆ ವಿವರಿಸಿದ್ದಾರೆ.