ನಿಲ್ದಾಣದಲ್ಲಿಯೇ ರೈಲ್ವೆ ಪೊಲೀಸ್ ಅಧಿಕಾರಿಗೆ ಯುವಕರಿಂದ ಹಲ್ಲೆ, ವೀಡಿಯೋ ಆಯ್ತು ವೈರಲ್!

ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯನ್ನು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಇಬ್ಬರು ಯುವಕರು ಥಳಿಸಿದ್ದಾರೆ.

Updated: Jun 19, 2019 , 10:43 AM IST
ನಿಲ್ದಾಣದಲ್ಲಿಯೇ ರೈಲ್ವೆ ಪೊಲೀಸ್ ಅಧಿಕಾರಿಗೆ ಯುವಕರಿಂದ ಹಲ್ಲೆ, ವೀಡಿಯೋ ಆಯ್ತು ವೈರಲ್!

ಡಿಯೋರಿಯಾ: ಸರ್ಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯನ್ನು ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಇಬ್ಬರು ಯುವಕರು ಥಳಿಸಿದ್ದಾರೆ ಎಂದು ಬುಧವಾರ ವರದಿಯಾಗಿದೆ.

ಡಿಯೋರಿಯಾ ರೈಲ್ವೆ ನಿಲ್ದಾಣದ ಟಿಕೆಟ್ ಬುಕಿಂಗ್ ಹಾಲ್ ಬಳಿ ಕರ್ತವ್ಯದಲ್ಲಿದ್ದಾಗ, ಎರಡು-ಮೂರು ಮಂದಿ ಸರತಿ ಸಾಲಿನಲ್ಲಿ ನಿಲ್ಲದೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಜಿಆರ್‌ಪಿ ಹೆಡ್ ಕಾನ್‌ಸ್ಟೆಬಲ್(ಹೆಸರನ್ನು ಬಹಿರಂಗಪಡಿಸಲಾಗಿಲ್ಲ) ಅವರನ್ನು ಕ್ಯೂನಲ್ಲಿ ನಿಲ್ಲುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಯುವಕರು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೆ ಹಲ್ಲೆ ನಡೆಸಿದ್ದಾರೆ.

ವಿಪರ್ಯಾಸವೆಂದರೆ, ಈ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿ ಇದ್ದರೂ ಸಹ ಯಾರೂ ಪೊಲೀಸ್ ಅಧಿಕಾರಿಯ ಸಹಾಯಕ್ಕೆ ಬರದೆ, ಎಲ್ಲಾ ಮೂಕ ಪ್ರೇಕ್ಷಕರಾಗಿ ಹೊಡೆದಾಟವನ್ನು ನೋಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಇತರ ರೈಲ್ವೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಜಿಆರ್‌ಪಿ ಇನ್ಸ್‌ಪೆಕ್ಟರ್ ರವೀಂದರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.