VIDEO: ದ್ವಿತೀಯ ಪರೀಕ್ಷಾರ್ಥ ಸಂಚಾರದಲ್ಲಿ ಇತಿಹಾಸ ಸೃಷ್ಟಿಸಿದ T-18 ಟ್ರೈನ್

ತನ್ನ ಮೊದಲ ಪರೀಕ್ಷಾರ್ಥ ಸಂಚಾರದಲ್ಲಿ 160 ಕಿಮೀ ವೇಗದಲ್ಲಿ ಚಲಿಸಿದ್ದ T-18 ಟ್ರೈನ್.

Last Updated : Dec 3, 2018, 12:53 PM IST
VIDEO: ದ್ವಿತೀಯ ಪರೀಕ್ಷಾರ್ಥ ಸಂಚಾರದಲ್ಲಿ ಇತಿಹಾಸ ಸೃಷ್ಟಿಸಿದ T-18 ಟ್ರೈನ್ title=
Pic: ANI

ನವದೆಹಲಿ: ದೇಶದ ಆಧುನಿಕ ಇಂಜಿನ್ ಲೆಸ್ ಟ್ರೈನ್ T-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಭಾನುವಾರ ಹೊಸ ದಾಖಲೆ ನಿರ್ಮಿಸಿದೆ. ತನ್ನ ಮೊದಲ ಪರೀಕ್ಷಾರ್ಥ ಸಂಚಾರದಲ್ಲಿ  160 ಕಿಮೀ ವೇಗದಲ್ಲಿ ಚಲಿಸಿದ್ದ T-18 ಟ್ರೈನ್, ಕೋಟಾ ಮತ್ತು ಸವಾಯಿ ಮಾಧೋಪುರ ನಡುವೆ ನಡೆದ ದ್ವಿತೀಯ ಪರೀಕ್ಷಾರ್ಥ ಸಂಚಾರದಲ್ಲಿ T-18 ಟ್ರೈನ್ 180 ಕಿಮೀ/ಗಂ ಚಲಿಸಿದ್ದು ಇತಿಹಾಸ ಸೃಷ್ಟಿಸಿದೆ. ರೈಲ್ವೆ ಸಚಿವ ಪಿಯೂಶ್ ಗೋಯಲ್ ಈ ವಿಷಯವನ್ನು ವಿಡಿಯೋ ಮೂಲಕ ಟ್ವೀಟ್ ಮಾಡಿದ್ದಾರೆ. ಈ ರೈಲು ಇದೀಗ ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ.

ಸಂಪೂರ್ಣ ಸ್ವದೇಶದಲ್ಲಿ ತಯಾರಾದ ರೈಲೊಂದು ಈ ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು ಎಂದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜನರಲ್ ಮ್ಯಾನೇಜರ್ ಎಸ್.ಮಣಿ ತಿಳಿಸಿದ್ದಾರೆ.

T-18 ಟ್ರೈನ್ ನ ಪ್ರಮುಖ ಪರೀಕ್ಷೆಗಳು ಈಗಾಗಲೇ ಮುಕ್ತಾಯದ ಹಂತ ತಲುಪಿದ್ದು, ಕೆಲವು ಸಣ್ಣ-ಪುಟ್ಟ ಕೆಲಸವಷ್ಟೇ ಉಳಿದುಕೊಂಡಿದೆ ಎನ್ನಲಾಗಿದೆ. 

ಈ ರೈಲಿಗೆ T-18 ಎಂದು ಹೆಸರಿಡಲು ಕಾರಣ?
ಭಾರತೀಯ ರೈಲ್ವೇ 2018 ರಲ್ಲಿ ಜನರ ಸೇವೆಗೆ ಈ ರೈಲನ್ನು ಒದಗಿಸುವ ಗುರಿ ಹೊಂದಿದ್ದ ಕಾರಣ ಇದಕ್ಕೆ T-18 ಎಂದು ಹೆಸರಿಡಲಾಗಿದೆ. ಆಧುನಿಕ ಸೌಕರ್ಯಗಳನ್ನು ಒಳಗೊಂಡ ಎಂಜಿನ್-ರಹಿತ ರೈಲು 18 ಅನ್ನು ಬುಲೆಟ್ ರೈಲು ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಟ್ರೈನ್ 18ನಲ್ಲಿ ಪ್ರತ್ಯೇಕ ಇಂಜಿನ್ ಇರುವುದಿಲ್ಲ. ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಇಂಜಿನ್ ಇರಲಿದೆ. ಈ ಇಂಜಿನ್ ರಹಿತ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಪ್ರತಿ ಎರಡು ಬೋಗಿಗಳ ನಡುವೆ ಮೋಟರೈಸ್ಡ್ ಇಂಜಿನ್ ಅಳವಡಿಸಿರುವುದರಿಂದ ರೈಲು ಅತಿ ವೇಗವಾಗಿ ಚಲಿಸಲಿದೆಯಲ್ಲದೆ, ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಹೊಂದಿದೆ.

ದೀರ್ಘಾವಧಿ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ರೈಲಿನಲ್ಲಿ ಮನೋರಂಜನಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ವೈ ಫೈ ಸೌಲಭ್ಯ ಮತ್ತು ವ್ಯಾಕ್ಯೂಮ್ ಟಾಯ್ಲೆಟ್ ಸೌಲಭ್ಯವೂ ರೈಲಿನಲ್ಲಿದೆ. ಆರಾಮದಾಯಕ ಪ್ರಯಾಣ ಹಾಗೂ ಲಗೇಜ್ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Trending News