ಮುಂಬೈ: ಭಯೋತ್ಪಾದಕರೇನಾದರೂ ಉತ್ತರ ಪ್ರದೇಶಕ್ಕೆ ಕಾಲಿಟ್ಟಿದ್ದರೆ ಅವರನ್ನು ಅಲ್ಲಿಯೇ ಕೊಂದು ಹಾಕುತ್ತಿದ್ದೆವು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮುಂಬೈನಲ್ಲಿ ಆಯೋಜಿಸಿದ್ದ ಉತ್ತರಪ್ರದೇಶದ 31ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲಹಾಬಾದ್' ನ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ರಾಸಾಯನಿಕ ಬೆರೆಸಿ ಹಲವರನ್ನು ಕೊಲ್ಲಲು ಸಂಚು ರೂಪಿಸಿದ್ದ ಭಯೋತ್ಪಾದಕರನ್ನು ಮಹಾರಾಷ್ಟ್ರ ಎಟಿಎಸ್ ಪೊಲೀಸರು ಬಂಧಿಸಿರುವುದಕ್ಕೆ ಅಭಿನಂದಿಸಿದ ಯೋಗಿ ಆದಿತ್ಯನಾಥ್, ಉಗ್ರರೇನಾದರೂ ಉತ್ತ್ರಪರ್ದೇಶಕ್ಕೆ ಬಂದಿದ್ದರೆ ಕೇವಲ ಬಂಧಿಸುತ್ತಿರಲಿಲ್ಲ, ಅಲ್ಲೆಯೇ ಕೊಂದು ಹಾಕುತ್ತಿದ್ದೆವು ಎಂದಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಗುರಿಯಾಗಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, "ಕುಂಭದಲ್ಲಿ ಜನರಿಗೆ ತೊಂದರೆ ಮಾಡುವ ಕೆಟ್ಟ ಉದ್ದೇಶ ಹೊಂದಿದ್ದ ಉಗ್ರರನ್ನು ನೀವು ಬಂಧಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಒಂದು ವೇಳೆ, ಆ ಭಯೋತ್ಪಾದಕರು ಉತ್ತರ ಪ್ರದೇಶಕ್ಕೆ ಬಂದಿದ್ದರೆ, ಅವರನ್ನು ಗಡಿಯಲ್ಲೇ ಕೊಂದು ಹಾಕುತ್ತಿದ್ದೆವು. ಅಂತಹವರನ್ನು ಹೇಗೆ ಮಟ್ಟ ಹಾಕಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ" ಎಂದು ಯೋಗಿ ಹೇಳಿದ್ದಾರೆ.