ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ: ಉದ್ಧವ್ ಠಾಕ್ರೆ

ದೇಶದ್ರೋಹಿಗಳನ್ನು ಗಲ್ಲಿಗೇರಿಸದೆ, ಅವರನ್ನು ಬೆಂಬಲಿಸಿ ಆ ಕಾನೂನನ್ನೇ ರದ್ದುಪಡಿಸುತ್ತೇವೆ ಎಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು ಎಂದು ಠಾಕ್ರೆ ಕರೆ ನೀಡಿದ್ದಾರೆ.

Last Updated : Apr 8, 2019, 12:17 PM IST
ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ: ಉದ್ಧವ್ ಠಾಕ್ರೆ title=

ನಾಗ್ಪುರ್: ದೇಶದ್ರೋಹ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ 'ದ್ರೋಹಿ'ಗಳಿಗೆ ಬೆಂಬಲಿಸುವ ಮೂಲಕ ಅಧಿಕಾರಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಶಿವಸೇನೆಯ ರಾಮ್ಟೆಕ್ ಕ್ಷೇತ್ರದ ಅಭ್ಯರ್ಥಿ ಕರ್ಪಲ್ ತುಮೇನ್ ಪರವಾಗಿ ಕಲ್ಮೇಶ್ವರದಲ್ಲಿ ಭಾನುವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಬಿಜೆಪಿ, ಶಿವಸೇನೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಪಕ್ಷಗಳು ಏಕರೂಪ ಸಿದ್ಧಾಂತದ ಮೇಲೆ ಒಟ್ಟಿಗೆ ಸೇರಿವೆ ಎಂದು ಹೇಳಿದರು.

"ಆದರೆ, ಮಹಾ ಅಘಾದಿ ಅವರು ಯಾರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂದು ಕೇಳಲು ನಾನು ಬಯಸುತ್ತೇನೆ. ಆ ಜನರು ಯಾರು? ನಮ್ಮ ಕನಸು ದೇಶಕ್ಕಾಗಿ, ಆದರೆ ನಿಮ್ಮ ಕನಸು ಏತಕ್ಕಾಗಿ? ಕೇವಲ ಅಧಿಕಾರಕ್ಕಾಗಿ. ಮುಂದಿನ ಬಾರಿಯೂ ನರೇಂದ್ರ ಮೋದಿಯೇ ನಮ್ಮ ಪ್ರಧಾನಿ ಆಗಲಿದ್ದಾರೆ. ವಿರೋಧಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಕೂಡಲೇ ಘೋಷಿಸಬೇಕು" ಎಂದು ಠಾಕ್ರೆ ಆಗ್ರಹಿಸಿದರು.

ಕಾಂಗ್ರೆಸ್ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ರಾಜದ್ರೋಹದ ಕಾನೂನನ್ನು ರದ್ದುಪಡಿಸುವುದಾಗಿ ಭರವಸೆಯಲ್ಲಿ ನೀಡಿರುವ ಬಗ್ಗೆಯೂ ಕಿಡಿಕಾರಿದ ಠಾಕ್ರೆ, "ಈ ಭರವಸೆಯನ್ನು ನೀವು ಸ್ವೀಕರಿಸುತ್ತೀರಾ? ನೀವು ಇದನ್ನು ಒಪ್ಪಿಕೊಳ್ಳುತ್ತೀರಾ? ... ದೇಶದ್ರೋಹ ಮಾಡಿದವರು ಯಾರೇ ಆಗಲಿ, ಅವರನ್ನು ಗಲ್ಲಿಗೇರಿಸಬೇಕು. ಆದರೆ ದೇಶದ್ರೋಹಿಗಳನ್ನು ಗಲ್ಲಿಗೇರಿಸದೆ, ಅವರನ್ನು ಬೆಂಬಲಿಸಿ ಆ ಕಾನೂನನ್ನೇ ರದ್ದುಪಡಿಸುತ್ತೇವೆ ಎಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು" ಎಂದು ಠಾಕ್ರೆ ಕರೆ ನೀಡಿದರು.

Trending News