ನವದೆಹಲಿ: ನಟಿ ಜಯಪ್ರದಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ. ಈಗಾಗಲೇ ಅಜಂ ಖಾನ್ ವಿರುದ್ಧ ಮ್ಯಾಜಿಸ್ಟ್ರೇಟ್ ದೂರು ಸಲ್ಲಿಸಿದ್ದು, ರಾಂಪುರದ ಶಾಹಾಬಾದ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿದೆ.
ಅಜಂ ಖಾನ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯಪ್ರದಾ, ಅಜಂ ಖಾನ್ ಬಗ್ಗೆ ಇದುವರೆಗೂ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಅಖಿಲೇಶ್ ಯಾದವ್ ಅಥವಾ ಮುಲಾಯಂ ಸಿಂಗ್ ಯಾದವ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. "ಈಗ ನನ್ನ ತಾಳ್ಮೆಯ ಮಿತಿ ಕಳೆದಿದೆ. ಅಜಂ ಖಾನ್ ಈಗ ಕೇಳು, ನಾನು ನಿನ್ನನ್ನು ಸೋಲಿಸಿಯೇ ತೀರುತ್ತೇನೆ. ಜಯಪ್ರದಾ ಯಾರು ಎಂಬುದನ್ನು ತೋರಿಸುತ್ತೇನೆ" ಎಂದು ಸವಾಲು ಹಾಕಿದರು.
ಮುಂದುವರೆದು ಮಾತನಾಡಿದ ಜಯಪ್ರದಾ, ಅಜಂ ಖಾನ್ ಅಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೇ ನೀಡಬಾರದು. ಇಂಥವರು ಗೆದ್ದರೆ ಪ್ರಜಾತಂತ್ರ ವ್ಯವಸ್ಥೆಗೇ ಮಾರಕ. ಸಮಾಜದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನಮಾನ ಇಲ್ಲದಾಗುತ್ತದೆ. ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾತನಾಡಿ, ಮಹಿಳೆಯರ ಬಗ್ಗೆ ಅಜಂ ಖಾನ್ ಈ ರೀತಿ ಕೆಟ್ಟದಾಗಿ ಮಾತನಾಡುವುದು ಸಾಮಾನ್ಯವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ರಾಜಕಾರಣಿ ವಿರುದ್ಧ ಅವರು ಎರಡನೇ ಬಾರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಅಜಂ ಖಾನ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೆ, ನೋಟಿಸ್ ಸಹ ಜಾರಿ ಮಾಡಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಸಹ ಪತರ ಬರೆದಿರುವುದಾಗಿ ರೇಖಾ ಶರ್ಮಾ ತಿಳಿಸಿದ್ದಾರೆ.