ಬಿಜೆಪಿಯದು ಭ್ರಷ್ಟಾಚಾರದ ಭಯೋತ್ಪಾದನೆ- ಪ್ರಿಯಾಂಕಾ ಗಾಂಧಿ ವಾಗ್ದಾಳಿ 

ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಅವರಿಗೆ ಮಾರಿದ್ದಾರೆ. ಈ ದೇಶದ ಎಲ್ಲಾ ಸಂಪತ್ತನ್ನು ಯಾಕೆ ಮಾರಿದ್ದಾರೆ? ಇದು ಭಯೋತ್ಪಾದನೆಯಲ್ಲದಿದ್ದರೆ ಮತ್ಯಾವುದು ಭಯೋತ್ಪಾದನೆ? ಇದು ಬಿಜೆಪಿಯ ಭ್ರಷ್ಟಾಚಾರದ ಭಯೋತ್ಪಾದನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Last Updated : May 7, 2023, 06:07 PM IST
  • ಸತ್ಯ ನಮ್ಮ ಹೃದಯದಲ್ಲಿರಲಿ, ಸತ್ಯದ ಭಾವನೆಯಲ್ಲಿ ನಾವು ಸೇವೆ ಮಾಡಬೇಕು.
  • ಸತ್ಯ ಹಾಗೂ ಸೇವೆ ಬಹಳ ದೊಡ್ಡ ವಿಚಾರ. ಇದು ಸಣ್ಣ ಪುಟ್ಟ ವಿಚಾರದಲ್ಲೂ ಅಡಗಿರುತ್ತದೆ.
  • ತಾಯಿ ಮಕ್ಕಳನ್ನು ಆರೈಕೆ ಮಾಡುವಾಗ, ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಇದು ವ್ಯಕ್ತವಾಗುತ್ತದೆ.
ಬಿಜೆಪಿಯದು ಭ್ರಷ್ಟಾಚಾರದ ಭಯೋತ್ಪಾದನೆ- ಪ್ರಿಯಾಂಕಾ ಗಾಂಧಿ ವಾಗ್ದಾಳಿ  title=

ಮೂಡಬಿದರೆ: ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಅವರಿಗೆ ಮಾರಿದ್ದಾರೆ. ಈ ದೇಶದ ಎಲ್ಲಾ ಸಂಪತ್ತನ್ನು ಯಾಕೆ ಮಾರಿದ್ದಾರೆ? ಇದು ಭಯೋತ್ಪಾದನೆಯಲ್ಲದಿದ್ದರೆ ಮತ್ಯಾವುದು ಭಯೋತ್ಪಾದನೆ? ಇದು ಬಿಜೆಪಿಯ ಭ್ರಷ್ಟಾಚಾರದ ಭಯೋತ್ಪಾದನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅವರು ದಕ್ಷಿಣ ಕನ್ನಡದ ಮೂಡುಬಿದರೆಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಿಷ್ಟು..

ಇದು ದೇವರ ಭೂಮಿ, ಧಾರ್ಮಿಕ ನಗರ, ಜೈನ ಧರ್ಮದ ಪವಿತ್ರ ಧರ್ಮ, ಕಟೀಲ್ ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮಶ್ವರಿ ಅವರ ಆಶೀರ್ವಾದ ಈ ಭೂಮಿಯ ಮೇಲಿದೆ. ಇಲ್ಲಿ ಬಹಳ ಪುರಾತನ  ಭೂಮಿಯಿಂದ ದೇಶಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ಎಲ್ಲರ ಜತೆಗೂಡಿ, ಎಲ್ಲರನ್ನೂ ಜತೆಗೂಡಿಸಿಕೊಂಡು ಎಳ್ಲಾ ಧರ್ಮಗಳನ್ನು ಗೌರವಿಸುತ್ತಾ ಮುಂದೆ ತಗೆದುಕೊಂಡು ಹೋಗುವ ಭೂಮಿ ಇದಾಗಿದೆ. 

ಇದನ್ನೂ ಓದಿ: ಖರ್ಗೆ ಕುಟುಂಬವನ್ನು ಏಕೆ ಸಾಯಿಸಬೇಕು ಎನ್ನುವುದಕ್ಕೆ ಬಿಜೆಪಿಗರು ಉತ್ತರಿಸಬೇಕು: ಪ್ರಿಯಾಂಕ್ ಖರ್ಗೆ

ಸತ್ಯ ನಮ್ಮ ಹೃದಯದಲ್ಲಿರಲಿ, ಸತ್ಯದ ಭಾವನೆಯಲ್ಲಿ ನಾವು ಸೇವೆ ಮಾಡಬೇಕು. ಸತ್ಯ ಹಾಗೂ ಸೇವೆ ಬಹಳ ದೊಡ್ಡ ವಿಚಾರ. ಇದು ಸಣ್ಣ ಪುಟ್ಟ ವಿಚಾರದಲ್ಲೂ ಅಡಗಿರುತ್ತದೆ. ತಾಯಿ ಮಕ್ಕಳನ್ನು ಆರೈಕೆ ಮಾಡುವಾಗ, ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಇದು ವ್ಯಕ್ತವಾಗುತ್ತದೆ. ಇದೂ ಕೂಡ ಒಂದರ್ಥದಲ್ಲಿ ಸೇವೆಯಾಗಿರುತ್ತದೆ. ಈ ಸೇವೆಯನ್ನು ಪರಿಶ್ರಮ ಹಾಗೂ ಹೆಮ್ಮೆಯಿಂದ ಮಾಡಲಾಗುತ್ತದೆ. ಇದು ನಿಮ್ಮ ಸಂಸ್ಕೃತಿ ಹಾಗೂ ಸಭ್ಯತೆ ಕಲಿಸಿರುತ್ತದೆ. 

ನೀವು ಬಹಳ ಪರಿಶ್ರಮ ಹಾಗೂ ಹೆಮ್ಮೆಯಿಂದ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಕೆಲಸಗಳನ್ನು ನೀವು ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾಡಿದರೆ ಅದು ದೇಶ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ. ದೇಶ ನಿರ್ಮಾಣವಾದರೆ ಅದರ ನಿರ್ಮಾತೃ ನೀವೇ ಆಗಿರುತ್ತೀರಿ. ಇದು ಸರ್ಕಾರದ ಜವಾಬ್ದಾರಿಯೂ ಆಗಿರುತ್ತದೆ. ಹೀಗಾಗಿ ನಾವು ನೀವು ಸರ್ಕಾರದ ಮೇಲೆ ನಿಷ್ಠೆ ಹಾಗೂ ಪ್ರಾಮಾಣಿಕ ಕೆಲವನ್ನು ನಿರೀಕ್ಷೆ ಮಾಡುತ್ತೇವೆ. ಅದೇ ಆಧಾರದ ಮೇಲೆ ನಾವು ಚುನಾವಣೆ ಸಮಯದಲ್ಲಿ ಸರ್ಕಾರವನ್ನು ಚುನಾಯಿಸುತ್ತೇವೆ. 

ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ನಿಮ್ಮ ಮುಂದೆ ಮಾತನಾಡುತ್ತಾರೆ. ಈ ಸಮಯದಲ್ಲಿ ನಾಯಕರುಗಳು ನಿಮ್ಮ ಜೀವನ ಹಾಗೂ ಸಮಸ್ಯೆಗಳ ಬಗ್ಗೆ ಅದಕ್ಕೆ ಪಕ್ಷಗಳು ರೂಪಿಸಿರುವ ಪರಿಹಾರಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇಟ್ಟುಕೊಂಡಿರುತ್ತೀರಿ. ಎರಡು ದಿನಗಳ ಹಿಂದೆ ಮೋದಿ ಅವರು ಇಲ್ಲಿಗೆ ಆಗಮಿಸಿ ಭಾಷಣ ಮಾಡಿದರು. ಅವರ ಭಾಷಣದಲ್ಲಿ ಅವರು ಭಯೋತ್ಪಾದಕ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ದು ಈ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಪ್ರಧಾನಮಂತ್ರಿಗಳು ತಪ್ಪು ಭಾವಿಸಿ ಇದರ ಬಗ್ಗೆ ಮಾತನಾಡಿರಬಹುದು ಎಂದು ಭಾವಿಸಿದೆ. 

ಮೋದಿ ಅವರು ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ, ಬೆಲೆ ಏರಿಕೆ ಬಗ್ಗೆ ಮಾತನಾಡಲಿಲ್ಲ. ಕಾರಣ ಇವರ ಆಡಳಿತದಲ್ಲೇ ಈ ಸಮಸ್ಯೆಗಳು ಹೆಚ್ಚಾಗಿದ್ದು, ಇವುಗಳಿಗೆ ಪರಿಹಾರ ನೀಡಲು ಅವರ ಸರ್ಕಾರ ವಿಫಲವಾಗಿದೆ. ಅವರ ಆಡಳಿತದಲ್ಲಿ ಅಡುಗೆ ಅನಿಲ, ಬೇಳೆ ಕಾಳುಗಳು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಖರೀದಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಅವರು ಭಯೋತ್ಪಾದನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ.

ಈ ರಾಜ್ಯದಲ್ಲಿ ಪ್ರತಿನಿತ್ಯ 5 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಲ್ಲಿ ಜನರಿಗೆ ಭಯವಿರುವುದು ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ. 6400 ರೈತರು ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, 500ಕ್ಕೂ ಹೆಚ್ಚು ಜನ ಬಡತನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗದಿಂದ 1600 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿಗಳೇ ಕರ್ನಾಟಕದಲ್ಲಿ ಭಯೋತ್ಪಾದನೆ ಆಗಿದ್ದರೆ ಅದು ನಿಮ್ಮದೇ ಸರ್ಕಾರದ 40% ಕಮಿಷನ್ ನಿಂದಾಗಿ. ಜನರನ್ನು ಲೂಟಿ ಮಾಡುತ್ತಿರುವ ನಿಮ್ಮದೇ ನಾಯಕರಿದ ಜನ ಭಯಗೊಂಡಿದ್ದಾರೆ. ರಾಜ್ಯದಲ್ಲಿ ಆತಂಕವಿದ್ದರೆ ಈ ವಿಚಾರಗಳಿಂದಾಗಿ ಆತಂಕವಿದೆ. ಪ್ರಧಾನಮಂತ್ರಿಗಳೇ ರಾಜ್ಯ ಸರ್ಕಾರದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ.ಅವುಗಳನ್ನು ತುಂಬಲು ನಿಮ್ಮಿಂದ ಸಾಧ್ಯವಾಗದೇ, ರಾಜ್ಯದ ಲಕ್ಷಾಂತರ ಯುವಕರು ಆತಂಕಕ್ಕೆ ಒಳಗಾಗಿದ್ದಾರೆ.

ಈ ರಾಜ್ಯದಲ್ಲಿ ಭ್ರಷ್ಟಾಚಾರ ಹೇಗಿದೆ ಎಂದರೆ ರೈತನ ಬಳಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲ ಎಂದು ಆತ ತನ್ನ ಎತ್ತುಗಳನ್ನು ಲಂಚವಾಗಿ ನೀಡುವ ಪರಿಸ್ಥಿತಿ ಬಂದಿದೆ. ಇದು ನಿಜವಾದ ಭಯೋತ್ಪಾದನೆ.ಬಿಜೆಪಿ ಶಾಸಕನ ಮನೆಯಲ್ಲಿ ಭ್ರಷ್ಟಾಚಾರದ ಹಣ ಸಿಕ್ಕರೂ ಯಾವುದೇ ತನಿಖೆ ಆಗುವುದಿಲ್ಲ. ಬದಲಿಗೆ ಆ ಶಾಸಕ ಮೆರವಣಿಗೆ ಮಾಡುತ್ತಾನೆ. ಈ ಮೆರವಣಿಗೆ ಭ್ರಷ್ಟಾಚಾರ ಎಂಬ ಭಯೋತ್ಪಾದನೆಯ ಮೆರವಣಿಗೆಯಾಗಿದೆ.

ಈ ಭಾಗದ ಜನ ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಕಟ್ಟಿದ್ದರು. ಆದರೆ ಈ ಸರ್ಕಾರಗಳು ಇವುಗಳನ್ನು ವಿಲೀನ ಮಾಡಿ ನಾಶ ಮಾಡಿವೆ.ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಅವರಿಗೆ ಮಾರಿದ್ದಾರೆ. ಈ ದೇಶದ ಎಲ್ಲಾ ಸಂಪತ್ತನ್ನು ಯಾಕೆ ಮಾರಿದ್ದಾರೆ? ಇದು ಭಯೋತ್ಪಾದನೆಯಲ್ಲದಿದ್ದರೆ ಮತ್ಯಾವುದು ಭಯೋತ್ಪಾದನೆ? ಇದು ಬಿಜೆಪಿಯ ಭ್ರಷ್ಟಾಚಾರದ ಭಯೋತ್ಪಾದನೆ.

ರಾಜಕಾರಣಿಗಳಿಗೆ ಅಧಿಕಾರ, ಹಾಗೂ ಹಣದ ಲಾಲಸೆ ತಲೆಗೇರಿದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ.ಇದಕ್ಕಾಗಿ ಅವರು ಜನರ ಸಮಸ್ಯೆ ಬಗ್ಗೆ ಮಾತನಾಡದೇ ಕೇವಲ ಧರ್ಮ,ಜಾತಿಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ.ಭಾವನೆಗಳ ಕೇರಳಿಸಿ,ತಾವು ಚುನಾವಣೆ ಗೆದ್ದರೆ ಕೆಲಸ ಮಾಡುವ ಯಾವುದೇ ಅಗತ್ಯವಿಲ್ಲ ಎಂಬ ಮನಸ್ಥಿತಿಗೆ ತಲುಪುತ್ತಾರೆ. ಚುನಾವಣೆ ನಮ್ಮ ಭವಿಷ್ಯ ಬದಲಿಸುವ ಸರ್ಕಾರ ಆರಿಸುವ ಒಂದು ಅವಕಾಶವಾಗಿರುತ್ತದೆ. ಈ ಅವಕಾಶವನ್ನು ನೀವು ಸದ್ಬಳಕೆ ಮಾಡಿಕೊಳ್ಳಿ.

ನೀವು ನಿಮ್ಮ ಪರಿಶ್ರಮದಿಂದ ನಂದಿನಿ ಕಟ್ಟಿ ಬೆಳೆಸಿದ್ದು,ಇದು ನಿಮ್ಮ ಹೆಮ್ಮೆಯ ಪ್ರತೀಕವಾಗಿದೆ.ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗಿ, ಕ್ಷೀರ ಭಾಗ್ಯ ಯೋಜನೆ ಜಾರಿ ಮಾಡಲಾಗಿತ್ತು. ರೈತರಿಗೆ ಕಾಂಗ್ರೆಸ್ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಈಗ ನಂದಿನಿಯಲ್ಲಿ ಕೇವಲ 71 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗುತ್ತಿದ್ದು, ಹೀಗಾಗಿ ಅಮೂಲ್ ಹಾಲು ರಾಜ್ಯದ ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎನ್ನುತ್ತಿದ್ದಾರೆ. ಇದು ನಂದಿನಿ ಸಂಸ್ಥೆಯನ್ನು ನಾಶ ಮಾಡಿ ಗುಜರಾತಿನ ಅಮೂಲ್ ಜತೆ ವಿಲೀನ ಮಾಡುವ ಹುನ್ನಾರ. ಇದು ಸಾಧ್ಯವಾದರೆ, ರಾಜ್ಯದ 1 ಕೋಟಿ ಜನರ ದಿನನಿದ್ಯದ ಆದಾಯಕ್ಕೆ ಪೆಟ್ಟು ಬೀಳುತ್ತದೆ.ಈ ಜನರ ಬಗ್ಗೆ ಬಿಜೆಪಿ ಆಲೋಚಿಸುತ್ತಿಲ್ಲ. ಅವರು ಕೇವಲ ಎಲ್ಲಿ ಎಷ್ಟು ಲೂಟಿ ಮಾಡಬೇಕು ಎಂದು ಆಲೋಚಿಸುತ್ತಿದ್ದಾರೆ. 

ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಈಗಲೂ ನಾವು 100% ಅಭಿವೃದ್ಧಿಯ ಬದ್ಧತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ. ರಾಜ್ಯದ ಜನರ ಕಷ್ಟಕ್ಕೆ ಯಾವುದಾದರೂ ಯೋಜನೆ ಮೂಲಕ ಸಹಾಯ ಮಾಡಲಾಗುತ್ತಿತ್ತು. ಆದರೆ ಇಂದು ರೈತರಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಹೋರಾಟ್ ಮಾಡಿದರೂ ಯಾರೂ ಕೇಳುತ್ತಿಲ್ಲ. ಜಗದೀಶ್ ಶೆಟ್ಟರ್, ಸವದಿಯಂತಹ ಹಿರಿಯರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ.

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬದಲು, ಇದ್ದ ಉದ್ಯೋಗಗಳನ್ನು ನಾಶ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಜನರ ಸಂಕಷ್ಟವನ್ನು ಅರಿತು, ಈ ಸರ್ಕಾರ ಮಾಡಿರುವ ಲೂಟಿ ಹಣವನ್ನು ಮತ್ತೆ ಜನರಿಗೆ ಹಿಂತಿರುಗಿಸಲು ಮುಂದಾಗಿದೆ. ನಿಮಗೆ ಶೇ.100ರಷ್ಟು ಪ್ರಗತಿ ನೀಡುವ ಗ್ಯಾರಂಟಿ ನೀಡುತ್ತೇವೆ. ಹೆಚ್ಚು ಉದ್ಯೋಗ ಸೃಷ್ಟಿಸುತ್ತೇವೆ. ಬೀದರ್ ನಿಂದ ಚಾಮರಾಜನಗರದ ವರೆಗೆ ಉದ್ಯೋಗ ಸೃಷ್ಟಿಗೆ ಕೈಗಾರಿಕ ಕಾರಿಡಾರ್ ಮಾಡುತ್ತೇವೆ. ಈ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದ್ದು, ಆ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಸರ್ಕಾರದ ಇಲಾಖೆಗಳಲ್ಲಿರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 15 ಸಾವಿರ ಮಾಡಲಾಗುವುದು, ಅಂಗನವಾಡಿ ಸಹಾಯಕಿಯರಿಗೆ 10 ಸಾವಿರ ಗೌರವಧನ ನೀಡಲಾಗುವುದು. ಆಶಾಕಾರ್ಯಕರ್ತರಿಗೆ 8 ಸಾವಿರ ಗೌರವ ಧನ, ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ 3 ಲಕ್ಷ ಸಹಾಯಕಿಯರಿಗೆ 2 ಲಕ್ಷ ನೀಡಲಾಗುವುದು. ಈ ಎಲ್ಲಾ ಯೋಜನೆ ಸೇರಿಸಿದರೆ, ಪ್ರತಿ ತಿಂಗಳು ಪ್ರತಿ ತಿಂಗಳು 8500 ರೂ ನೀಡಿದಂತಾಗುತ್ತದೆ. ಸಣ್ಣ ವ್ಯಾಪಾರಿ ವರ್ತಕರಿಗೆ ಪ್ರತ್ಯೇಕ ನಿಧಿ ಸ್ಥಾಪಿಸಲಾಗುವುದು. 

ಇದನ್ನೂ ಓದಿ: Karnataka Assembly Election: ಚುನಾವಣೆಗೆ ಕೌಂಟ್ ಡೌನ್ ಶುರು: ಉದ್ಯಾನನಗರಿಯಲ್ಲಿ ಭರ್ಜರಿ ಪ್ರಚಾರ

ಬೆಂಗಳೂರಿನಂತೆ 2ನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಸಲಾಗುವುದು.ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಹೆಚ್ಚಾಗಲಿದ್ದು, ಇವುಗಳ ತಯಾರಿಕಾ ಘಟಕವನ್ನು ಕರ್ನಾಟಕದಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ನಿಷ್ಠಾವಂತ, ಪ್ರಮಾಣಿಕ ಸರ್ಕಾರ ಜನರಿಗೆ ನರವಾಗಿ ಹೇಗೆ ಈ ರಾಜ್ಯವನ್ನು ಅಭಿವೃದ್ಧಿ ಮಾಡಲಿದೆ ಎಂಬುದನ್ನು ಸಾಬೀತುಪಡಿಸುತ್ತೇವೆ. ಇಂತಹ ಜನಪರ ಸರ್ಕಾರ ಬರಬೇಕು ಎಂದರೆ ಇದರಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಹೀಗಾಗಿ ನೀವು ಮೇ 10ರಂದು ಮತ ಚಲಾವಣೆ ಮಾಡಬೇಕು. ನೀವು ಭ್ರಷ್ಟ ನಾಯಕರನ್ನು ಆಯ್ಕೆ ಮಾಡುತ್ತೀರೋ, ಉತ್ತಮ ನಾಯಕನ ಆರಿಸಿ ತರುತ್ತೀರೋ ನೀವೇ ನಿರ್ಧರಿಸಿ. ಇಂದು ನಿಮಗೆ ಉತ್ತಮ ಸರ್ಕಾರ ಬೇಕಾದರೆ, ನೀವು ನಿಮ್ಮ ಗಮನವನ್ನು ಈ ಚುನಾವಣೆ ಬಗ್ಗೆ ಕೇಂದ್ರೀಕರಿಸಬೇಕು. 

ನಿಮ್ಮ ರಾಜ್ಯದಲ್ಲಿ ಮಾತ್ರವಲ್ಲ ಬೇರೆ ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಚಿತ್ರಣ ಸಿಗುತ್ತಿದೆ. ಇಂದು ಪ್ರಧಾನಿ ಮೋದಿ ಅವರಿಂದ ಅವರ ನಾಯಕರು ಇಲ್ಲಿಗೆ ಬಂದು ನಿಮ್ಮ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಅವರ ಬಗ್ಗೆ ಅವರು ಮಾತನಾಡುತ್ತಾರೆ. ಅವರು ನಿಮ್ಮ ಮುಂದೆ ಬಂಧು ಧರ್ಮ, ಜಾತಿ ಬಗ್ಗೆ ಮಾತನಾಡಿ ನಿಮ್ಮ ಮತ ಸೆಳೆಯಲು ಪ್ರಯತ್ನಿಸುತ್ತಾರೆ. ನಿಮ್ಮ ಮತ ಅವರ ಪಾಲಾದರೆ, ಮತ್ತೆ ಅವರು ಕೆಲಸ ಮಾಡುವುದಿಲ್ಲ. ನಿಮ್ಮನ್ನು ಲೂಟಿ ಮಾಡುತ್ತಾರೆ. ಅವರು ನಿಜವಾಗಿಯೂ ಕೆಲಸ ಮಾಡಿದ್ದರೆ, ಪ್ರಧಾನಿಗಳು ಇಲ್ಲಿಗೆ ಬಂದು ತಮ್ಮ ವಿರುದ್ಧ ಆಗಿರುವ ಟೀಕೆಗಳ ಪಟ್ಟಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಾಧನೆಗಳ ಪಟ್ಟಿ ನೀಡುತ್ತಿದ್ದರು. ಎಷ್ಟು ಶಾಲೆ ತೆರೆದಿದ್ದೇವೆ, ಎಷ್ಟು ಉದ್ಯೋಗ ನೀಡಿದ್ದೇವೆ, ಎಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿದ್ದರು. ಆದರೆ ಇವುಗಳ ಬಗ್ಗೆ ಮಾತನಾಡಲು ಅವರು ಏನೂ ಮಾಡಿಲ್ಲ, ಹೀಗಾಗಿ ಜಾತಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕ ವಿಚಾರ ಮಾತನಾಡಿ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News