ಬೆಂಗಳೂರು: ಬಿಜೆಪಿ ಬೇಕಾದರೆ ಹಾಲಿವುಡ್,ಬಾಲಿವುಡ್ ತಾರೆಯರನ್ನೇ ಕರೆಸಿ ಪ್ರಚಾರ ಮಾಡಲಿ ಅದಕ್ಕೆ ನಮ್ಮ ತಕರಾರಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಿಷ್ಟು...
ಇದನ್ನೂ ಓದಿ- ಕರೆಂಟಿಲ್ಲ, ರಸ್ತೆಯಿಲ್ಲ, ಆಸ್ಪತ್ರೆಯಿಲ್ಲ... ಅದಕ್ಕೇ ನಮ್ಮ ವೋಟು ಇಲ್ಲಾ ಅಂತಿದ್ದಾರೆ ಈ ಗ್ರಾಮಸ್ಥರು!!
ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಕೇಂದ್ರ ನಾಯಕರಾದ ಜೆ.ಪಿ ನಡ್ಡಾ, ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳ ಸಾರ್ವಜನಿಕ ಸಭೆಗಳಲ್ಲಿ ಜನರು ಬಾರದ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕ ಸಭೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಅವರು ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ನಾವು ಕಲಾವಿದರನ್ನು ಗೌರವಿಸುತ್ತೇವೆ. ಆದರೆ ರಾಜಕೀಯ ಎಂಬುದು 3 ಗಂಟೆಗಳ ಕಾಲ ನೋಡಿ ಮನರಂಜನೆ ಪಡೆಯುವ ವಿಚಾರವಲ್ಲ. ರಾಜಕೀಯ, ಆಡಳಿತವು 6.50 ಕೋಟಿ ಕನ್ನಡಿಗರ ಜವಾಬ್ದಾರಿಯಾಗಿದೆ. ಆದರೆ ಬಿಜೆಪಿ ಈ ವಿಚಾರದಲ್ಲಿ ಲೇವಡಿ ಮಾಡುತ್ತಿದೆ. ಸಿನಿಮಾ ತಾರೆಯರನ್ನು ತಾರಾ ಪ್ರಚಾರಕರನ್ನಾಗಿ ಬಳಸುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ, ಬಿಜೆಪಿ ಬೇಕಾದರೆ ಹಾಲಿವುಡ್, ಬಾಲಿವುಡ್ ತಾರೆಯರನ್ನೇ ಕರೆಸಲಿ. ಇವರು ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಸರ್ಕಾರಿ ಕಚೇರಿಗಳು ಹಾಗೂ ಜಾಹೀರಾತುಗಳಲ್ಲಿ ಸಿನಿಮಾ ತಾರೆಯರ ಚಿತ್ರಗಳನ್ನು ಬಳಸುವುದು ಬೇಡ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆವು ಎಂದು ಹೇಳಿದರು.
ಬೊಮ್ಮಾಯಿ ಅವರ ಟೆಂಡರ್ ಗಳಲ್ಲಿ 40% ಕಮಿಷನ್ ಪಡೆಯಲು ಕಾನೂನುಬಾಹೀರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೆಲ್ಲವನ್ನು ನೋಡಿ ಸುಮ್ಮನೆ ಕೂತಿರುವ ಚುನಾವಣಾ ಆಯೋಗದ ಮೇಲೆ ನಂಬಿಕೆ ಕುಗ್ಗಿವೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅನೇಕ ಟೆಂಡರ್ ಗಳನ್ನು ಸಮರ್ಪಕ ಪ್ರಕ್ರಿಯೆ ಮೂಲಕ ಹೊರಡಿಸಿಲ್ಲ. ಟೆಂಡರ್ ಅಂದಾಜು ಮೊತ್ತ, ಕಾಲಾವಧಿ ನಿಗದಿಯಾಗದೇ ಟೆಂಡರ್ ನೀಡಲಾಗಿದೆ. ಇಲಾಖೆವಾರು ಕಾಮಗಾರಿ ವೆಚ್ಚದ ಪರಿಶೀಲನೆ ಇಲ್ಲದೆ ಟೆಂಡರ್ ನೀಡಲಾಗಿದೆ. ಬೊಮ್ಮಾಯಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವ ಏಕಮಾತ್ರ ಉದ್ದೇಶದಿಂದ ಈ ರೀತಿ ಅಕ್ರಮವಾಗಿ ಟೆಂಡರ್ ನೀಡಲಾಗಿದೆ. ಈ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ದೂರಿನಲ್ಲಿ ಕೆಲವು ಟೆಂಡರ್ ಗಳ ಉಲ್ಲೇಖವನ್ನು ಮಾಡಲಾಗಿದೆ.
ಶಿರಾಡಿ ಘಾಟ್ ಟೆಂಡರ್ ಗೆ 1976 ಕೋಟಿ, ದೊಡ್ಡಬಳ್ಳಾಪುರದ ಕಾಮಗಾರಿಕೆ 1682 ಕೋಟಿ, ಆಂಧ್ರ ಪ್ರದೇಶ-ಕರ್ನಾಟಕ ಗಡಿ ಭಾಗದ ರಾಯಚೂರಿನಲ್ಲಿ 1633 ಕೋಟಿ, ಹಾಸನ ನಾಲ್ಕು ಪಥ ರಸ್ತೆಗೆ 1318 ಕೋಟಿ, ವಿವಿಧ ಬೈಪಾಸ್ಗಳ ಅಭಿವೃದ್ಧಿಗೆ 1167 ಕೋಟಿ ಹೀಗೆ ದೊಡ್ಡ ಪಟ್ಟಿಗಳಿವೆ. ಒಟ್ಟು 16,516 ಕೋಟಿ ಮೊತ್ತದ ಟೆಂಡರ್ ಗಳನ್ನು ತರಾತುರಿಯಲ್ಲಿ ನೀಡಲಾಗಿದೆ.
ಈ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಸಂಜೆ ಒಂದು ಆದೇಶ ಹೊರಡಿಸಿದ್ದು, ಆಯೋಗವು ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನು ಈ ಟೆಂಡರ್ ಗಳಿಗೆ ಚುನಾವಣೆ ಮುಗಿಯುವವರೆಗೂ ತಡೆ ನೀಡಬೇಕು. ಇನ್ನು ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯಬಾರದು ಎಂದು ಎಂದು ತಿಳಿಸಿದೆ. ಅಲ್ಲದೆ ಕಾರ್ಯಾದೇಶ ನೀಡಬಾರದು ಎಂದು ತಿಳಿಸಿದೆ.
ಇದನ್ನೂ ಓದಿ- ʼರಾಜ್ಯದಲ್ಲಿ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆʼ : ಶೆಟ್ಟರ್ ಶಾಕಿಂಗ್ ಹೇಳಿಕೆ
ಆಯೋಗದ ಈ ಆದೇಶದಿಂದ ಬೊಮ್ಮಾಯಿ ಅವರ ಬಂಡವಾಳ ಬಯಲಾಗಿದ್ದು, ಈಗಲಾದರೂ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು. ನಾವು ಕೆಪಿಸಿಸಿ ಅಧ್ಯಕ್ಷರ ನಿವಾಸದಲ್ಲಿ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲೂ ಇದೇ ಅಂಶಗಳಿಗೆ ಬೇಡಿಕೆ ಇಟ್ಟು, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆವು. ಈ ಅಕ್ರಮ ಟೆಂಡರ್ ಕರೆದಿರುವ ಎಲ್ಲಾ ಅಧಿಕಾರಿಗಳು, ಸಚಿವರ ವಿರುದ್ಧ ನಮ್ಮ ಸರ್ಕಾರ ತನಿಖೆಗೆ ಆದೇಶ ನೀಡಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗಿದೆ.
ಈ ಸರ್ಕಾರ ಟೆಂಡರ್ ಮಾಫಿಯಾದಲ್ಲಿ 16 ಸಾವಿರ ಕೋಟಿ ಅಕ್ರಮ ಟೆಂಡರ್ ನೀಡಿದ್ದು, ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದ್ದು, ಇದು ಬೊಮ್ಮಾಯಿ ಅವರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಬೊಮ್ಮಾಯಿ ಅವರಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.