"ಮೋದಿ ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಪರಿಣಾಮ ಬೀರಲ್ಲ"

 ಬಿಜೆಪಿಯ ರಾಜ್ಯ ನಾಯಕರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ, ಇದರಿಂದ ಮೋದಿ ಅವರನ್ನು ಹೆಚ್ಚು ಬಾರಿ ಕರೆದುಕೊಂಡು ಬಂದರೆ ನಮಗೆ ಲಾಭವಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಇದು ರಾಜ್ಯಕ್ಕೆ ನಡೆಯುತ್ತಿರುವ ಚುನಾವಣೆ, ದೇಶಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ಈಗ ಜನ ಚರ್ಚೆ ಮಾಡುತ್ತಿರುವುದು ರಾಜ್ಯದ ಮತ್ತು ಸ್ಥಳೀಯ ಸಮಸ್ಯೆಗಳನ್ನು ಮಾತ್ರ. ಜನರಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ, ಇದರಿಂದ ಮೋದಿ ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಪರಿಣಾಮ ಬೀರಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

Written by - Zee Kannada News Desk | Last Updated : May 6, 2023, 05:56 PM IST
  • ಬಿಜೆಪಿ ಎಂದೂ ಬಹುಮತದ ಬಲದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ
  • 2008 ಮತ್ತು 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಶಾಸಕರನ್ನು ಖರೀದಿಸಿ ನಡೆಸಿದ ಆಪರೇಷನ್ ಕಮಲದ ಮೂಲಕ
  • ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣವನ್ನು ರಾಜ್ಯಕ್ಕೆ ಪರಿಚಯಿಸಿದ್ದು ಬಿಜೆಪಿಯ ದೊಡ್ಡ ಸಾಧನೆ
"ಮೋದಿ ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಪರಿಣಾಮ ಬೀರಲ್ಲ" title=
file photo

ಮೈಸೂರು: ಬಿಜೆಪಿಯ ರಾಜ್ಯ ನಾಯಕರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ, ಇದರಿಂದ ಮೋದಿ ಅವರನ್ನು ಹೆಚ್ಚು ಬಾರಿ ಕರೆದುಕೊಂಡು ಬಂದರೆ ನಮಗೆ ಲಾಭವಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಇದು ರಾಜ್ಯಕ್ಕೆ ನಡೆಯುತ್ತಿರುವ ಚುನಾವಣೆ, ದೇಶಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ಈಗ ಜನ ಚರ್ಚೆ ಮಾಡುತ್ತಿರುವುದು ರಾಜ್ಯದ ಮತ್ತು ಸ್ಥಳೀಯ ಸಮಸ್ಯೆಗಳನ್ನು ಮಾತ್ರ. ಜನರಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ, ಇದರಿಂದ ಮೋದಿ ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಪರಿಣಾಮ ಬೀರಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಮೈಸೂರಿನಲ್ಲಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು

ಸಂವಾದದ ಸಾರಾಂಶ: 

-ಸುಭದ್ರ ಸರ್ಕಾರದಿಂದ ಮಾತ್ರ ರಾಜ್ಯದಲ್ಲಿ ಅಭಿವೃದ್ದಿ ಸಾಧ್ಯ. 2004ರಿಂದ 2013ರ ವರೆಗಿನ ಅವಧಿಯ ಅಭದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿತ್ತು. ಈ ಅನುಭವದ ಕಾರಣದಿಂದಾಗಿಯೇ ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಲಿದ್ದಾರೆ.

-ಬಿಜೆಪಿ ಎಂದೂ ಬಹುಮತದ ಬಲದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. 2008 ಮತ್ತು 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಶಾಸಕರನ್ನು ಖರೀದಿಸಿ ನಡೆಸಿದ ಆಪರೇಷನ್ ಕಮಲದ ಮೂಲಕ . ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣವನ್ನು ರಾಜ್ಯಕ್ಕೆ ಪರಿಚಯಿಸಿದ್ದು ಬಿಜೆಪಿಯ ದೊಡ್ಡ ಸಾಧನೆ.

-ರಾಜ್ಯದ ಮತದಾರರು ಈ ಬಾರಿ ಬಿಜೆಪಿಯನ್ನು ತಿರಸ್ಕರಿಸಲು ಇನ್ನೊಂದು ಪ್ರಮುಖ ಕಾರಣ ಭ್ರಷ್ಟಾಚಾರ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ರಾಜ್ಯದ ಸಚಿವರ ಭ್ರಷ್ಟಮುಖಗಳನ್ನು ಬಯಲಿಗೆಳೆದಿದ್ದಾರೆ. ಇದರ ಬೆನ್ನಿನ್ನಲ್ಲಿಯೇ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕೂಡಾ ಪ್ರಧಾನಿಯವರಿಗೆ ಪತ್ರ ಬರೆದು ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ಹೊರಹಾಕಿದ್ದಾರೆ. ಇದಾದ ನಂತರವೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭ್ರಷ್ಟಾಚಾರ ನಡೆದಿರುವುದಕ್ಕೆ ಪುರಾವೆ ಕೇಳುತ್ತಾರೆ. ಈ ಪತ್ರಗಳು ಪುರಾವೆ ಅಲ್ಲವೇ?

-ಪಿಎಸ್‌ಐ ನೇಮಕಾತಿಯಲ್ಲಿ ಎಡಿಜಿಪಿ ಸಹಿತವಾಗಿ ಸುಮಾರು 70 ಜನ ಜೈಲಿಗೆ ಹೋದರು, ಇದು ಸಾಕ್ಷಿ ಅಲ್ಲವಾ? ಸಂತೋಷ್‌ ಪಾಟೀಲ್‌ ಎಂಬ ಬಿಜೆಪಿ ಕಾರ್ಯಕರ್ತ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿ, ಲಂಚ ಕೊಡದ ಕಾರಣಕ್ಕೆ ಬಿಲ್‌ ಹಣ ನೀಡಲಿಲ್ಲ ಎಂದು ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದರು. ಇದು ಸಾಕ್ಷಿ ಅಲ್ಲವಾ?

-ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರು ಸೋಪ್‌ ಮತ್ತು ಡಿಟರ್ಜೆಂಟ್‌ ನಿಗಮದ ಅಧ್ಯಕ್ಷರಾಗಿದ್ದವರು. ಅವರ ಮಗ ಅಪ್ಪನ ಪರವಾಗಿ ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮನೆಯನ್ನು ಶೋಧ ಮಾಡಿದಾಗ ಸುಮಾರು 8 ಕೋಟಿ ಭ್ರಷ್ಟ ಹಣ ಸಿಗುತ್ತದೆ. ಈ ರೀತಿ ರೆಡ್‌ ಹ್ಯಾಂಡಾಗಿ ಸಿಕ್ಕಿಬೀಳುವುದು ದಾಖಲೆಗಳಿಗಿಂತ ಪ್ರಬಲ ಸಾಕ್ಷಿಗಳು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಬೀತಾಗಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು?

-ಇವೆಲ್ಲವೂ ಈ ಸರ್ಕಾರ 40% ಕಮಿಷನ್‌ ಸರ್ಕಾರ ಎಂಬುದನ್ನು ತೋರಿಸುತ್ತದೆ. ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ನೇಮಕಾತಿ, ವರ್ಗಾವಣೆ, ಯೋಜನೆಗೆ ಅನುಮೋದನೆ ನೀಡುವಾಗ, ಎನ್‌,ಒ,ಸಿ ನೀಡುವಾಗ ಲಂಚದಿಂದ ತುಂಬಿಹೋಗಿದೆ. ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಯಾವಾಗಲೂ ನಡೆದಿರಲಿಲ್ಲ.

-ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿತ್ತು ಎನ್ನುತ್ತಾರೆ. ಹಾಗಾದರೆ ಹಿಂದೆ 5 ವರ್ಷ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯಾವತ್ತಾದರೂ ಆರೋಪ ಮಾಡಿತ್ತಾ? ಕಳೆದ 3 ವರ್ಷ 10 ತಿಂಗಳಿಂದ ಬಿಜೆಪಿ ಅಧಿಕಾರದಲ್ಲಿದೆ, ಸರ್ಕಾರದ ಬಳಿ ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಬಹುದಾಗಿತ್ತು ಅಲ್ವಾ? ಈಗ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದರೆ ಯಾರಾದರೂ ನಂಬುತ್ತಾರ?

-ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾರಣ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳೇ ನಡೆದಿಲ್ಲ. ಈ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ಕೋಮುವಾದವನ್ನು ಬೆಳೆಸಿದೆ. ಹಿಜಾಬ್‌, ಹಲಾಲ್‌, ಆಜಾನ್‌, ಜಾತ್ರೆಗಳಲ್ಲಿ ಯಾವ ಧರ್ಮದವರು ವ್ಯಾಪಾರ ಮಾಡುತ್ತಾರೆ ಎನ್ನುವುದು ಸಮಸ್ಯೆಗಳೇ ಅಲ್ಲ, ಇವುಗಳನ್ನು ಅನಗತ್ಯವಾಗಿ ಸಮಸ್ಯೆಯ ರೀತಿ ಬಿಂಬಿಸಿದ್ರು. ಇದರಿಂದ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇವೆಲ್ಲ ಜನರಿಗೆ ಬೇಕಿದೆಯಾ?

-ನಾನು ಮುಖ್ಯಮಂತ್ರಿಯಾಗಿ ಬಡವರಿಗೆ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಈ ಸರ್ಕಾರ ಬಂದ ನಂತರ ಹೊಸದಾಗಿ ಒಂದೇ ಒಂದು ಮನೆ ಕಟ್ಟಿಕೊಟ್ಟಿರುವ ದಾಖಲೆ ಇದ್ದರೆ ಕೊಡಲಿ. ನಾವು ನೀಡಿದ್ದ ಮನೆಗಳಲ್ಲಿ ಕೆಲವಕ್ಕೆ ಬಾಕಿ ಹಣವನ್ನು ನೀಡಿಲ್ಲ. ನಾವು ಬಡವರಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದು ಯಾಕೆ?

-ನಾವು 2013ರಲ್ಲಿ ಜನರಿಗೆ 165 ಭರವಸೆಗಳನ್ನು ನೀಡಿದ್ದೆವು, 5 ವರ್ಷದಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಇದರ ಜೊತೆಗೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ನೀಡಿದ್ದೆವು. ಇಂದಿರಾ ಕ್ಯಾಂಟೀನ್‌, ಸಾಲಮನ್ನಾ, ಶೂಭಾಗ್ಯ, ಅನುಗ್ರಹ ಈ ಯಾವ ಕಾರ್ಯಕ್ರಮಗಳು ನಮ್ಮ ಪ್ರಣಾಳಿಕೆಯಲ್ಲಿ ಇರಲಿಲ್ಲ. ನಮ್ಮದು ನುಡಿದಂತೆ ನಡೆದಿದ್ದ ಸರ್ಕಾರ ಎಂದು ಹೇಳಿದರು.

-ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆಂದು ಹೇಳಲಿ ನೋಡೋಣ. ಮೋದಿ ಅವರು ಕಾಂಗ್ರೆಸ್‌ ನ ವಾರೆಂಟಿಯೇ ಮುಗಿದಿದೆ, ಇನ್ನು ಗ್ಯಾರೆಂಟಿಗಳನ್ನು ಈಡೇರಿಸುತ್ತಾರ ಎಂದು ಲಘುವಾಗಿ ಮಾತನಾಡುತ್ತಾರಲ್ವಾ, ಅವರೇ ಈ ಪ್ರಶ್ನೆಗೆ ಉತ್ತರ ನೀಡಲಿ. ಅನೇಕ ಬಾರಿ ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕರೆದಿದ್ದೆ. ಆದರೆ ಬೊಮ್ಮಾಯಿ ಅವರು ಸಮ್ಮತಿಸಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಇದನ್ನೂ ಓದಿ: ಬಂದ್‌ ಮಾರ್ಗ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ

-ಒಂದು ಕಡೆ ದ್ವೇಷದ ರಾಜಕಾರಣ, ಇನ್ನೊಂದು ಕಡೆ ಮಿತಿಮೀರಿದ ಭ್ರಷ್ಟಾಚಾರ ಮತ್ತು ಜನವಿರೋಧಿ ಆಡಳಿತ, ಇಷ್ಟೇ ಬಿಜೆಪಿ ಸಾಧನೆ. ಇದನ್ನು ಬಿಟ್ಟು ಬೇರೆ ಸಾಧನೆಗಳಿದ್ದರೆ ಹೇಳಲಿ ನೋಡೋಣ. ಎಂದು ಸವಾಲು ಹಾಕಿದರು

-ಯಡಿಯೂರಪ್ಪ ಅವರು ಕಳೆದ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೇ ಮಹದಾಯಿ ಯೋಜನೆ ಪೂರ್ಣ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಮಾಡಿದ್ರಾ? ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲಾ ಕಡೆ ಬಿಜೆಪಿ ಸರ್ಕಾರ ಇದೆ. ಯಾಕೆ ಮಹದಾಯಿ ಯೋಜನೆ ಮೂಲೆ ಸೇರಿದೆ? ಇವತ್ತಿನ ವರೆಗೆ ಮೇಕೆದಾಟು ಯೋಜನೆಗೆ ಅನುಮೋದನೆ ಕೊಟ್ಟಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರದ ಅಧಿಸೂಚನೆ ಪ್ರಕಟಿಸಿಲ್ಲ. ಈ ಸರ್ಕಾರ ಯಾವುದನ್ನು ಮಾಡಿದೆ? ಎಂದು ಅವರು ವಾಗ್ದಾಳಿ ನಡೆಸಿದರು.

-ನರೇಂದ್ರ ಮೋದಿ ಅವರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಆನ್‌ ಲೈನ್‌ ಭಾಷಣ ಮಾಡುವಾಗ, ಕರ್ನಾಟಕದಲ್ಲಿ ಕಾಂಗ್ರೆಸ್‌ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಒಂದು ವೇಳೆ ಈಡೇರಿಸಿದರೂ ಕರ್ನಾಟಕ ಸಾಲಗಾರ ರಾಜ್ಯವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಅವರು ಪ್ರಧಾನ ಮಂತ್ರಿಗಳು, ಅವರು ಬೇರೆ ರಾಜ್ಯಗಳ ಬಗ್ಗೆ ಮಾತನಾಡುವಾಗ ದೇಶದ ಸ್ಥಿತಿ ಏನಾಗಿದೆ ಎಂದು ನೋಡಿಕೊಳ್ಳಬೇಕಿತ್ತು ಎಂದು ಕಿಡಿ ಕಾರಿದರು.

-ಸ್ವಾತಂತ್ರ್ಯ ನಂತರದಿಂದ ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಕೊನೆಯವರೆಗೆ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ. ಇಂದು ದೇಶದ ಮೇಲಿರುವ ಸಾಲ 155 ಲಕ್ಷ ಕೋಟಿ ಆಗಿದೆ. ಮೋದಿ ಅವರು 9 ವರ್ಷದಲ್ಲಿ ಸುಮಾರು 102 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್‌ ವರೆಗೆ ಇದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ. ಇಂದು ರಾಜ್ಯದ ಮೇಲೆ 5 ಲಕ್ಷದ 64 ಸಾವಿರ ಕೋಟಿ ಸಾಲ ಇದೆ. ಅಂದರೆ 5 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯವನ್ನು ಮತ್ತು ಕೇಂದ್ರವನ್ನು ದಿವಾಳಿ ಮಾಡಿದ್ದು ಯಾರು? ಎಂದು ಅವರು ಪ್ರಶ್ನಿಸಿದರು.

-ಈ ವರ್ಷ ಅಸಲು ಮತ್ತು ಬಡ್ಡಿ ರೂಪದಲ್ಲಿ 56 ಸಾವಿರ ಕೋಟಿ ಹಣವನ್ನು ಸಾಲದ ಮರುಪಾವತಿ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿರುವಾಗ ಪ್ರತೀ ವರ್ಷ ಅಂದಾಜು 20,000 ಕೋಟಿ ಸಾಲ ಮಾಡುತ್ತಿದೆ, 5 ವರ್ಷದಲ್ಲಿ 1 ಲಕ್ಷದ 16 ಸಾವಿರ ಕೋಟಿ ಸಾಲ ಆಗಿತ್ತು. ಇದು ವಿತ್ತೀಯ ಹೊಣೆಗಾರಿಕೆ ನೀತಿಯ ಮಾನದಂಡಗಳ ಒಳಗಿತ್ತು. ಈಗ ಸರ್ಕಾರದ ಸಾಲ ಮಾನದಂಡಗಳ ಪ್ರಕಾರ ಇದೆಯಾ? ಎಂದು ಅವರು ಪ್ರಶ್ನಿಸಿದರು.

-ಬಿಜೆಪಿ ಬಂದ ಮೇಲೆ ಈ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಇದಕ್ಕೆ ಕೊರೊನಾ ರೋಗ ಬಂದಿದ್ದು ಕಾರಣ ಎನ್ನುತ್ತಾರೆ. ಕೊರೊನಾ ನಿರ್ವಹಣೆಗೆ 2 ವರ್ಷದಲ್ಲಿ 15,000 ಕೋಟಿ ಖರ್ಚು ಮಾಡಿದ್ದಾರೆ. ಈ ವೇಳೆ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹಾಗಾಗಿ ಇದು ಕಾರಣ ಆಗುವುದಿಲ್ಲ. ಈ ವರ್ಷ 78,000 ಕೋಟಿ ಸಾಲ ಮಾಡುತ್ತಿದ್ದಾರೆ. ಬಿಜೆಪಿ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿದೆ. ಇದೇ ಅವರ ಸಾಧನೆ ಎದು ಟೀಕಿಸಿದರು.

-ರಾಜ್ಯದ ಜನ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಮೋದಿ ಅವರು ಹೇಳಿದ್ದ ಅಚ್ಚೇದಿನ್‌ ಬಂದಿದೆಯಾ? ಅಡುಗೆ ಅನಿಲ, ಗೊಬ್ಬರ, ಕಬ್ಬಿಣ, ಸಿಮೆಂಟ್‌, ಅಡುಗೆ ಎಣ್ಣೆ ಇವುಗಳ ಬೆಲೆ ಎಷ್ಟಾಗಿದೆ? ಹಣದುಬ್ಬರದ 5 ರಿಂದ 6% ಜಾಸ್ತಿಯಾಗುತ್ತದೆ. ಆದರೆ ಪ್ರತಿಯೊಂದು ವಸ್ತುವಿನ ಬೆಲೆ 100 ರಿಂದ 200% ಬೆಲೆ ಹೆಚ್ಚಾಗಿದೆ. ಇದಕ್ಕೆ ಯಾರು ಕಾರಣ? ಎಂದು ಪ್ರಶ್ನಿಸಿದರು.

-ನಮ್ಮ ಪ್ರಣಾಳಿಕೆಯ ಮೂಲಕ ಜನರಿಗೆ 5 ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೇವೆ. ಅದರಲ್ಲಿ ಮೊದಲನೆಯದು ಎಲ್ಲಾ ಕುಟುಂಬಗಳಿಗೆ 200ಯುನಿಟ್‌ ಉಚಿತ್‌ ವಿದ್ಯುತ್‌, ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ಸಹಾಯಧನ, ಬಡಕುಟುಂಬದ ಪ್ರತೀ ಸದಸ್ಯನಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರ ಯುವಜನರಿಗೆ ತಿಂಗಳಿಗೆ 3000 ರೂಪಾಯಿ ಮತ್ತು ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1500 ರೂಪಾಯಿ ನಿರುದ್ಯೋಗ ಭತ್ಯೆ ಮತ್ತು ಜನಸಂಖ್ಯೆಯ ಶೇ.50 ರಷ್ಟು ಇರುವ ಹೆಣ್ಣುಮಕ್ಕಳಿಗೆ ಎಲ್ಲಾ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುತ್ತೇವೆ. ಇದರಿಂದ ಕೆಎಸ್‌ಆರ್‌ಟಿಸಿ ಗೆ ಆಗುವ ನಷ್ಟದ ಹಣವನ್ನು ಸರ್ಕಾರ ತುಂಬಿಕೊಡುತ್ತದೆ ಎಂದು ತಿಳಿಸಿದರು

-ಹಳೆ ಪಿಂಚಣಿ ಪದ್ದತಿಯನ್ನು ಮರುಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಪದ್ದತಿಯನ್ನು ಮರುಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಕೆ,ಎಸ್‌,ಆರ್‌,ಟಿ,ಸಿ ನೌಕರರಿಗೆ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತು ನೀಡುತ್ತೇವೆ ಎಂದು ಹೇಳಿದ್ದೇವೆ. ಹೀಗೆ ನಾವು ಬರೀ ಬಿಜೆಪಿ ಸರ್ಕಾರವನ್ನು ಟೀಕೆ ಮಾಡದೆ ನಾವೇನು ಮಾಡುತ್ತೇವೆ ಎಂಬ ಧನಾತ್ಮಕ ವಿಚಾರವನ್ನು ಜನರ ಮುಂದಿಟ್ಟಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ ಎಂದು ಹೇಳಿದರು,

-ಮಹಿಳೆಯರಿಗೆ 10 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಬೊಮ್ಮಾಯಿ ಅವರು ಹೇಳಿದ್ದರು, ಈಗ ಯಾಕೆ ಈ ವಿಚಾರ ಹೇಳುವುದನ್ನು ಬಿಟ್ಟಿದ್ದಾರೆ. ಈ ಯೋಜನೆ ಜಾರಿಯಾಗಿದ್ದರೆ ಹಣ ಎಲ್ಲಿಂದ ತರುತ್ತಿದ್ದರು? ನಾವು ಮನೆ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುತ್ತೇವೆ ಎಂದ ಮೇಲೆ ದೀಪಾವಳಿ, ಯುಗಾದಿ, ಗೌರಿ ಗಣೇಶ ಹಬ್ಬಕ್ಕೆ ಸಿಲಿಂಡರ್‌ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಹಣ ಎಲ್ಲಿಂದ ತರುತ್ತಾರಂತೆ? ಎಂದು ಅವರು ಪ್ರಶ್ನಿಸಿದರು.

-ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಆರ್ಥಿಕ ಸ್ಥಿತಿಯ ಬಗ್ಗೆ ಗೊತ್ತಿಲ್ಲ ಅನ್ನಿಸುತ್ತೆ, ಸಾಲ, ಅನಗತ್ಯ ಖರ್ಚು ಕಡಿಮೆ ಮಾಡಿ ಸಾಲ ಮರುಪಾವತಿಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋದರೆ ಇವೆಲ್ಲವನ್ನೂ ಕೊಡಲು ಆಗುತ್ತೆ. ಇದರಿಂದ ಜನ ಇಂದು ಕಾಂಗ್ರೆಸ್‌ ಗೆ ಇನ್ನೊಂದು ಅವಕಾಶ ನೀಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಮೇ 13 ರಂದು ಮತಎಣಿಕೆ ಆದ ಮೇಲೆ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬಂದೇ ಬರುತ್ತದೆ. ಇದು ನಾಡಿನ ಜನರ ನಾಡಿಮಿಡಿತ ನೋಡಿ ಹೇಳುತ್ತಿರುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್

-ನಾನು ಈ ಬಾರಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ. ದೂರದ ಕಾರಣಕ್ಕೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡ್‌ ಗೆ ಹೇಳಿದ್ದೆ. ಅವರು ವರುಣಾದಿಂದ ಸ್ಪರ್ಧಿಸಿ ಎಂದು ಅವಕಾಶ ನೀಡಿದ್ದಾರೆ. ಜನರೂ ಇದನ್ನೇ ಹೇಳುತ್ತಿದ್ದರು, ನಮ್ಮ ಯತೀಂದ್ರ ಕೂಡ ಇಲ್ಲಿಂದಲೇ ಸ್ಪರ್ಧಿಸಿ ಎಂದು ಹೇಳುತ್ತಿದ್ದರು, ನನ್ನ ಕೊನೆ ಚುನಾವಣೆಯನ್ನು ನನ್ನ ಹುಟ್ಟೂರಿನಿಂದಲೇ ನಿಂತು ಚುನಾವಣಾ ರಾಜಕಾರಣವನ್ನು ಕೊನೆಗೊಳಿಸೋಣ ಎಂದು ನಿರ್ಧರಿಸಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ.ವರುಣಾದ ಜನ ಜಾತಿವಾದಿಗಳಲ್ಲ, ಇದರಿಂದಲೇ ನನ್ನ ಪುತ್ರ ಯತೀಂದ್ರಗೆ 59,000 ಮತಗಳ ಲೀಡ್‌ ಬಂದಿದ್ದು. 2008ರಲ್ಲಿ 28,000, 2013ರಲ್ಲಿ 31,000 ಲೀಡ್‌ ಬರಲು ಸಾಧ್ಯವಾಗುತ್ತಿತ್ತಾ? ಈ ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ವಿಷ ಹಾಕಲು ಆರಂಭಿಸಿದ್ದಾರೆ. ಆದರೆ ಜನ ಅವರ ಈ ಷಡ್ಯಂತ್ರವನ್ನು ಮೆಟ್ಟಿ ನೂರಕ್ಕೆ ನೂರು ಹಿಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಮೂಡಿದೆ ಎಂದರು.

-ನನ್ನ ಮೊಮ್ಮಗ ನನ್ನ ರಾಜಕೀಯ ಉತ್ತರಾಧಿಕಾರಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾಮಪತ್ರ ಸಲ್ಲಿಸುವ ದಿನ ಕುತೂಹಲದಿಂದ ಆತ ಬಂದಿದ್ದಾನೆ. ಆತನಿಗಿನ್ನೂ 17 ವರ್ಷ ವಯಸ್ಸು. ಮುಂದೆ ಆಸಕ್ತಿ ಮೂಡಿದರೆ ರಾಜಕೀಯಕ್ಕೆ ಬಂದರೂ ಬರಬಹುದು. ಅದು ಅವನ ಶಕ್ತಿ-ಸಾಮರ್ಥ್ಯ. ಇದನ್ನೆಲ್ಲ ದೊಡ್ಡ ವಿಷಯವಾಗಿ ಬಿಂಬಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News